ಹೈಕೋರ್ಟ್ ಸೂಚನೆ ಜಾರಿಗೆ ಸಿದ್ಧತೆ: ಧಾರ್ಮಿಕ ಮುಖಂಡರ ಜೊತೆಗೆ ಪೊಲೀಸರ ಶಾಂತಿಸಭೆ, ಉನ್ನತ ಸಭೆ ಕರೆದ ಸಿಎಂ ಬೊಮ್ಮಾಯಿ
ಶೀಘ್ರ ಶಾಲಾ-ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂಬ ಹೈಕೋರ್ಟ್ ಮಧ್ಯಂತರ ಮೌಖಿಕ ಸೂಚನೆಯನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ಸಿದ್ಧತೆ ಆರಂಭಿಸಿದೆ.
ಬೆಂಗಳೂರು: ಕರ್ನಾಟಕದಲ್ಲಿ ಶೀಘ್ರ ಶಾಲಾ-ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಬೇಕು, ಅಂತಿಮ ಆದೇಶದವರೆಗೂ ಧಾರ್ಮಿಕ ಗುರುತುಗಳಿಂದ ವಿದ್ಯಾರ್ಥಿಗಳು ದೂರ ಉಳಿಯಬೇಕು ಎಂಬ ಹೈಕೋರ್ಟ್ ಮಧ್ಯಂತರ ಮೌಖಿಕ ಸೂಚನೆಯನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ಸಿದ್ಧತೆ ಆರಂಭಿಸಿದೆ. ಉನ್ನತ ಮಟ್ಟದ ಸಭೆ ಕರೆದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಲಾ-ಕಾಲೇಜು ಆರಂಭಿಸುವ ಕುರಿತು ಹಿರಿಯ ಅಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖೆಗಳ ಸಚಿವರ ಅಭಿಪ್ರಾಯ ಪಡೆಯಲು ನಿರ್ಧರಿಸಿದ್ದಾರೆ. ರೇಸ್ಕೋರ್ಸ್ ರಸ್ತೆಯ ಶಕ್ತಿಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ನಾಗೇಶ್ ಭಾಗಿಯಾಗಲಿದ್ದಾರೆ. ಸಭೆಯ ನಂತರ ಶಾಲಾ-ಕಾಲೇಜು ಆರಂಭಿಸುವ ಕುರಿತು ಮಾಹಿತಿ ನೀಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಧ್ಯಮಗಳಿಗೆ ತಿಳಿಸಿದರು.
ಕೋರ್ಟ್ ತೀರ್ಪಿನ ನಂತರ ಬೆಂಗಳೂರು ನಗರ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯ ಧಾರ್ಮಿಕ ಮುಖಂಡರ ಸಭೆ ನಡೆಸಿ, ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಲು ಮುಂದಾಗಿದ್ದಾರೆ. ಕೋರ್ಟ್ ಸೂಚನೆಯನ್ನು ಪ್ರಸ್ತಾಪಿಸಿ ಯಾವುದೇ ಪ್ರತಿಭಟನೆ ಅಥವಾ ಸಂಭ್ರಮಾಚರಣೆ ನಡೆಸುವಂತಿಲ್ಲ. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸುವರ ಜೊತೆಗೆ ನ್ಯಾಯಾಲಯದ ಆದೇಶ ಗೌರವಿಸುವಂತೆ ತಿಳಿಹೇಳುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಚಟವಟಿಕೆಗಳ ಮೇಲೆಯೂ ನಿಗಾ ಇರಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಹೇಳಿಕೆ ಹಾಕಿದರೆ ರೌಡಿಶೀಟ್ಗೆ ಸೇರಿಸಲಾಗುವುದು ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಎಚ್ಚರಿಕೆ ನೀಡಿದ್ದಾರೆ. ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುವವರನ್ನು ಕಮ್ಯುನಲ್ ಗುಂಡಾ ಎಂದು ಗುರುತಿಸಲಾಗುವುದು. ಇಂಥ ಪೋಸ್ಟ್ಗಳನ್ನು ಹಾಕುವವರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ಕೊಡಿ ಎಂದು ಮನವಿ ಮಾಡಿದ್ದಾರೆ.
ರಜೆ ಸಾಕು, ಪಾಠ ಶುರು ಮಾಡಿ: ಉಡುಪಿ ಶಾಸಕ
ಕರ್ನಾಟಕದಲ್ಲಿ ಹಿಜಾಬ್ ವಿವಾದಕ್ಕೆ ನಾಂದಿ ಹಾಡಿದ ಉಡುಪಿ ನಗರದಲ್ಲಿ ಪ್ರತಿಕ್ರಿಯಿಸಿರುವ ಶಾಸಕ ರಘುಪತಿ ಭಟ್, ನ್ಯಾಯಾಲಯದ ಮಧ್ಯಂತರ ಆದೇಶವನ್ನು ಸ್ವಾಗತಿಸಿದ್ದಾರೆ. ಕೋರ್ಟ್ ಉತ್ತಮ ಆದೇಶ ನೀಡಿದೆ. ನಾವೆಲ್ಲರೂ ಪಾಲಿಸೋಣ. ಮುಂದಿನ ವಾರದಿಂದ ಪ್ರತಿದಿನ ವಿಚಾರಣೆ ನಡೆಯುತ್ತದೆ ಎಂದು ಕೋರ್ಟ್ ತಿಳಿಸಿದೆ. ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಈ ಆದೇಶ ನೀಡಿದೆ. ಮುಂದಿನ ಒಂದು ತಿಂಗಳಿನಲ್ಲಿ ಪರೀಕ್ಷೆ ಆರಂಭವಾಗಲಿದೆ. ಇನ್ನೂ ಹೆಚ್ಚು ರಜೆ ನೀಡಿದರೆ ಮಕ್ಕಳ ಭವಿಷ್ಯ ಕ್ಕೆ ತೊಂದರೆ ಆಗುತ್ತದೆ ಎಂಬ ಹಿನ್ನಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಹಿಂದೆ ನಡೆದ ಘಟನೆಗಳನ್ನು ಮರೆಯೋಣ. ಕಾಲೇಜು ಪ್ರಾರಂಭಿಸಲು ಸಹಕರಿಸೋಣ ಎಂದು ಕರೆ ನೀಡಿದ್ದಾರೆ. ನಮ್ಮ ಧಾರ್ಮಿಕ ಆಚರಣೆಗಳನ್ನು ಮನೆಯಲ್ಲಿ ಆಚರಿಸೋಣ. ಕರ್ನಾಟಕದ ಹಿಜಾಬ್ ವಿವಾದ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಚರ್ಚೆ ಆಗಿದೆ. ನಾವು ಒಟ್ಟಿಗಿದ್ದೇವೆ ಎಂಬ ಸಂದೇಶ ನೀಡೋಣ. ಶಾಲೆಗಳಲ್ಲಿ ಹಿಜಾಬ್ ಬೇಡ, ಕೇಸರಿ ಶಾಲೂ ಬೇಡ ಎಂದು ಮನವಿ ಮಾಡಿದರು.
ಇದನ್ನೂ ಓದಿ: Karnataka High Court: ಶಾಲೆಗಳಿಗೆ ಶಾಲು, ಹಿಜಾಬ್ ಬೇಡ: ಮೌಖಿಕ ಸೂಚನೆ ಕೊಟ್ಟು ಫೆ 14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಇದನ್ನೂ ಓದಿ: ಹಿಜಾಬ್ ವಿಚಾರ ದೊಡ್ಡದು ಮಾಡಿ ಮಕ್ಕಳು ಮನಸ್ಸು ಹಾಳು ಮಾಡಿದ್ದಾರೆ: ರೇಣುಕಾಚಾರ್ಯ ಆಕ್ರೋಶ
Published On - 6:26 pm, Thu, 10 February 22