ಬೆಂಗಳೂರು: ಕರ್ನಾಟಕದ ಹಿಜಾಬ್ ವಿವಾದ (Hijab Row) ತೀವ್ರಗೊಂಡಿರುವಂತೆಯೇ ದೇಶಾದ್ಯಂತ ಈ ಕುರಿತು ಚರ್ಚೆಗಳು ತೀವ್ರಗೊಂಡಿವೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಕಾಲೇಜಿಗೆ ಯುವತಿಯರು ಬಿಕಿನಿ ಬೇಕಾದರೂ ಹಾಕಿಕೊಳ್ಳಬಹುದು ಎಂದು ಹೇಳಿಕೆ ನೀಡಿದ್ದಕ್ಕೆ ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಪ್ರತಿಕ್ರಿಯೆ ನೀಡಿದ್ದು, ಪ್ರತಿ ಸ್ಥಳಕ್ಕೂ ಅದರದ್ದೇ ಆದ ಡ್ರೆಸ್ ಕೋಡ್ ಇರುತ್ತದೆ. ನೀವು ಬೀಚ್ ಅಥವಾ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿಕಿನಿಯನ್ನು ಧರಿಸಬಹುದು. ಆದರೆ, ನೀವು ಅದನ್ನು ಶಾಲೆಯಲ್ಲಿ ಧರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೆಲವು ಶಿಕ್ಷಣ ಸಂಸ್ಥೆಗಳು ಹಿಜಾಬ್ ಧರಿಸಿರುವ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ್ದರಿಂದ ಇತ್ತೀಚಿನ ವಾರಗಳಲ್ಲಿ ರಾಜ್ಯದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಈ ವಾರ ಈ ಗಲಾಟೆ ಹಿಂಸಾತ್ಮಕ ತಿರುವು ಪಡೆದಿದ್ದರಿಂದ ಕರ್ನಾಟಕ ಸರ್ಕಾರವು ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳನ್ನು ಮೂರು ದಿನಗಳ ಕಾಲ ಮುಚ್ಚುವುದಾಗಿ ಘೋಷಿಸಿತು. ಈ ಮಧ್ಯೆ ಕರ್ನಾಟಕ ಹೈಕೋರ್ಟ್ ಶಾಲೆಗಳಿಗೆ ಶಾಲು, ಹಿಜಾಬ್ ಧರಿಸುವಂತಿಲ್ಲ ಎಂದು ಸೂಚನೆ ನೀಡಿದೆ.
ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದು, ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು. ಅದು ಬಿಕಿನಿಯಾಗಿರಲಿ, ಘೂಂಗ್‌ಹಾಟ್ ಆಗಿರಲಿ, ಜೀನ್ಸ್ ಆಗಿರಲಿ ಅಥವಾ ಹಿಜಾಬ್ ಆಗಿರಲಿ. ವಿನಾಕಾರಣ ಉಡುಗೆಯ ವಿಚಾರದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದರು.
#WATCH | On Karnataka hijab row, Lok Sabha MP from Mandya, Sumalatha Ambareesh says, “A lot of politics is being played to poison young, innocent & impressionable minds here…You wear a bikini on a beach or a pool, you don’t wear it in school. There is a code everywhere.” pic.twitter.com/SFwJNjIeSx
— ANI (@ANI) February 9, 2022
ಆ ಕಾಲೇಜು ಮೊದಲಿನಿಂದಲೂ ಕೆಲವು ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಯಾರು ಆಟವಾಡುತ್ತಿದ್ದಾರೆ? ಈ ಪ್ರಕರಣ ರಾಜಕೀಯ ಪಡೆದುಕೊಳ್ಳಲು ಬಹಳ ದೊಡ್ಡ ಪಾತ್ರವಿದೆ. ಈ ಪ್ರಕರಣದಲ್ಲಿ ರಾಜಕೀಯ ನಾಯಕರು ಕೈವಾಡ ಇದೆ ಎಂಬ ಅನುಮಾನವಿದೆ ಎಂದಿದ್ದಾರೆ.
ನಾವೇನು ಉಡುಗೆ ಧರಿಸಬೇಕು ಎಂಬುದು ನಮ್ಮ ಹಕ್ಕು ಎಂಬುದನ್ನು ಒಪ್ಪಲೇಬೇಕು. ಆದರೆ, ನೀವು ಬಿಕಿನಿಯನ್ನು ಬೀಚ್ ಅಥವಾ ಸ್ವಿಮ್ಮಿಂಗ್ ಪೂಲ್‌ನಲ್ಲಿ ಧರಿಸುತ್ತೀರ. ಅದನ್ನು ಶಾಲೆ- ಕಾಲೇಜಿನಲ್ಲಿ ಬಳಸಲು ಸಾಧ್ಯವಿಲ್ಲ. ನೀವು ಕೆಲಸ ಮಾಡುವ ಜಾಗದಲ್ಲಿ ಜೀನ್ಸ್ ಬಳಸಲು ಸಾಧ್ಯವಿಲ್ಲ. ಅಲ್ಲಿ ನೀವು ಕಂಪನಿ ಏನು ಹೇಳುತ್ತದೆಯೋ ಅದನ್ನು ಧರಿಸಬೇಕಾಗುತ್ತದೆ. ಎಲ್ಲ ಕಡೆಯೂ ಡ್ರೆಸ್ ಕೋಡ್ ಇರುತ್ತದೆ. ಅದನ್ನು ನಾವು ಪಾಲಿಸಲೇಬೇಕಾಗುತ್ತದೆ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನೆಗೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.
ಬಿಕಿನಿ ಸೇರಿದಂತೆ ಎಲ್ಲ ರೀತಿಯ ಉಡುಪುಗಳನ್ನು ಧರಿಸುವುದು ಮಹಿಳೆಯ ಹಕ್ಕು ಎಂಬುದಕ್ಕೆ ನನ್ನ ಬೆಂಬಲವಿದೆ. ತಮಗೆ ಇಷ್ಟವಾದ ಬಟ್ಟೆ ತೊಡುವ ಹಕ್ಕು ಈ ದೇಶದ ಮಹಿಳೆಯರಿಗೆ ಇದೆ. ಆದರೆ, ಎಲ್ಲಿ ಯಾವ ಬಟ್ಟೆ ಧರಿಸಬೇಕು ಎಂಬುದು ಎಲ್ಲರಿಗೂ ಗೊತ್ತಿರಬೇಕು ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಇದನ್ನೂ ಓದಿ: Karnataka High Court: ಶಾಲೆಗಳಿಗೆ ಶಾಲು, ಹಿಜಾಬ್ ಬೇಡ: ಮೌಖಿಕ ಸೂಚನೆ ಕೊಟ್ಟು ಫೆ 14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಹಿಜಾಬ್ ವಿಚಾರ ದೊಡ್ಡದು ಮಾಡಿ ಮಕ್ಕಳು ಮನಸ್ಸು ಹಾಳು ಮಾಡಿದ್ದಾರೆ: ರೇಣುಕಾಚಾರ್ಯ ಆಕ್ರೋಶ
Published On - 8:16 pm, Thu, 10 February 22