ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಾಳೆ ಮಂಗಳೂರಿನಲ್ಲಿ ನಡೆಯುವ ಮಧ್ಯೆ ರಾಜ್ಯ ಕೋರ್ ಕಮೀಟಿ ಸಭೆ ಕೂಡ ನಡೆಯುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಪಕ್ಷದ ಮೂಲಗಳ ಪ್ರಕಾರ, ಅಶೋಕ್ ಗಸ್ತಿ ಅವರ ನಿಧನದಿಂದ ಖಾಲಿಯಾದ ರಾಜ್ಯಸಭಾ ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರ ಈ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಈ ಹಿಂದೆ ರಾಜ್ಯ ಕೋರ್ ಕಮಿಟಿ ಕಳಿಸಿದ ಹೆಸರುಗಳನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಮಂಡಳಿ ಬೇರೆ ಹೆಸರನ್ನು ಆಯ್ಕೆ ಮಾಡಿತ್ತು. ಅದೇ ರೀತಿ ಈ ಬಾರಿ ಕೂಡ ರಾಜ್ಯ ಕೋರ್ ಕಮಿಟಿ ಔಪಚಾರಿಕವಾಗಿ ಎರಡು ಹೆಸರು ಕಳಿಸುವ ಸಾಧ್ಯತೆ ಇದೆ. ಆದರೆ ಪಕ್ಷದ ಹೈ ಕಮಾಂಡ್ ಅದನ್ನು ಒಪ್ಪಿಕೊಳ್ಳುತ್ತದೆ ಎಂಬ ವಿಶ್ವಾಸ ರಾಜ್ಯದ ನಾಯಕರಿಗೂ ಇಲ್ಲ.
ನಾಳಿನ ಸಭೆಯಲ್ಲಿ ಲವ್ ಜಿಹಾದ್ ಕುರಿತಾಗಿ ಕಾನೂನು ತರಬೇಕೆ ಎಂಬ ವಿಚಾರ ಕೂಡ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಮಂತ್ರಿಮಂಡಳ ವಿಸ್ತರಣೆ ಅಥವಾ ಪುನರ್ ರಚನೆ ವಿಚಾರ ಚರ್ಚೆಗೆ ಬರುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ, ಮಂಗಳವಾರ ನಡೆದ ಎರಡು ಉಪ-ಚುನಾವಣೆಯ ಫಲಿತಾಂಶವನ್ನು ನೋಡಿಕೊಂಡು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಿನ ಹೆಜ್ಜೆ ಇಡುವ ಸಾಧ್ಯತೆ ಇರುವುದರಿಂದ ನಾಳೆ ಆ ವಿಚಾರದ ಚರ್ಚೆಯ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.