ತುಮಕೂರು: ಕೋಡಿಹಳ್ಳಿ ಚಂದ್ರಶೇಖರ್ ಭಾರಿ ಹೋರಾಟಗಾರ. ಭಾರಿ ಹೋರಾಟಗಾರನಿಂದ ಇಂಥ ಪರಿಸ್ಥಿತಿ ಬಂದಿದೆ. ಚಂದ್ರಶೇಖರ್ ಮಾತು ಕೇಳಿಕೊಂಡು ಸಾರಿಗೆ ನೌಕರರು ಹೀಗೆ ಮಾಡುತಿದ್ದಾರೆ. ಪ್ರಯಾಣಿಕರು ನೌಕರರ ಕೊರಳಪಟ್ಟಿ ಹಿಡಿದು ಒದೀಬೇಕು ಎಂದು ತಿಪಟೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಸಿ. ನಾಗೇಶ ಮಾತನಾಡಿರುವ ಆಡಿಯೋ ತುಣುಕೊಂದು ವೈರಲ್ ಆಗಿದೆ.
ಇಂದು ನಡೆದ ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿ, ಪ್ರಯಾಣಿಕರು ಬಸ್ ಇಲ್ಲವೆಂದು ಶಾಸಕರಿಗೆ ಕರೆ ಮಾಡಿದ್ರು. ಪ್ರಯಾಣಿಕರು ಶಾಸಕರಿಗೆ ಕರೆ ಮಾಡಿ ಸಮಸ್ಯೆ ಹೇಳಿದ್ದರು. ಈ ವೇಳೆ ಮಾತನಾಡಿದ ತಿಪಟೂರು ಶಾಸಕ ಬಿ.ಸಿ. ನಾಗೇಶ ಮಾತಿನ ಆಡಿಯೋ ತುಣುಕು ಈಗ ಸದ್ದು ಮಾಡುತ್ತಿದೆ. ಕೋಡಿಹಳ್ಳಿ ಭಾರಿ ಹೋರಾಟಗಾರ. ಸಾರಿಗೆ ನೌಕರರಿಗೆ ಕೊರಳಪಟ್ಟಿ ಹಿಡಿದು ಒದೆಕೊಡಬೇಕು ಎಂದು ಹೇಳಿದ್ದ ನಾಗೇಶ-ಪ್ರಯಾಣಿಕರ ಜತೆಗಿನ ಸಂಭಾಷಣೆ ವೈರಲ್ ಆಗಿದೆ.
ನೌಕರರು ಪ್ರತಿಭಟನೆ ಮಾಡುವುದು ಸೂಕ್ತವಲ್ಲ
ಮತ್ತೊಂದೆಡೆ, ಸಾರಿಗೆ ನೌಕರರ ಮುಷ್ಕರದ ಬಗ್ಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಕಾರವಾರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಾರಿಗೆ ಮುಷ್ಕರದಿಂದ ಜನರು, ಇಲಾಖೆಗೆ ತೊಂದ್ರೆ ಆಗುತ್ತೆ. ನೌಕರರ 9 ಬೇಡಿಕೆಗಳ ಪೈಕಿ 8 ಬೇಡಿಕೆ ಸರ್ಕಾರ ಈಡೇರಿಸಿದೆ. ಇಷ್ಟಾದರೂ ನೌಕರರು ಮುಷ್ಕರ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಮುಷ್ಕರ ಕೈಬಿಟ್ಟು ಮತ್ತೆ ಕೆಲಸಕ್ಕೆ ಹಾಜರಾಗಿ. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಸಾರಿಗೆ ಇಲಾಖೆಗೆ 4,000 ಕೋಟಿ ರೂಪಾಯಿ ನಷ್ಟವಾಗಿದೆ. ನೌಕರರು ಪ್ರತಿಭಟನೆ ಮಾಡುವುದು ಸೂಕ್ತವಲ್ಲ. ಹಾಗಾಗಿ, ಮುಷ್ಕರ ಕೈಬಿಟ್ಟು ಮತ್ತೆ ಕೆಲಸಕ್ಕೆ ಹಾಜರಾಗಿ ಎಂದು ಸಚಿವ ಶಿವರಾಮ ಹೆಬ್ಬಾರ್ ಮನವಿ ಮಾಡಿಕೊಂಡಿದ್ದಾರೆ.
ಕೋಡಿಹಳ್ಳಿ ಉದ್ದೇಶ ಆರ್ಥಿಕತೆ ಕುಂಠಿತಗೊಳಿಸುವುದು
ಇನ್ನು ಮಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಸಾರಿಗೆ ನೌಕರರ ಬೇಡಿಕೆಯನ್ನು ಯಾರೊಬ್ಬರೂ ಒಪ್ಪುವುದಿಲ್ಲ. ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡಿದ್ರೆ, ನಂತರ ಎಲ್ಲಾ ನಿಗಮಗಳ ಸಿಬ್ಬಂದಿ ಬೇಡಿಕೆ ಇಡುತ್ತಾರೆ. ಬೇಡಿಕೆ 1 ಶೇಕಡದಷ್ಟಾದ್ರೂ ನ್ಯಾಯಬದ್ಧವಾಗಿರಬೇಕು. ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿ ವ್ಯವಸ್ಥೆ ನಡೆಯಲ್ಲ ಎಂದು ಹೇಳಿದ್ದಾರೆ.
ಸಾರಿಗೆ ಸಿಬ್ಬಂದಿ ಕೋಡಿಹಳ್ಳಿ ಜತೆ ಹೋದ್ರೆ ಸಾರಿಗೆ ಇಲಾಖೆ ಸಿಬ್ಬಂದಿಗೆ ಅನ್ಯಾಯ ಆಗುತ್ತದೆ. ಕೋಡಿಹಳ್ಳಿ ಉದ್ದೇಶ ಆರ್ಥಿಕತೆ ಕುಂಠಿತಗೊಳಿಸುವುದು. ಇದನ್ನು ಹೇಗೆ ಹಡೆಮುರಿ ಕಟ್ಟಬೇಕೆಂದು ಸರ್ಕಾರಕ್ಕೆ ಗೊತ್ತು. ರಾಜ್ಯದ ಜನ ಕೋಡಿಹಳ್ಳಿ ಚಂದ್ರಶೇಖರ್ ನಡೆ ಒಪ್ಪುವುದಿಲ್ಲ. ಜನರಿಗೆ ಅನ್ಯಾಯವಾದರೆ ಸರ್ಕಾರ ಸುಮ್ಮನೆ ಕೂರುವುದಿಲ್ಲ. ರಾಜ್ಯ ಸರ್ಕಾರ ಜನರಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತದೆ ಎಂದು ಮಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ: ಪರ್ಯಾಯ ವ್ಯವಸ್ಥೆ ಮಾಡಲಾಗಿದೆ, ಆತಂಕ ಬೇಡವೆಂದ ಸಾರಿಗೆ ಸಚಿವ ಲಕ್ಷ್ಮಣ ಸವದಿ
ಇದನ್ನೂ ಓದಿ: ಕೂಡಲೇ ಸಾರಿಗೆ ನೌಕರರ ಸಮಸ್ಯೆಯನ್ನು ಬಗೆಹರಿಸಿ: ವಿಪಕ್ಷ ನಾಯಕ ಸಿದ್ದರಾಮಯ್ಯ
Published On - 10:08 pm, Wed, 7 April 21