15 ದಿನದೊಳಗೆ ಜಾಗತಿಕ ಹೂಡಿದಾರರ ಸಮಾವೇಶಕ್ಕೆ ದಿನಾಂಕ ನಿಗದಿ; ಸಚಿವ ಮುರುಗೇಶ್ ನಿರಾಣಿ ಘೋಷಣೆ
ದೇಶ-ವಿದೇಶಗಳಿಂದ ಕೈಗಾರಿಕೆ ಸ್ಥಾಪನೆ ಮಾಡಲು ಉದ್ಯಮಿಗಳಿಗೆ ಅಹ್ವಾನ ಮಾಡುವ ಮೂಲಕ 2022ರಲ್ಲಿ ಬೃಹತ್ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ತುಮಕೂರು: ಕರ್ನಾಟಕದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಹಾಗೂ ‘ ಉದ್ಯೋಗ ಕ್ರಾಂತಿಗೆ’ ನಾಂದಿ ಹಾಡಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ 15 ದಿನದೊಳಗೆ ದಿನಾಂಕ ನಿಗದಿ ಮಾಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಘೋಷಿಸಿದ್ದಾರೆ.
ಇಂದು ತುಮಕೂರಿನ ವಸಂತ ನರಸಪುರದ ಕೈಗಾರಿಕಾ ಪ್ರದೇಶದಲ್ಲಿರುವ ಪುಡ್ ಪಾಕ್೯ಗೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಸದ್ಯದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೈಗಾರಿಕಾ ಸಂಘ ಸಂಸ್ಥೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಲಾಗುವುದು. 15 ದಿನದೊಳಗೆ 2022ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ದಿನಾಂಕ ನಿಗದಿ ಮಾಡುವುದಾಗಿ ಹೇಳಿದರು.
ದೇಶ-ವಿದೇಶಗಳಿಂದ ಕೈಗಾರಿಕೆ ಸ್ಥಾಪನೆ ಮಾಡಲು ಉದ್ಯಮಿಗಳಿಗೆ ಅಹ್ವಾನ ಮಾಡುವ ಮೂಲಕ 2022ರಲ್ಲಿ ಬೃಹತ್ ಆಂದೋಲನ ಹಮ್ಮಿಕೊಳ್ಳಲಾಗುವುದು. ಕಳೆದ ಬಾರಿಯಂತೆ ಈ ಬಾರಿಯೂ ಹೂಡಿಕೆದಾರರ ಸಮಾವೇಶವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗುವುದು. ಈ ಬಾರಿ ಹೊಸದಾಗಿ 5 ಲಕ್ಷ ಉದ್ಯೋಗಗಳನ್ನು ನೀಡುವ ಗುರಿ ಇದೆ ಎಂದರು.
2011- 2012ರಲ್ಲಿ ಬೃಹತ್ ಕೈಗಾರಿಕಾ ಆಂದೋಲನ ನೆಡೆಸಿ ವಿವಿಧ ದೇಶಗಳಿಂದ ಉದ್ಯಮಿಗಳಿಗೆ ಅಹ್ವಾನ ನೀಡಿದ್ದೆವು. ಆಗ ಸಾವಿರಾರು ಉದ್ಯೋಗಿಗಳಿಗೆ ಕೆಲಸ ಸಿಕ್ಕಿತ್ತು. ಈ ಬಾರಿಯೂ ‘ಉದ್ಯೋಗ ಸೃಷ್ಟಿಗೆ’ ಮೊದಲ ಆದ್ಯತೆ ನೀಡಲಾಗುವುದು ಎಂದು ಮುರುಗೇಶ್ ನಿರಾಣಿ ಹೇಳಿದರು.
ಇಲ್ಲಿನ ಪುಡ್ ಪಾಕ್೯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಕೂಸಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಕೆಲಸವನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಅಧಿಕಾರಿಗಳಿಗೆ ಅಭಿನಂದಿಸುತ್ತೇನೆ. ಸುಮಾರು 105 ಎಕರೆ ಪ್ರದೇಶದಲ್ಲಿ ಪುಡ್ ಪಾರ್ಕ್ ಕೈಗಾರಿಕಾ ವಿಸ್ತರಣೆ ಹೊಂದಿದೆ ₹1000 ಕೋಟಿ ಬಂಡವಾಳ ಹೂಡಿಕೆ ಮಾಡಿದೆ. ದೇಶ- ವಿದೇಶಗಳಿಂದ ಅನೇಕ ಕಂಪನಿಗಳು ಬಂದಿವೆ. ಮುಂದಿನ ದಿನಗಳಲ್ಲಿ ಇದರಿಂದ ಕೈಗಾರಿಕಾ ಬೆಳವಣಿಗೆಗೆ ಹೆಚ್ಚಿನ ಲಾಭವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಫುಡ್ ಪಾರ್ಕ್ನಲ್ಲಿ ಸ್ಥಳೀಯರಿಗೆ ಅವಕಾಶ ನೀಡಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ನಿರಾಣಿ, ಡಾ. ಸರೋಜಿನಿ ಮಹಿಷಿ ಅವರ ವರದಿಯ ಪ್ರಕಾರ ಸ್ಥಳೀಯರಿಗೆ ಶೇ.80 ರಷ್ಟು ಉದ್ಯೋಗಗಳನ್ನು ನೀಡಬೇಕು. ಒಂದು ವೇಳೆ ಯಾವುದಾದರೂ ಲೋಪದೋಷಗಳು ಉಂಟಾಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಬೇಕು ಎಂಬ ನಿಲುವಿಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ; 2022ರಲ್ಲಿ ಇನ್ವೆಸ್ಟ್ ಕರ್ನಾಟಕ: ಸಚಿವ ಮುರುಗೇಶ್ ನಿರಾಣಿ
(Karnataka Minister Murugesh Nirani will Announce Global Investors Meet 2022 Date within 15 Days)