ಸದಾನಂದಗೌಡಗೆ ಕರೆ ಮಾಡಿ ಬಿಗ್ ಶಾಕ್ ಕೊಟ್ಟ ಅಮಿತ್ ಶಾ, ಕುತೂಹಲ ಮೂಡಿಸಿದ ಡಿವಿಎಸ್ ನಡೆ!
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಕರ್ನಾಟಕದ ಹಾಲಿ ಸಂಸದರಿಗೆ ಒಬ್ಬರಾದ ಮೇಲೆ ಒಬ್ಬರಂತೆ ಶಾಕ್ ಕೊಡುತ್ತಿದೆ. ಮೈಸೂರಲ್ಲಿ ಸಂಸದ ಪ್ರತಾಪ ಸಿಂಹ ಅವರ ಬಳಿಕ ಇದೀಗ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗುವುದು ಪಕ್ಕಾ ಆಗಿದೆ. ಈ ಬಗ್ಗೆ ಸ್ವತಃ ಹೈಕಮಾಂಡ್ ಸದಾನಂದಗೌಡಗೆ ಕರೆ ಮಾಡಿ ಈ ಬಾರಿ ಟಿಕೆಟ್ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ.
ಬೆಂಗಳೂರು, (ಮಾರ್ಚ್ 13): 2 ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು(Bengaluru North loksabha constituency) ಪ್ರತಿನಿಧಿಸಿದ್ದ ಮಾಜಿ ಸಿಎಂ ಡಿ.ವಿ ಸದಾನಂದಗೌಡ (DV Sadananda Gowda )ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಮಿಸ್ ಆಗಿದೆ. ಈ ಬಗ್ಗೆ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರೇ ಸದಾನಂದಗೌಡ ಅವರಿಗೆ ಕರೆ ಮಾಡಿದ್ದು, ಅಭ್ಯರ್ಥಿ ಬದಲಾವಣೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ತಮಗೆ ಟಿಕೆಟ್ ಇಲ್ಲ ಎನ್ನುವುದನ್ನು ಸದಾನಂದಗೌಡರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಟಿಕೆಟ್ ಇಲ್ಲ ಎನ್ನುವುದನ್ನು ದೂರವಾಣಿ ಮೂಲಕ ಮಾಹಿತಿ ನೀಡಿದ ಬೆನ್ನಲ್ಲೇ ಸದಾನಂದಗೌಡ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದು, ಕ್ಷೇತ್ರದ ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ.
ಅಚ್ಚರಿ ಮೂಡಿಸಿದ ಡಿವಿಎಸ್ ಪೋಸ್ಟ್
— Sadananda Gowda ( Modi Ka Parivar ) (@DVSadanandGowda) March 13, 2024
10 ವರ್ಷ ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯನಾಗಿ ಸೇವೆ ಮಾಡಿದ್ದೇನೆ. ನಿಮ್ಮ ಕೆಲಸ ಮಾಡುವ ಅವಕಾಶ ಕೊಟ್ಟು ಆಶೀರ್ವದಿಸಿದ್ದೀರಿ. ಶಕ್ತಿಮೀರಿ ನಿಮ್ಮ ಸೇವೆ ಮಾಡುವ ಪ್ರಯತ್ನ ಮಾಡಿದ್ದೇನೆ. ನಿಮ್ಮ ಆಶೀರ್ವಾದದಿಂದ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದೇನೆ. ನಾನು ನಿಮ್ಮೆಲ್ಲರಿಗೂ ಚಿರಋಣಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಇನ್ಮುಂದೆಯೂ ನಿಮ್ಮ ಜತೆಗೆ ಇರುತ್ತೇನೆ. ಎಲ್ಲರಿಗೂ ನನ್ನ ಅಂತರಾಳದ ಹೃದಯ ತುಂಬಿದ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಆದ್ರೆ, ಇನ್ಮುಂದೆಯೂ ನಿಮ್ಮ ಜತೆಗೆ ಇರುತ್ತೇನೆ ಎಂದು ಬರೆದುಕೊಂಡಿರುವುದು ಅಚ್ಚರಿಕೆ ಕಾರಣವಾಗಿದೆ. ಡಿಕೆ ಶಿವಕುಮಾರ್ ಸುಳಿವು ನೀಡಿದಂತೆ ಸದಾನಂದಗೌಡ ಅವರು ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುತ್ತಾರಾ ಎನ್ನುವ ಚರ್ಚೆಗಳು ಶುರುವಾಗಿವೆ.
ಇದನ್ನೂ ಓದಿ: ಮಾಜಿ ಸಿಎಂ ಸದಾನಂದ ಗೌಡಗೆ ಕಾಂಗ್ರೆಸ್ ಆಹ್ವಾನ: ಅಚ್ಚರಿಯ ಹೇಳಿಕೆ ನೀಡಿದ ಡಿಕೆ ಶಿವಕುಮಾರ್
ಇದರೊಂದಿಗೆ ಸದಾನಂದಗೌಡ ಅವರಿಗೆ ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗುವುದಿಲ್ಲ ಎನ್ನುವುದು ಸ್ಪಷ್ಟವಾಗಿದ್ದು, ಈ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಸ್ಪರ್ಧಿಸುವ ಸಾಧ್ಯತೆಗಳಿವೆ.
ಬಿಜೆಪಿ ತೊರೆದಯ ಕೈ ಹಿಡಿಯುತ್ತಾರಾ ಡಿವಿಎಸ್?
ಮಾಜಿ ಸಿಎಂ ಸದಾನಂದ ಗೌಡ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಈ ಹಿಂದೆಯೂ ಹಲವು ಬಾರಿ ಊಹಾಪೋಹಗಳು ಹರಿದಾಡಿದ್ದವು. ಇದೀಗ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ಇದೀಗ ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಗುಸುಗುಸು ಕೇಳಿಬರುತ್ತಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ , ಡಿವಿಎಸ್ಗೆ ಆಹ್ವಾನ ನೀಡಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಸದಾನಂದ ಗೌಡ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಕಳೆದ ವರ್ಷದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಊಹೋಪೋಹಗಳು ಹರಿದಾಡಿದ್ದವು. ಇದೀಗ ಟಿಕೆಟ್ ಇಲ್ಲ ಎನ್ನುವುದು ಖುದ್ದು ಹೈಕಮಾಂಡ್ ಸ್ಪಷ್ಟಪಡಿಸಿದ್ದರಿಂದ ಸದಾನಂದಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
ಆತಂಕದಲ್ಲಿ ಹಾಲಿ ಸಂಸದರು
ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಯಾವುದೇ ಕ್ಷಣದಲ್ಲಾದರೂ ಬಿಡುಗೆಯಾಗಬಹುದು. ಹೀಗಾಗಿ ಹಾಲಿ ಸಂಸದರಿಗಂತೂ ಆತಂಕವಿದೆ. ಈಗ ಸದಾನಂದಗೌಡ ಅವರಿಗೆ ಟಿಕೆಟ್ ಇಲ್ಲ ಎನ್ನುವುದು ಖಚಿತವಾಗಿದ್ದು, ಇನ್ನುಳಿದಂತೆ ಹಾಲಿ ಸಂಸದರಾದ ಅನಂತಕುಮಾರ್ ಹೆಗ್ಡೆ, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ರಮೇಶ್ ಜಿಗಜಿಣಗಿ, ಗದ್ದಿಗೌಡರ್, ಅಣ್ಣಸಾಹೇಬ್ ಜೊಲ್ಲೆ, ಭಗವಂತ್ ಖೂಬಾ, ಕರಡಿ ಸಂಗಣ್ಣ ಸೇರಿದಂತೆ ಇನ್ನೂ ಕೆಲ ಹಾಲಿ ಸಂಸದರಿಗೆ ಟಿಕೆಟ್ ಸಿಗುತ್ತಾ ಅಥವಾ ಇಲ್ಲ ಎನ್ನುವುದು ಕುತೂಹಲ ಮೂಡಿಸಿದೆ.
ಈಗಾಗಲೇ ಕೆಲ ಸಂಸದರಿಗೆ ಟಿಕೆಟ್ ಮಿಸ್ ಆಗುವುದು ಕನ್ಫರ್ಮ್ ಅಂತಾ ಗೊತ್ತಾಗಿದೆ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ? ಯಾರನ್ನು ಕೈಬಿಡುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:48 pm, Wed, 13 March 24