School Reopen: ಕರ್ನಾಟಕದಲ್ಲಿ ಫೆ 14ರಿಂದ ಪ್ರೌಢಶಾಲೆ ಪುನಾರಂಭ: ಸಿಎಂ ಬಸವರಾಜ ಬೊಮ್ಮಾಯಿ
CM Basavaraj Bommai: 2ನೇ ಹಂತದಲ್ಲಿ ಕಾಲೇಜು ಪುನಾರಂಭದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರದಿಂದ (ಫೆ.14) ಎಲ್ಲ ಪ್ರೌಢಶಾಲೆಗಳು ಮತ್ತೆ ಬಾಗಿಲು ತೆರೆಯಲಿವೆ. ಮೊದಲ ಹಂತದಲ್ಲಿ 10ನೇ ತರಗತಿವರೆಗಿನ ಶಾಲೆಗಳನ್ನು ಆರಂಭಿಸಲಾಗುವುದು. 2ನೇ ಹಂತದಲ್ಲಿ ಕಾಲೇಜು ಪುನಾರಂಭದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ, ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
‘ಕಳೆದ ಕೆಲವು ದಿನಗಳಿಂದ ಶಾಲೆಗಳಲ್ಲಿ ಡ್ರೆಸ್ಕೋಡ್ಗೆ ಸಂಬಂಧಿಸಿದಂತೆ ಹಲವು ವಿವಾದಗಳು ನಡೆದಿವೆ. ಈ ವಿಚಾರ ಪ್ರಸ್ತುತ ಹೈಕೋರ್ಟ್ ಮೆಟ್ಟಿಲು ಏರಿದೆ. ಎರಡೂ ಕಡೆ ಬಿಸಿ ವಾತಾವರಣ ನಾವು ನೋಡಿದ್ದೇವೆ. ಎಲ್ಲರೂ ಶಾಂತಿಯಿಂದ ಇರಬೇಕು ಎಂದು ಮನವಿ ಮಾಡಿದ್ದೇವೆ. ಪ್ರಸ್ತುತ ಪ್ರಕರಣವು ಹೈಕೋರ್ಟ್ನಲ್ಲಿರುವುದರಿಂದ ನ್ಯಾಯಾಲಯದ ತೀರ್ಮಾನದ ಮೇಲೆ ಸರ್ಕಾರ ಮುಂದಿನ ಕ್ರಮ ಜರುಗಿಸುತ್ತದೆ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮಕ್ಕಳಲ್ಲಿ ಗೊಂದಲ ಕಡಿಮೆಯಾಗಬೇಕಿದೆ ಎಂದರು. ಹಲವೆಡೆ ಉದ್ವಿಗ್ನ ಪರಿಸ್ಥಿತಿಗೆ ಹೊರಗಿನವರ ಪ್ರಚೋದನೆಯೇ ಮುಖ್ಯ ಕಾರಣವಾಗಿದೆ. ಶಾಂತಿ ಕಾಪಾಡುವಂತೆ ಅವರಲ್ಲಿಯೂ ಮನವಿ ಮಾಡಿದ್ದೇನೆ’ ಎಂದರು.
ಪ್ರಸ್ತುತ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಸ್ತೃತ ನ್ಯಾಯಪೀಠ ಹಿಜಾಬ್ ಪ್ರಕರಣದ ವಿಚಾರಣೆ ಆರಂಭಿಸಿದೆ. ಸೋಮವಾರದಿಂದ ಪ್ರತಿದಿನ ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿಗಳು ಹೇಳಿದ್ದಾರೆ. ರಾಜ್ಯದ ಜನರು ಶಾಂತಿ ಕಾಪಾಡಬೇಕು, ಶಾಲಾ-ಕಾಲೇಜುಗಳು ಬೇಗ ಪುನಾರಂಭವಾಗಬೇಕು ಎಂದು ನ್ಯಾಯಾಲಯ ಹೇಳಿದೆ. ಯಾವುದೇ ಧಾರ್ಮಿಕ ಸಂಕೇತಗಳೊಂದಿಗೆ ಶಾಲೆಗೆ ಹೋಗುವುದು ಬೇಡ ಎಂಬ ನ್ಯಾಯಾಲಯದ ಸೂಚನೆಯನ್ನು ನಾವೆಲ್ಲರೂ ಪಾಲಿಸಬೇಕಿದೆ. ಮಕ್ಕಳಲ್ಲಿ ಯಾವುದೇ ಭೇದಭಾವ ಇರಬಾರದು. ಎಲ್ಲರೂ ಒಗ್ಗಟ್ಟಾಗಿ ವಿದ್ಯಾಭ್ಯಾಸ ಮಾಡಬೇಕು ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಸೋಮವಾರದಿಂದ ರಾಜ್ಯದ ಎಲ್ಲ ಹೈಸ್ಕೂಲ್ಗಳು ಕಾರ್ಯಾರಂಭ ಮಾಡಲಿವೆ. ಎರಡನೇ ಹಂತದಲ್ಲಿ ಪಿಯುಸಿ ಮತ್ತು ಡಿಗ್ರಿ ಕಾಲೇಜುಗಳನ್ನು ತೆರೆಯಲಾಗುವುದು. ಮುಂದಿನ ಕ್ರಮದ ಕುರಿತು ಚರ್ಚಿಸಲು ಶುಕ್ರವಾರ (ಫೆ 11) ಸಂಜೆ ಎಲ್ಲ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಡಿಸಿಪಿಐ ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಗಳ ಪರಿಸ್ಥಿತಿ ಅರಿತು, ಅಗತ್ಯ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಹೈಕೋರ್ಟ್ ಸೂಚನೆ ಜಾರಿಗೆ ಸಿದ್ಧತೆ: ಧಾರ್ಮಿಕ ಮುಖಂಡರ ಜೊತೆಗೆ ಪೊಲೀಸರ ಶಾಂತಿಸಭೆ, ಉನ್ನತ ಸಭೆ ಕರೆದ ಸಿಎಂ ಬೊಮ್ಮಾಯಿ
ಇದನ್ನೂ ಓದಿ: Karnataka High Court: ಶಾಲೆಗಳಿಗೆ ಶಾಲು, ಹಿಜಾಬ್ ಬೇಡ: ಮೌಖಿಕ ಸೂಚನೆ ಕೊಟ್ಟು ಫೆ 14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
Published On - 7:44 pm, Thu, 10 February 22