ಚಿಕ್ಕಮಗಳೂರು (ಮಾ.12): ಉಡುಪಿ-ಚಿಕ್ಕಮಗಳೂರು ಜಿಲ್ಲೆಯಲ್ಲಿ ಲೋಕಸಭಾ ಟಿಕೆಟ್‌ಗೆ (Udupi chikmagalur lok sabha Ticket) ಕಳೆದೊಂದು ತಿಂಗಳಿಂದ ಎರಡು ಪಕ್ಷದಲ್ಲಿ ಭಾರೀ ಕಸರತ್ತು ನಡೆದಿದೆ. ಕಾಂಗ್ರೆಸ್ನಿಂದ ಜಯಪ್ರಕಾಶ್ ಹೆಗ್ಡೆ ಸ್ಪರ್ಧೆ ಖಚಿತ ಎನ್ನಲಾಗುತ್ತಿದೆ. ಆದ್ರೆ, ಬಿಜೆಪಿಯಿಂದ ಯಾರು ಅಭ್ಯರ್ಥಿ ಎನ್ನುವುದೇ ಕುತೂಹಲ ಮೂಡಿಸಿದೆ. ಯಾಕಂದ್ರೆ, ಕ್ಷೇತ್ರದಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೆ (shobha karandlaje) ವ್ಯಾಪಕ ವಿರೋಧ ವ್ಯಕ್ತವಾಗಿದೆ. ಗೋ ಬ್ಯಾಕ್ ಶೋಭಾ ಕರಂದ್ಲಾಜೆ, ಬೇಡೆ-ಬೇಡ ಶೋಭಾ ಕರಂದ್ಲಾಜೆಗೆ ಟಿಕೆಟ್ ಬೇಡ ಎಂದು ಸ್ವತಃ ಬಿಜೆಪಿ ಕಾರ್ಯಕರ್ತರೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಹೈಕಮಾಂಡ್ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರಕ್ಕೆ ಶಿಫ್ಟ್ ಮಾಡಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿಟಿ ರವಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಆದರೆ, ಬೆಂಗಳೂರು ಉತ್ತರ ಶೋಭಾ ಕರಂದ್ಲಾಜೆ ಎನ್ನುವ ಸುದ್ದಿ ಹಬ್ಬಿದ ಬೆನ್ನಲ್ಲೇ ವಿರೋಧ ವ್ಯಕ್ತವಾಗಿದೆ. ಹೌದು…ಬೆಂಗಳೂರಿನಲ್ಲೂ ಬಿಜೆಪಿಯಿಂದ ಗೋಬ್ಯಾಕ್ ಶೋಭಾ ಪ್ರತಿಭಟನೆ ಶುರುವಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವಾರ ಸರ್ಕಲ್‌ನಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಗೋ ಬ್ಯಾಕ್ ಶೋಭಾ ಎಂದು ಪ್ರತಿಭಟನೆ ಮಾಡಿದ್ದು, ಯಾವುದೇ ಕಾರಣಕ್ಕೂ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದು. ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಸ್ಥಳೀಯರಿಗೆ ನೀಡುವಂತೆ ಆಗ್ರಹಿಸಿದ್ದಾರೆ. ಟಿಕೆಟ್ ಘೋಷಣೆಗೂ ಮುನ್ನವೇ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವುದು ಬಿಜೆಪಿಗೆ ದಿಕ್ಕುತೋಚದಂತಾಗಿದೆ.
ಇದನ್ನೂ ಓದಿ: ಸದಾನಂದಗೌಡಗೆ ಕರೆ ಮಾಡಿ ಬಿಗ್ ಶಾಕ್ ಕೊಟ್ಟ ಅಮಿತ್ ಶಾ, ಕುತೂಹಲ ಮೂಡಿಸಿದ ಡಿವಿಎಸ್ ನಡೆ!
ಇನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಶೋಭಾ ಕರಂದ್ಲಾಜೆಗೆ ನೀಡುತ್ತಿರುವುದರಿಂದ ಸ್ಥಳೀಯ ಬಿಜೆಪಿ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗೋಪಾಲಯ್ಯ ಸೇರಿದಂತೆ ಬೆಂಗಳೂರಿನ ಹಾಲಿ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳು ಸಹ ನವದೆಹಲಿಯಲ್ಲಿ ವರಿಷ್ಠರ ಜೊತೆಗಿನ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ ಬಿಜೆಪಿ ನಾಯಕರಿಗೆ ದೂರವಾಣಿ ಕರೆ ಮಾಡಿ ಶೋಭಾ ಕರಂದ್ಲಾಜೆಗೆ ಬೆಂಗಳೂರು ಉತ್ತರ ಟಿಕೆಟ್ ಬೇಡ ಎಂದಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದರೆ ಮೋದಿಗೋಸ್ಕರ ಕೆಲಸ ಮಾಡಿ ಲೋಕಸಭಾ ಚುನಾವಣೆ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಓರ್ವ ಬಿಜೆಪಿ ಶಾಸಕ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ವಿಪಕ್ಷ ನಾಯಕ ಆರ್ ಅಶೋಕ್ ಅವರು ಹಾಲಿ ಸಂಸದ ಸದಾನಂದಗೌಡ ಪರ ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಶೋಭಾ ಕರಂದ್ಲಾಜೆ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರಕ್ರಿಯಿಸಿರುವ ಅಶೋಕ್, ಸದಾನಂದ ಗೌಡರಿಗೆ ಈಗಲೂ ನಮ್ಮ ಬೆಂಬಲ ಇದೆ. ಸ್ಥಳೀಯ ನಾಯಕರಿಗೆ ಅವಕಾಶ ಕೊಡಿ ಎಂದು ಹೇಳಿದ್ದೇವೆ. ನಮ್ಮ ಆಯ್ಕೆ ಕೂಡ ಸದಾನಂದಗೌಡರೇ. ಉಳಿದ ನಿರ್ಧಾರ ಕೇಂದ್ರದ ನಾಯಕರದ್ದು. ಶೋಭಾ ಕರಂದ್ಲಾಜೆ ಅವರ ಸ್ಪರ್ಧೆ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಹೇಳಿದರು.
ಬೆಂಗಳೂರು ಉತ್ತರದ ಕ್ಷೇತ್ರದಲ್ಲಿ ಡಿವಿ ಸದಾನಂದಗೌಡ ಟಿಕೆಟ್ ಕೇಳಿದ್ದು ನಿಜ. ಅವರನ್ನು ಭೇಟಿಯಾಗಿದ್ದೂ ನಿಜ, ನಾವು ಅವರ ಪರ ಬ್ಯಾಟಿಂಗ್ ಮಾಡಿದ್ದೇವೆ. ಈಗಲೂ ನಾವು ಸದಾನಂದಗೌಡರಿಗೆ ಟಿಕೆಟ್ ಕೊಡಬೇಕೆಂದು ಹೇಳಿದ್ದೇವೆ. ಅಂತಿಮವಾಗಿ ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೊರಗಿನವರಿಗೆ ಟಿಕೆಟ್ ಬೇಡವೆಂದು ಬೆಂಗಳೂರು ಉತ್ತರದ ಶಾಸಕರು ಹೇಳಿದ್ದಾರೆ. ಹೀಗಾಗಿ ಹೈಕಮಾಂಡ್ ನಾಯಕರಿಗೆ ಅದನ್ನು ಹೇಳುತ್ತೇವೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ