JP Nadda Toure: ಇಂದಿನಿಂದ ಜೆಪಿ ನಡ್ಡಾ ಮೂರು ದಿನ ರಾಜ್ಯ ಪ್ರವಾಸ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇಂದಿನಿಂದ (ಫೆ.19-21) ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Election) ದಿನ ಎಣಿಕೆ ಪ್ರಾರಂಭವಾಗಿದ್ದು, ಅಖಾಡದ ಕಾವು ದಿನದಿಂದ ಹೆಚ್ಚುತ್ತಿದೆ. ರಾಜಕೀಯ ಪಕ್ಷಗಳು (Political Parties) ಪ್ರಚಾರದ ಭರಾಟೆಯಲ್ಲಿ ತೊಡಗಿಸಿಕೊಂಡಿದ್ದು, ಆರೋಪ ಪ್ರತ್ಯಾರೋಪ, ವಾಗ್ಯುದ್ದ, ಟೀಕೆ, ಜೊತೆಗೆ ಮತದಾರರಿಗೆ ಗಿಫ್ಟ್ ಮತ್ತು ಉಚಿತ ಭರವಸೆಗಳು ಹೆಚ್ಚುತ್ತಿವೆ. ರಾಜ್ಯ ಬಿಜೆಪಿ (BJP) ನಾಯಕರು ಸ್ಟಾರ್ ಕ್ಯಾಂಪೇನರ್ಗಳಾಗಿ ಕೇಂದ್ರ ನಾಯಕಾರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda), ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah), ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಕರೆಸುತ್ತಿದ್ದಾರೆ. ಅದರಂತೆ ಜೆಪಿ ನಡ್ಡಾ ಇಂದಿನಿಂದ (ಫೆ.19-21) ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.
ಕಾರ್ಯಕ್ರಮ ವೇಳಾಪಟ್ಟಿ ಪ್ರಕಾರ ನಡ್ಡಾ ಉಡುಪಿ ಮತ್ತು ಬೇಲೂರಲ್ಲಿ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ನಂತರ ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಚಿಕ್ಕಮಗಳೂರಿನಲ್ಲಿ ನಡೆಯುವ ಬೈಕ್ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ.
ಈ ವೇಳೆ ನಡ್ಡಾ ಶೃಂಗೇರಿ ಮಠಕ್ಕೆ ಭೇಟಿ ನೀಡಿ, ರಾತ್ರಿ ಅಲ್ಲಿಯೇ ತಂಗಲಿದ್ದಾರೆ. ಹಿಂದೂ ಪವಿತ್ರ ಸ್ಥಳ ಶೃಂಗೇರಿ ಶಾರದಾ ಮಠವು ನಾಲ್ಕು ಪ್ರಮುಖ ಪೀಠಗಳಲ್ಲಿ ಒಂದು. ಇದನ್ನು ಅದ್ವೈತ ವೇದಾಂತದ ಪ್ರತಿಪಾದಕರಾದ ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದ್ದಾರೆ. ಈ ಹಿಂದೆ ಶಾರದಾ ಮಠದ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿರ ಬ್ರಾಹ್ಮಣ ಸಮಾಜದ ಮೇಲೆ ಆರೋಪ ಮಾಡಿದ್ದರು. ಬಳಿಕ ನಡ್ಡಾ ಹಾಸನದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕರ್ತ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. ಹಾಗೆ ಮುಂಬರುವ ವಿಧಾನಸಭಾ ಚುನಾವಣೆಯ ಸಿದ್ಧತೆಗಾಗಿ ನಡ್ಡಾ, ಪಕ್ಷದ ವರಿಷ್ಠರೊಂದಿಗೆ ಸಭೆ ನಡೆಸಲಿದ್ದಾರೆ.
ಬಿಜೆಪಿ ಪಾಲಿಗೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಜೆಪಿ ಭದ್ರಕೋಟೆಯಾಗಿದ್ದು, ಅತಿ ದೊಡ್ಡ ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಸವಾಲಿನ ಕೆಲಸವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಲವು ಟ್ವಿಸ್ಟ್‌ಗಳ ನಂತರ ಬಹುಮತದ ಕೊರತೆಯ ಹೊರತಾಗಿಯೂ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಫರೇಷನ್ ಕಮಲ ಮುಖಾಂತರ ಜೆಡಿಎಸ್ ಮತ್ತು ಕಾಂಗ್ರೆಸ್‌ನ ಅನೇಕ ಶಾಸಕರನ್ನು ಬಿಜೆಪಿಗೆ ಕರೆತಂದರು. ಇದರ ಪರಿಣಾಮವಾಗಿ ಜುಲೈ 2022 ರಲ್ಲಿ ರಾಜ್ಯದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಯಿತು. 2023ರ ಏಪ್ರಿಲ್-ಮೇ ತಿಂಗಳಲ್ಲಿ ಕರ್ನಾಟಕ ಚುನಾವಣೆ ನಡೆಯುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:52 am, Sun, 19 February 23