ಜಾತಿ ಗಣತಿ: ಸುಧಾ ಮೂರ್ತಿ ದಂಪತಿ ಖಾಸಗಿ ಮಾಹಿತಿ ಬಹಿರಂಗ; ಶಾಸಕ ಸುರೇಶ್ ಕುಮಾರ್ ಕಿಡಿ
ಜಾತಿ ಗಣತಿಯಲ್ಲಿ ಭಾಗವಹಿಸಲ್ಲ ಎಂದು ಇನ್ಪೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರು ಬರೆದಿದ್ದ ಪತ್ರ ವೈರಲ್ ಆಗಿರುವ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಕಿಡಿ ಕಾರಿದ್ದಾರೆ. ಜನರ ಖಾಸಗಿ ಸ್ವಾತಂತ್ರ್ಯ ಉಲ್ಲಂಘಿಸೋದಾಗಿ ಭರವಸೆ ನೀಡಿದ್ದು ಮಾತ್ರವಲ್ಲದೇ, ಹೈಕೋರ್ಟ್ನಲ್ಲೂ ಈ ಬಗ್ಗೆ ತಿಳಿಸಿದ್ದ ಸರ್ಕಾರ ಈಗ ಮಾತ ತಪ್ಪಿದೆ ಎಂದು ಅವರು ಆರೋಪಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 16: ರಾಜ್ಯದಲ್ಲಿ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದಿಂದ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ (Caste Census) ನಡೆಯುತ್ತಿದ್ದು, ಸಾರ್ವಜನಿಕರು ನೀಡುವ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು. ಹೈಕೋರ್ಟ್ ಮುಂದೆ ಈ ವಿಚಾರ ಬಂದಾಗಲೂ ಎಲ್ಲರ ಖಾಸಗಿ ಸ್ವಾತಂತ್ರ್ಯವನ್ನು ರಕ್ಷಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಈ ವಿಚಾರದಲ್ಲಿ ರಾಜ್ಯ ಸರ್ಕಾರ ವಂಚಿಸಿದೆ. ನ್ಯಾಯಾಂಗಕ್ಕೆ ಕೊಟ್ಟಿರುವ ಭರವಸೆಯನ್ನು ಉಲ್ಲಂಘಿಸಿದೆ ಎಂದು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅರೋಪಿಸಿದ್ದಾರೆ.
ಇನ್ಪೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರು ಸಮೀಕ್ಷೆಯ ಸಂದರ್ಭದಲ್ಲಿ ಅವರ ಮನೆಗೆ ಬಂದಿದ್ದ ತಂಡಕ್ಕೆ ನೀಡಿರುವ ಪತ್ರ ಸಾಮಾಜಿಕ ಜಾಲತಾಣವೂ ಸೇರಿದಂತೆ ಎಲ್ಲ ಕಡೆ ಹರಿದಾಡುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ. ನಾರಾಯಣ ಮೂರ್ತಿ ಮತ್ತು ಕುಟುಂಬದವರು ಸಹಿ ಮಾಡಿರುವ ಪತ್ರ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಸಮೀಕ್ಷೆಯ ಮಾಹಿತಿಯನ್ನು ಗೌಪ್ಯವಾಗಿ ಇಡುತ್ತೇವೆಂದು ಸರ್ಕಾರ ಹೇಳಿರುವಾಗ ಇದು ಜನರಿಗೆ ಮಾಡಿದ ವಂಚನೆ ಅಲ್ಲವೆ? ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾರಾಯಣಮೂರ್ತಿ ಕುಟುಂಬದವರು ನೀಡಿರುವ ಪತ್ರದ ಖಾಸಗಿತನಕ್ಕೆ ಗೌರವ ಕೊಟ್ಟಿಲ್ಲ. ಆ ಪತ್ರ ಬಹಿರಂಗವಾಗಿರುವ ಬಗ್ಗೆ ರಾಜ್ಯಕ್ಕೆ ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸುತ್ತೇನೆ. ಇದು ಸರ್ಕಾರದ ಅಸಮರ್ಥತೆಯನ್ನು ಅಥವಾ ರಾಜ್ಯಕ್ಕೆ ಸರ್ಕಾರ ಸುಳ್ಳು ಹೇಳಿದೆ ಎಂಬುದನ್ನು ಸಾಬೀತುಗೊಳಿಸಿರುವ ವಿದ್ಯಮಾನ ಎಂದು ಸುರೇಶ್ ಕುಮಾರ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಜಾತಿ ಗಣತಿಗೆ ಮಾಹಿತಿ ನೀಡಲು ನಿರಾಕರಿಸಿದ ನಾರಾಯಣ ಮೂರ್ತಿ, ಸುಧಾಮೂರ್ತಿ ಕೊಟ್ಟ ಕಾರಣವಿದು
ನಾರಾಯಣ ಮೂರ್ತಿ ಹಾಗೂ ಸುಧಾ ನಾರಾಯಣ ಮೂರ್ತಿ ದಂಪತಿ ಜಾತಿ ಸಮೀಕ್ಷೆಗೆ ಬರುವ ಸಿಬ್ಬಂದಿಗೆ ಮಾಹಿತಿ ನೀಡಲು ಹಿಂದೇಟು ಹಾಕಿದ್ದರು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಮ್ಮ ಕೆಲವು ವೈಯಕ್ತಿಕ ಕಾರಣಗಳಿಂದ ಮಾಹಿತಿ ನೀಡಲು ನಿರಾಕರಿಸುತ್ತಿದ್ದೇವೆ. ನಾವು ಹಿಂದುಳಿದ ಯಾವ ಜಾತಿಗೂ ಸೇರುವರಲ್ಲ ಎಂದು ಹೇಳಿದ್ದರು. ಈ ಬಗ್ಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ದಂಪತಿ ಬರೆದಿದ್ದ ಪತ್ರ ವೈರಲ್ ಆಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




