ಬೆಂಗಳೂರು: ಮುಖ್ಯಮಂತ್ರಿ ಅಧಿಕೃತ ನಿವಾಸದಲ್ಲಿ ಬಿ.ಎಸ್. ಯಡಿಯೂರಪ್ಪ ಜೊತೆ 40 ಶಾಸಕರು ಇಂದು (ಮಾರ್ಚ್ 22) ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ 6-7 ಸಚಿವರ ಕಾರ್ಯವೈಖರಿ ಬಗ್ಗೆ ದೂರು ನೀಡಿದ್ದಾರೆ. ಸಚಿವರು, ಅಧಿಕಾರಿಗಳನ್ನೊಳಗೊಂಡಂತೆ ಶಾಸಕರ ಜತೆ ಮಾತುಕತೆಯಲ್ಲಿ ಮಾರ್ಚ್ 25ರಂದು ಮತ್ತೊಮ್ಮೆ ಸಭೆ ನಡೆಸುವುದಾಗಿ ಭರವಸೆ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಜೊತೆ ನಡೆದ ಸಭೆಯಲ್ಲಿ ಮುಖ್ಯವಾಗಿ, ಪಕ್ಷಕ್ಕೆ ಮುಜುಗರ ತರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿರುದ್ಧ ಶಾಸಕರು ದೂರು ನೀಡಿದ್ದಾರೆ. ಯತ್ನಾಳ್ ವಿರುದ್ಧ ವರಿಷ್ಠರಿಗೆ ದೂರು ನೀಡಲು ಶಾಸಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಹಾಗೂ ಹೈಕಮಾಂಡ್ಗೆ ಲಿಖಿತ ದೂರು ಸಲ್ಲಿಕೆಗೆ ಸಿಎಂ ಆಪ್ತ ಶಾಸಕರು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಲಿಖಿತ ದೂರಿಗೆ 40ಕ್ಕೂ ಹೆಚ್ಚು ಶಾಸಕರು ಸಹಿ ಹಾಕಿದ್ದಾರೆ. ಇಂದು ವಿಧಾನಸಭೆ ಕಲಾಪದ ಅವಧಿಯಲ್ಲೇ ಕೆಲ ಶಾಸಕರು ಸಹಿ ಮಾಡಿದ್ದಾರೆ.
ಮುಖ್ಯಮಂತ್ರಿ ಭೇಟಿ ಬಳಿಕ ಮಾತನಾಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ , 40 ಬಿಜೆಪಿ ಶಾಸಕರು ಸಿಎಂ ಭೇಟಿಯಾಗಿ ಚರ್ಚೆ ಮಾಡಿದ್ದೇವೆ. ಕ್ಷೇತ್ರದ ಅಭಿವೃದ್ಧಿ ವಿಚಾರ ಕುರಿತು ಸಿಎಂ ಜತೆ ಚರ್ಚಿಸಿದ್ದೇವೆ. ಮಾರ್ಚ್ 25ರಂದು ಮತ್ತೊಮ್ಮೆ ಭೇಟಿಯಾಗೋಣ, ಅಭಿವೃದ್ಧಿ ವಿಚಾರದಲ್ಲಿ ಎಲ್ಲ ರೀತಿಯಲ್ಲಿ ಸಹಕರಿಸುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಸೂಚನೆ ನೀಡಿದ್ದಾರೆ. ಸಹಕಾರ ಕೊಡುವುದಾಗಿ ನಾವೆಲ್ಲರೂ ಹೇಳಿ ಬಂದಿದ್ದೇವೆ. ಯತ್ನಾಳ್, ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಮ್ಮ ಮುಖ್ಯಮಂತ್ರಿಗಳಿಗೆ ಯಾಕ್ರೋ ಬ್ಲ್ಯಾಕ್ಮೇಲ್ ಮಾಡ್ತೀರಾ?: ಕಾಂಗ್ರೆಸ್ ಶಾಸಕರಿಗೇ ಗದರಿದ ಡಿ.ಕೆ. ಶಿವಕುಮಾರ್
Published On - 11:39 pm, Mon, 22 March 21