ಬೆಂಗಳೂರಿನಲ್ಲಿ ನ. 2ರಿಂದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ; ಪ್ರಧಾನಿ ಮೋದಿಗೆ ಆಹ್ವಾನ
ನವೆಂಬರ್ 2, 3, 4ರಂದು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಈ ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕರೆಸುತ್ತೇವೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ನವೆಂಬರ್ 2, 3, 4ರಂದು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಈ ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (Narendra Modi) ಕರೆಸುತ್ತೇವೆ. ಉದ್ಯೋಗ ನೀಡು, ಉದ್ಯಮಿಯಾಗು ಎಂಬ ಕಾರ್ಯಕ್ರಮ ನಡೆಸಲಾಗುವುದು. ಬೆಳಗಾವಿಯಲ್ಲಿ ಫೆಬ್ರವರಿ 27ರಂದು ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ 5,000 ಪದವೀಧರರು ಪಾಲ್ಗೊಳ್ಳಲಿದ್ದಾರೆ. 2010ರಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿದಾಗ 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಬೆಂಗಳೂರಿನಲ್ಲಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಹೇಳಿದ್ದಾರೆ.
ಉದ್ಯೋಗ ನೀಡು, ಉದ್ಯಮಿಯಾಗು ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಈ ತಿಂಗಳ 27ರಂದು ಮಾಡಲಾಗುವುದು. ಅದರಲ್ಲಿ 5000 ಪದವೀಧರರು ಪಾಲ್ಗೊಳ್ಳಲಿದ್ದಾರೆ. ನಾನು ಕೈಗಾರಿಕೆ ಇಲಾಖೆ ತೆಗೆದುಕೊಂಡ ನಂತರ ರಾಜ್ಯಕ್ಕೆ ಅತಿ ಹೆಚ್ಚು ಬಂಡವಾಳ ಹರಿದು ಬಂದು ನಂಬರ್ ಒನ್ ರಾಜ್ಯವಾಗಿದೆ. ನವೆಂಬರ್ ಒಳಗಾಗಿ 50 ಸಾವಿರ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಜಮೀನು ಪಡೆದು, ಉದ್ಯಮ ಸ್ಥಾಪನೆ ಮಾಡದೇ ಇರುವವರ ಜಮೀನು ವಾಪಾಸ್ ಪಡೆಯಲಾಗುತ್ತಿದೆ. ಸುಮಾರು 1,000 ಎಕರೆ ಭೂಮಿಯನ್ನು ವಾಪಾಸ್ ಪಡೆಯಲಾಗುತ್ತಿದೆ. ಏಕಾಏಕಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾದರೆ ಕೋರ್ಟ್ ಮೆಟ್ಟಿಲು ಹತ್ತುತ್ತಾರೆ. ಎಸ್ಸಿ, ಎಸ್ಟಿಯವರಿಗೆ ಶೇ 75ರಷ್ಟು ಸಬ್ಸಿಡಿ ಕೊಡಲಾಗುತ್ತಿದೆ. ಆರ್ಥಿಕವಾಗಿ ದುರ್ಬಲವಾಗಿರುವವರಿಗೆ 2 ಎಕರೆ ಜಮೀನು ಶೇ 75ರಷ್ಟು ರಿಯಾಯಿತಿ ದರದಲ್ಲಿ ಜಮೀನು ನೀಡಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪಂಚಮಸಾಲಿ 3ನೇ ಪೀಠ ಸ್ಥಾಪನೆಗೆ ನಾನು ಅತಿಥಿಯಾಗಿ ಹೋಗುತ್ತೇನೆ. ವಚನಾನಂದ ಸ್ವಾಮೀಜಿ ಮುಂದೆ ನಿಂತು ಪೀಠ ಮಾಡುತ್ತಿದ್ದಾರೆ. ಹರಿಹರ ಪೀಠ ಇದ್ದರೂ ಕೂಡಲ ಸಂಗಮ ಪೀಠವನ್ನು ನಾವೇ ಸ್ಥಾಪನೆ ಮಾಡಿದ್ದೇವೆ. ನಮ್ಮ ಹಿಂದೂ ಧರ್ಮದಲ್ಲಿ ಸ್ವಾಮೀಜಿಗಳಿಗೆ ಉನ್ನತ ಸ್ಥಾನ ಇದೆ. ನಾವು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಸ್ವಾಮೀಜಿಗೆ ಗೌರವಿಸುತ್ತೇವೆ. ಯಾವುದೇ ಪೀಠ ರಾಜಕಾರಣಿಗಳ ಲಾಭಕ್ಕೆ ಹುಟ್ಟಿಕೊಂಡಿದೆ ಅನ್ನುವುದನ್ನು ನಾನು ಒಪ್ಪುವುದಿಲ್ಲ. ಇನ್ನಷ್ಟು ಪೀಠಗಳು ಹುಟ್ಟಿಕೊಂಡರೂ ಯಾವುದೇ ಸಮಸ್ಯೆ ಇಲ್ಲ. ನಾನು ತನು ಮನ ಧನದಿಂದ ಸಹಾಯ ಮಾಡುತ್ತೇನೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಕೇಸರಿ ಶಾಲು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ನಿರಾಣಿ, ನಮ್ಮ ಎಲ್ಲ ಹಿಂದೂ ಯುವಕರಿಗೆ ಕೇಸರಿ ಶಾಲು ಖರೀದಿಸುವ ಶಕ್ತಿ ಇದೆ. ಅವರೇ ಸ್ವತಃ ತಂದು ಹಾಕಿಕೊಳ್ಳುತ್ತಾರೆ. ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆ ವೈಯಕ್ತಿಕ ವಿಚಾರ. ಕೇಸರಿ ಶಾಲು ಖರೀದಿಸಿ ಹಾಕಿಕೊಳ್ಳುವ ಶಕ್ತಿ ನಮ್ಮ ಯುವಕರಿಗೆ ಇದೆ. ವಿವಾದ ಪ್ರಾರಂಭ ಆಗಿರೋದು ಬಿಜೆಪಿಯಿಂದ ಅಲ್ಲ, ಯಾವ ಪಕ್ಷದಿಂದ ಆಗ್ತಿದೆ ಅನ್ನೋದು ನಿಮಗೆ ಗೊತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಬಂಡವಾಳ ಹೂಡಲು ಫಿನ್ ಟೆಕ್ ಕಂಪನಿಗಳಿಗೆ ಆಹ್ವಾನ ನೀಡಿದ ಸಚಿವ ಮುರುಗೇಶ್ ನಿರಾಣಿ
ಪಂಚಮಸಾಲಿ 3ನೇ ಪೀಠವಾದರೆ ತಪ್ಪೇನಲ್ಲ, ಇದಕ್ಕೂ ನನಗೂ ಸಂಬಂಧವಿಲ್ಲ; ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ