ಜನರಿಗೆ ಅನುಕೂಲವಾಗುವ ಕ್ರಮ ಕೈಗೊಂಡ್ರೆ ತಪ್ಪೇನು? -ನಿಗಮ ಸ್ಥಾಪನೆಗೆ ಸವದಿ ಸಮರ್ಥನೆ
ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವುದರಿಂದ ಸಾಮಾಜಿಕ ಸಮಾನತೆಗೆ ಅವಕಾಶವಾಗುತ್ತದೆ. ಈ ಸಮುದಾಯದಲ್ಲಿ ಅತ್ಯಂತ ಬಡವರು ಮತ್ತು ಹಿಂದುಳಿದವರಿದ್ದಾರೆ. ಅವರ ಸಮಗ್ರ ಅಭಿವೃದ್ಧಿಗೆ ಈ ನಿಗಮದ ಸ್ಥಾಪನೆ ಸೂಕ್ತ ಎಂದು ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ್ ಸವದಿ ಸಮರ್ಥಿಸಿದ್ದಾರೆ. ಅದೇ ಸಂದರ್ಭದಲ್ಲಿ ಮುಂದುವರಿದ ಜನಾಂಗದಲ್ಲಿ ಇರುವ ಬಡವರಿಗಾಗಿ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಿದರೆ ತಪ್ಪಿಲ್ಲ ಎಂದು ಸಹ ಹೇಳಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಕೈಗೊಂಡ ನಿರ್ಧಾರವನ್ನು ಸ್ವಾಗತಿಸಿದ ಸವದಿ ಮರಾಠ ಎಂದಾಕ್ಷಣ […]

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವುದರಿಂದ ಸಾಮಾಜಿಕ ಸಮಾನತೆಗೆ ಅವಕಾಶವಾಗುತ್ತದೆ. ಈ ಸಮುದಾಯದಲ್ಲಿ ಅತ್ಯಂತ ಬಡವರು ಮತ್ತು ಹಿಂದುಳಿದವರಿದ್ದಾರೆ. ಅವರ ಸಮಗ್ರ ಅಭಿವೃದ್ಧಿಗೆ ಈ ನಿಗಮದ ಸ್ಥಾಪನೆ ಸೂಕ್ತ ಎಂದು ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ್ ಸವದಿ ಸಮರ್ಥಿಸಿದ್ದಾರೆ. ಅದೇ ಸಂದರ್ಭದಲ್ಲಿ ಮುಂದುವರಿದ ಜನಾಂಗದಲ್ಲಿ ಇರುವ ಬಡವರಿಗಾಗಿ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಿದರೆ ತಪ್ಪಿಲ್ಲ ಎಂದು ಸಹ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಕೈಗೊಂಡ ನಿರ್ಧಾರವನ್ನು ಸ್ವಾಗತಿಸಿದ ಸವದಿ ಮರಾಠ ಎಂದಾಕ್ಷಣ ಕೇವಲ ಭಾಷೆಯ ಆಧಾರದಲ್ಲಿ ಪರಿಗಣಿಸುವುದು ಸರಿಯಲ್ಲ. ಇದು ಸಮುದಾಯದ ಅಭಿವೃದ್ಧಿಯ ವಿಷಯವಾಗಿರುವುದರಿಂದ ಮತ್ತು ಈ ನಿಗಮವನ್ನು ಸ್ಥಾಪಿಸಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಅತ್ಯಂತ ಸಮರ್ಪಕವಾಗಿದೆ ಎಂದು ಸವದಿ ತಿಳಿಸಿದ್ದಾರೆ.
ಲಿಂಗಾಯತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಸವದಿ ಮನವಿ
ವೀರಶೈವ ಲಿಂಗಾಯತ ಸಮುದಾಯದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಮತ್ತು ಹಿಂದುಳಿದವರು ಸೇರಿರುವುದರಿಂದ ಅವರಿಗೆ ಅನುಕೂಲ ಕಲ್ಪಿಸುವಂತಾಗಲು ಪ್ರತ್ಯೇಕ ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕೆಂದು ಲಕ್ಷ್ಮಣ ಸವದಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಭೇಟಿಯಾಗಿ ಮನವಿ ಮಾಡಿಕೊಂಡರು.
ಈ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವುದರಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಈ ಸಮುದಾಯದ ಬಡವರಿಗೆ ಮತ್ತು ಹಿಂದುಳಿದವರಿಗೆ ಅನುಕೂಲ ಸಿಗುವಂತಾಗಿ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಸವದಿ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಸಚಿವರಾದ ಸೋಮಣ್ಣ, ಬಿ.ಸಿ. ಪಾಟೀಲ್, ಸೇಡಂ ಶಾಸಕರಾದ ರಾಜಶೇಖರ್ ಪಾಟೀಲ್ ತೆಲ್ಕೂರ್ ಮುಂತಾದವರು ಉಪಸ್ಥಿತರಿದ್ದರು. ಮುಖ್ಯಮಂತ್ರಿಗಳ ಕಚೇರಿ ಮೂಲಗಳ ಪ್ರಕಾರ, ಯಡಿಯೂರಪ್ಪ ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಸ್ಥಾಪನೆ ವಿಚಾರದಲ್ಲಿ ಮುಕ್ತ ಮನಸ್ಸಿನಿಂದ ಇದ್ದಾರೆ.
‘ತಲತಲಾಂತರದಿಂದ ಈ ಜನಾಂಗದವರು ರಾಜ್ಯದಲ್ಲಿ ವಾಸಿಸುತ್ತಿದ್ದಾರೆ’ TV9 ಡಿಜಿಟಲ್ ಜೊತೆ ಮಾತನಾಡಿದ ಸವದಿ ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ತೆಗೆದುಕೊಂಡ ಸರ್ಕಾರದ ನಿರ್ಣಯವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಮುಂದೆ ಬರಲಿರುವ ಬೆಳಗಾವಿ ಲೋಕಸಭಾ ಮತ್ತು ಬಸವಕಲ್ಯಾಣ ವಿಧಾನ ಸಭಾ ಉಪ ಚುನಾವಣೆಗೋಸ್ಕರ ಈ ರೀತಿಯ ನಿರ್ಣಯ ತೆಗೆದುಕೊಳ್ಳಲಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸವದಿ, ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಖಾನಾಪುರದಲ್ಲಿ 95,000, ಬೆಳಗಾವಿ ದಕ್ಷಿಣದಲ್ಲಿ 50,000 ಕ್ಕಿಂತ ಹೆಚ್ಚಿನ ಮತಗಳ ಲೀಡ್ ಸಿಕ್ಕಿತ್ತು. ಅದೇ ರೀತಿ, ಬೇರೆ ಕಡೆ ಸಹ ನಮಗೆ ಲೀಡ್ ಸಿಕ್ಕಿತ್ತು. ಆಗ ನಾವು ಮರಾಠ ಅಭಿವೃದ್ದಿ ನಿಗಮದ ಘೋಷಣೆ ಮಾಡಿರಲಿಲ್ಲ. ಇದಕ್ಕೂ ನಿಗಮ ಸ್ಥಾಪನೆಗೂ ಸಂಬಂಧ ಇಲ್ಲ ಎಂದು ಹೇಳಿದರು. ತಲತಲಾಂತರದಿಂದ ಈ ಮರಾಠ ಜನಾಂಗದವರು ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಜನರಲ್ ಮೆರಿಟ್ನಲ್ಲಿ ಬರುವ ಈ ಸಮುದಾಯದ ಜನರಿಗೆ ಆರ್ಥಿಕವಾಗಿ ನೆರವು ನೀಡುವ ಕಾರ್ಯಕ್ರಮ ತಪ್ಪಲ್ಲ ಎಂದು ವಾದಿಸಿದರು.
ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ನೌಕರಿಯಲ್ಲಿ ಇರುವ ಮೀಸಲಾತಿಗೂ ನಿಗಮ ಸ್ಥಾಪನೆಗೂ ಸಂಬಂಧ ಇಲ್ಲ. ವೀರಶೈವ ಲಿಂಗಾಯತರ ಅಭಿವೃದ್ಧಿ ನಿಗಮ ಮಾಡೋದು ಎಂದರೆ ಇನ್ಪುಟ್ ಸಬ್ಸಿಡಿ ಕೊಟ್ಟ ಹಾಗೆ ಎಂದು ಹೇಳಿದರು. ನಾಳೆ ದಿನ ಮತ್ತೊಂದು ಮುಂದುವರಿದ ಜನಾಂಗ, ಒಕ್ಕಲಿಗರು ನಿಗಮದ ಬೇಡಿಕೆ ಮುಂದಿಟ್ಟರೆ ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರಕಾರ ಈಗಾಗಲೇ ಆರ್ಥಿಕವಾಗಿ ಹಿಂದುಳಿದವರಿಗೆ 10 ಪ್ರತಿಶತ ಮೀಸಲಾತಿ ತಂದಿದ್ದಾರೆ. ನಾವು ಒಂದು ಹೆಜ್ಜೆ ಮುಂದೆ ಹೋಗಿ ಜನರಿಗೆ ಅನುಕೂಲವಾಗುವ ಕ್ರಮ ತೆಗೆದುಕೊಂಡರೆ ಖಂಡಿತ ತಪ್ಪಲ್ಲ ಎಂದು ವಾದಿಸಿದ್ದಾರೆ.