ಆಡಳಿತ ಪಕ್ಷಕ್ಕೆ ಮುಜುಗರ; ಎಸ್.ವಿ. ರಂಗನಾಥ್ ಬದಲಾವಣೆಗೆ ಪಟ್ಟುಹಿಡಿದ ಹೆಚ್.ವಿಶ್ವನಾಥ್.. ಕಾರಣ ಏನು?
ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಪಡೆ ಅಧ್ಯಕ್ಷರನ್ನು ಈ ಕೂಡಲೇ ಬದಲಿಸಿ ಎಂದು ವಿಶ್ವನಾಥ್ ಡಿಸಿಎಂ ಅಶ್ವತ್ಥ್ ನಾರಾಯಣ ಅವರಲ್ಲಿ ಆಗ್ರಹಿಸಿದ್ದಾರೆ. ವಿಶ್ವನಾಥ್ ಅವರ ಮಾತಿಗೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಬೆಂಗಳೂರು: ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರನ್ನು ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಪಡೆ ಅಧ್ಯಕ್ಷ ಸ್ಥಾನದಿಂದ ತೆಗೆಯಬೇಕು ಎಂದು ಬಿಜೆಪಿ ಮೇಲ್ಮನೆ ಸದಸ್ಯ ಹೆಚ್.ವಿಶ್ವನಾಥ್ ಪಟ್ಟು ಹಿಡಿದು ಕೂತಿದ್ದಾರೆ. ಪರಿಷತ್ಗೆ ಬರುತ್ತಿದ್ದಂತೆಯೇ ತಕರಾರು ತೆಗೆದಿರುವ ಹೆಚ್.ವಿಶ್ವನಾಥ್ ನಡೆ ಆಡಳಿತ ಪಕ್ಷಕ್ಕೆ ಮುಜುಗರ ಉಂಟುಮಾಡಿದೆ.
ಅಪರಾಧಿ ಸ್ಥಾನದಲ್ಲಿದ್ದವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೀರಿ ಕೆಫೆ ಕಾಫಿ ಡೇ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿರುವ ಎಸ್.ವಿ. ರಂಗನಾಥ್ ಅವರ ಕುರಿತು ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಅಪರಾಧ ಮಾಡಿದ ಸಂಸ್ಥೆಯಲ್ಲಿದ್ದ, ಅಪರಾಧದಲ್ಲಿ ಭಾಗಿಯಾದ ವ್ಯಕ್ತಿಯನ್ನು ತಂದು ಅಧ್ಯಕ್ಷರನ್ನು ಮಾಡಿದ್ದೇಕೆ? ರಾಜ್ಯದಲ್ಲಿ ಬೇರೆ ಶಿಕ್ಷಣ ತಜ್ಞರು ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇವರು ಮೊದಲು ಅಧ್ಯಕ್ಷರಾಗಿದ್ದ ಸಂಸ್ಥೆಯ ಮುಖ್ಯಸ್ಥರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಈಗ ಆರೋಪ ಹೊತ್ತ ಸಂಸ್ಥೆಯ ಮಾಜಿ ಅಧ್ಯಕ್ಷರು. ಅತ್ತ ಪ್ರಧಾನಿ ಮೋದಿ ಹೊಸ ಶಿಕ್ಷಣ ನೀತಿ ಬಗ್ಗೆ ಮಾತನಾಡುವಾಗ ವಿವೇಕ ಇರಬೇಕು, ಮನಸ್ಸು ಶುದ್ಧ ಇರಬೇಕು ಎನ್ನುತ್ತಾರೆ. ನೀವು ಇಲ್ಲಿ ಆರೋಪ ಹೊತ್ತ ಸಂಸ್ಥೆಯವರನ್ನೇ ಕರೆದುಕೊಂಡು ಬಂದು ಅಧ್ಯಕ್ಷರನ್ನಾಗಿ ಮಾಡಿದ್ದೀರಿ ಎಂದು ಕಿಡಿಕಾರಿದ್ದಾರೆ.
ಹೆಚ್.ವಿಶ್ವನಾಥ್ ಮಾತಿಗೆ ಕಾಂಗ್ರೆಸ್, ಜೆಡಿಎಸ್ ಬೆಂಬಲ ಇದು ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರ. ಆದ್ರೆ ಸಚಿವರು ಈ ನೀತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಪಡೆ ಅಧ್ಯಕ್ಷರನ್ನು ಈ ಕೂಡಲೇ ಬದಲಿಸಿ ಎಂದು ವಿಶ್ವನಾಥ್ ಅವರು ಡಿಸಿಎಂ ಅಶ್ವತ್ಥ್ ನಾರಾಯಣ ಅವರಲ್ಲಿ ಆಗ್ರಹ ಮಾಡಿದ್ದಾರೆ. ವಿಶ್ವನಾಥ್ ಅವರ ಮಾತಿಗೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಒಬ್ಬ ಸೀಸನ್ಡ್ ರಾಜಕಾರಣಿ: ಹೆಚ್.ಡಿ ದೇವೇಗೌಡ