ಬೆಂಗಳೂರು: ನಗರದ ಅರಮನೆ ಮೈದಾನದ ಮುಖ್ಯದ್ವಾರ ಬಳಿ ಕಾಂಗ್ರೆಸ್ (Congress) ಆಯೋಜಿಸಿರುವ ‘ನಾ ನಾಯಕಿ’ ಸಮಾವೇಶದಲ್ಲಿ ಭಾಗವಹಿಸಲು ಬಂದವರಿಗೆ ಹಣ ನೀಡಲಾಗಿತ್ತು ಎಂದು ಬಿಜೆಪಿ (BJP) ಆರೋಪಿಸಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ, ‘ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂದ್ರೆ ಇದೇನಾ? ‘ನಾಯಕಿ’ ಕಾರ್ಯಕ್ರಮಕ್ಕೂ 2000 ರೂ. ಕೊಟ್ಟೇ ಕರೆತರಲಾಗಿತ್ತು! ಪ್ರಿಯಾಂಕಾ ಗಾಂಧಿ ನೇತೃತ್ವದ ಸಮಾವೇಶದಲ್ಲಿ ಹರಿದ ಕಾಂಚಾಣವೇ ಬಹುಶಃ ಕಾಂಗ್ರೆಸ್ಸಿಗರ ಗೃಹಲಕ್ಷ್ಮೀ ಯೋಜನೆ ಇರಬೇಕು’ ಎಂದು ಉಲ್ಲೇಖಿಸಿ ವ್ಯಂಗ್ಯವಾಡಿದೆ. ಜತೆಗೆ ಆರೋಪಕ್ಕೆ ಸಂಬಂಧಿಸಿದ ವಿಡಿಯೊ ತುಣುಕನ್ನು ಲಗತ್ತಿಸಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಯ ಮಹಿಳೆಯರಿಗೆ ಬೇಷರತ್ತಾಗಿ 2,000 ರೂ. ನೀಡಲಾಗುವುದು. ಇದಕ್ಕಾಗಿ ಗೃಹಲಕ್ಷ್ಮೀ ಯೋಜನೆ ರೂಪಿಸಲಾಗುವುದು ಎಂದು ‘ನಾ ನಾಯಕಿ’ ಸಮಾವೇಶದಲ್ಲಿ ಘೋಷಿಸಲಾಗಿತ್ತು. ಜತೆಗೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮೀಸಲಾತಿ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು.
ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂದ್ರೆ ಇದೇನಾ?
‘ನಾಯಕಿ’ ಕಾರ್ಯಕ್ರಮಕ್ಕೂ 2000 ರೂ. ಕೊಟ್ಟೇ ಕರೆತರಲಾಗಿತ್ತು! ಶ್ರೀಮತಿ @priyankagandhi ನೇತೃತ್ವದ ಸಮಾವೇಶದಲ್ಲಿ ಹರಿದ ಕಾಂಚಾಣವೇ ಬಹುಶಃ ಕಾಂಗ್ರೆಸ್ಸಿಗರ ಗೃಹಲಕ್ಷ್ಮಿ ಯೋಜನೆ ಇರಬೇಕು. #PriyankaKeFakePromises pic.twitter.com/MCleOTpeKn
— BJP Karnataka (@BJP4Karnataka) January 16, 2023
ಮಹಿಳೆಯರಿಗಾಗಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಬಿಜೆಪಿ ಸರ್ಕಾರ ನೀಡಿದ್ದ ಜಾಹೀರಾತಿನ ಬಗ್ಗೆ ಟೀಕಿಸಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಾವು ಕಾರ್ಯಕ್ರಮ ಹಮ್ಮಿಕೊಂಡ ಬಳಿಕ ಬಿಜೆಪಿಗೆ ಜ್ಞಾನೋದಯವಾಗಿದೆ ಎಂದು ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ವಿಡಿಯೊ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಅನ್ನು ಲೇವಡಿ ಮಾಡಿದೆ.
‘ನಾ ನಾಯಕಿ’ ಸಮಾವೇಶದ ಬಗ್ಗೆ ಆರೋಗ್ಯ ಸಚಿವ ಕೆ. ಸುಧಾಕರ್ ವ್ಯಂಗ್ಯವಾಡಿದ್ದು, ಪ್ರಿಯಾಂಕಾ ಗಾಂಧಿ ಹೋದಲ್ಲಿ ಕಾಂಗ್ರೆಸ್ ಗೆಲ್ಲಲ್ಲ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಹಿಂದೆ ಕಾಂಗ್ರೆಸ್ 8-10 ಸೀಟ್ ಗೆಲ್ಲುತ್ತಿತ್ತು. ಪ್ರಿಯಾಂಕಾ ಗಾಂಧಿ ಹೋದ ಮೇಲೆ 1-2 ಸ್ಥಾನ ಮಾತ್ರ ಗೆದ್ದಿದ್ದಾರೆ. ಕರ್ನಾಟಕದಲ್ಲಿಯೂ ಹೀಗೆಯೇ ಆಗಲಿದೆ ಎಂದು ನೆಲಮಂಗಲದಲ್ಲಿ ಕೆ. ಸುಧಾಕರ್ ಹೇಳಿದ್ದಾರೆ. ಮಹಿಳೆಯರಿಗಾಗಿ ನಮ್ಮ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಬಗ್ಗೆ ಜಾಹೀರಾತು ನೀಡಿದ್ದೇವೆ. ಕಾಂಗ್ರೆಸ್‌ನ ಪ್ರಣಾಳಿಕೆಗಳು ಘೋಷಣೆಯಾಗಿಯೇ ಉಳಿಯುತ್ತವೆ. ಚುನಾವಣೆಗೂ ಮುನ್ನವೇ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತೇವೆ. ನಮ್ಮ ಸರ್ಕಾರ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸುತ್ತದೆ ಎಂದು ಸುಧಾಕರ್ ಹೇಳಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ