ಯಡಿಯೂರಪ್ಪ ಬದಲಾವಣೆ ಸೇರಿ ರಾಜ್ಯ ರಾಜಕೀಯ ಅಧ್ಯಯನ ಮಾಡಿ ವರದಿ ನೀಡಲು ಕರ್ನಾಟಕಕ್ಕೆ ಬಿಜೆಪಿ ನಾಯಕ ಭೂಪೇಂದ್ರ ಯಾದವ್​?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 09, 2021 | 3:14 PM

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೇಳಿದರೂ, ಬಿಜೆಪಿ ರಾಷ್ಟ್ರೀಯ ನಾಯಕರು ಕೇಂದ್ರದಿಂದ ಓರ್ವ ಹಿರಿಯ ನಾಯಕ, ಭೂಪೇಂದ್ರ ಯಾದವ್​ ಅವರನ್ನು ಕ​ರ್ನಾಟಕಕ್ಕೆ ಕಳಿಸಲು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಯಡಿಯೂರಪ್ಪ ಬದಲಾವಣೆ ಸೇರಿ ರಾಜ್ಯ ರಾಜಕೀಯ ಅಧ್ಯಯನ ಮಾಡಿ ವರದಿ ನೀಡಲು ಕರ್ನಾಟಕಕ್ಕೆ ಬಿಜೆಪಿ ನಾಯಕ ಭೂಪೇಂದ್ರ ಯಾದವ್​?
BS Yediyurappa - Bhupendra Yadav
Follow us on

ಮಾಧ್ಯಮದವರ ಜೊತೆ ಮಾತನಾಡುತ್ತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಳೆದ ರವಿವಾರ ಕೊಟ್ಟ ಉತ್ತರ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಕೇಂದ್ರ ನಾಯಕರು ಹೇಳಿದ ದಿನ ತಾನು ರಾಜೀನಾಮೆ ಕೊಡಲು ಸಿದ್ಧ. ಕರ್ನಾಟಕದಲ್ಲಿ ತನ್ನ ನಂತರ ನಾಯಕತ್ವ ತೆಗದುಕೊಳ್ಳಲು ಅನೇಕ ಯೋಗ್ಯರು ಇದ್ದಾರೆ. ಇದಾದ ನಂತರ, ಯಡಿಯೂರಪ್ಪ ನಾಯಕತ್ವದಲ್ಲಿ ಸರಕಾರ ಮುಂದುವರಿಯಬೇಕೆಂದು ಸಹಿ ಸಂಗ್ರಹಕ್ಕೆ ಎಂ.ಪಿ. ರೇಣುಕಾಚಾರ್ಯ ಮುಂದಾದರೆ, ಅವರ ವಿರುದ್ಧದ ಗುಂಪು ಹೊಸ ತಂತ್ರಗಾರಿಕೆ ಮಾಡುವಲ್ಲಿ ನಿರತರಾಗಿರುವುದು ಕಂಡುಬಂದಿದೆ. ಇನ್ನೇನು ನೀರು ತಿಳಿಯಾಯಿತು ಎನ್ನುವ ಹೊತ್ತಿಗೆ, ಈಗ ಹೊಸ ಮಾಹಿತಿ ಬಂದಿದೆ: ಕೇಂದ್ರ ನಾಯಕರಿಗೆ ಪದೇ ಪದೇ ತಲೆನೋವು ತರುತ್ತಿರುವ ಕರ್ನಾಟಕ ಬಿಜೆಪಿಯ ಎಲ್ಲ ವಿಚಾರಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಪಕ್ಷದ ಹಿರಿಯ ನಾಯಕ ಮತ್ತು ಸದ್ಯಕ್ಕೆ ಬಿಹಾರದ ಪ್ರಭಾರಿಯಾಗಿ ಕೆಲಸ ಮಾಡುತ್ತಿರುವ ಭೂಪೇಂದ್ರ ಯಾದವ್ ಅವರಿಗೆ ಕೇಂದ್ರ ನಾಯಕರು ಮೌಖಿಕ ನಿರ್ದೇಶನ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ‘ಟಿವಿ9 ಡಿಜಿಟಲ್​’ಗೆ ತಿಳಿಸಿದ್ದಾರೆ.

ಯಾದವ್ ಯಾಕೆ? ಗುರಿ ಏನು?
ರಾಜಸ್ಥಾನ ಮೂಲದ ಯಾದವ್, ವಕೀಲರಾಗಿ ಕೆಲಸ ಮಾಡಿ ಹೆಸರು ಗಳಿಸಿದವರು. ಈಗ ಅವರು ರಾಜ್ಯಸಭೆಯ ಸದಸ್ಯ. ಈ ಹಿಂದೆ, ಬಿಹಾರ ಮತ್ತು ಗುಜರಾತ್​ ಸೇರಿದಂತೆ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ತೆರೆಯ ಹಿಂದೆ ಕೆಲಸ ಮಾಡಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾದವ್​ ಅವರನ್ನು ಪಕ್ಷದ ಕೇಂದ್ರ ನಾಯಕರು ಬಹಳ ನಂಬುತ್ತಾರೆ. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮತ್ತು ಪಕ್ಕಾ ಕೆಲಸ ಮಾಡುವ ಯಾದವ್ 2018ರಲ್ಲಿ ಕರ್ನಾಟಕ ಚುನಾವಣೆಯ ವೇಳೆಯಲ್ಲಿ ಇಲ್ಲಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರಿಗೆ, ಕರ್ನಾಟಕದ ರಾಜಕೀಯ ಜಾತಕ ಗೊತ್ತು ಎಂದು ಹೇಳುತ್ತಾರೆ ಪಕ್ಷದ ಸ್ಥಳೀಯ ನಾಯಕರು.

ಈಗ ಯಾದವ್ ಅವರು ಕರ್ನಾಟಕಕ್ಕೆ ಬಂದು ಏನು ಮಾಡಬಹುದು? ಪಕ್ಷದ ಮೂಲಗಳ ಪ್ರಕಾರ ಕರ್ನಾಟಕದಲ್ಲಿರುವ ಓರ್ವ ಹಿರಿಯ ಆರ್​ಎಸ್​ಎಸ್​ ನಾಯಕರೊಬ್ಬರ ಜೊತೆ ಜಂಟಿಯಾಗಿ ಕೆಲಸ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಪಕ್ಷದೊಳಗಿನ ವಿಭಿನ್ನ ಗುಂಪುಗಳು, ಮತ್ತವುಗಳ ಗುರಿ; ಜಾತಿ ರಾಜಕೀಯದಲ್ಲಿ ಮುಂದಿನ ಚುನಾವಣೆ ಹೇಗೆ ಎದುರಿಸುವುದು? ಎಲ್ಲಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಯೋಚನೆಗೆ ಚಾಲನೆ ಕೊಟ್ಟರೆ, ಅವರ ಸ್ಥಾನಕ್ಕೆ ಯಾರನ್ನು ತರುವುದು? ಈ ಎಲ್ಲ ಪ್ರಶ್ನೆಗಳಿಗೆ ಅವರು ಉತ್ತರ ಕಂಡುಕೊಂಡು ಕೇಂದ್ರ ನಾಯಕರಿಗೆ ವರದಿ ಕೊಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆದರೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಬಿಜೆಪಿ ಕೇಂದ್ರ ನಾಯಕರು ಹೊರಜಗತ್ತಿಗೆ ಡಂಗುರ ಸಾರಿದರೂ, ಒಳಗೊಳಗೆ ನಾಯಕತ್ವ ಬದಲಾವಣೆ ಮಾಡಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂಬುದು ನಿಶ್ಚಿತ. ಆದರೆ ಅವರು ಬರುವ ದಿನಾಂಕ ಇನ್ನೂ ನಿಶ್ಚಿತವಾಗಿಲ್ಲ.

ಇವೆಲ್ಲ ಮುಂದಿನದಾಯ್ತು. ಈಗೇನು?
ಯಡಿಯೂರಪ್ಪ ರವಿವಾರ ಹೇಳಿಕೆ ನಂತರ ಒಂದು ಮುಖ್ಯ ಬೆಳವಣಿಗೆ ನಡೆದಿದ್ದು ಯಾರ ಗಮನಕ್ಕೂ ಬರಲಿಲ್ಲ. ಸೋಮವಾರ ಮಧ್ಯಾಹ್ನ ಯಾವಾಗ ರೇಣುಕಾಚಾರ್ಯ ಸಹಿ ಸಂಗ್ರಹಕ್ಕೆ ಮುಂದಾದರೋ ಆ ವಿಚಾರ ಕ್ಷಣ ಮಾತ್ರದಲ್ಲಿ ದೆಹಲಿಯ ಬಿಜೆಪಿ ಕೇಂದ್ರ ಕಛೇರಿಗೆ ತಲುಪಿತು. ತಾಸೊಳಗೆ ಅಲ್ಲಿಂದ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಯಡಿಯೂರಪ್ಪನವರಿಗೆ ಕರೆ ಮಾಡಿ ಸಹಿ ಸಂಗ್ರಹ ನಿಲ್ಲಬೇಕು, ಸಾರ್ವಜನಿಕವಾಗಿ ಪಕ್ಷದ ವಿಚಾರದ ಕುರಿತು ಚರ್ಚೆ ನಡೆಸುವುದನ್ನು ನಿಲ್ಲಿಸಬೇಕು ಎಂಬ ಖಡಕ್ ಸಂದೇಶವನ್ನು ರವಾನಿಸಿದರು. ಇದೇ ಹೊತ್ತಲ್ಲಿ ಯಡಿಯೂರಪ್ಪನವರ ವಿರುದ್ಧ ಕತ್ತಿ ಮಸೆಯುತ್ತಿದ್ದ ಅನೇಕರಿಗೂ ಇಂಥದೇ ಸಂದೇಶ ಹೋಯ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಜಟಾಪಟಿ ಸದ್ಯಕ್ಕೆ ನಿಂತುಕೊಂಡಿದೆ.

ಇದನ್ನೂ ಓದಿ: ನಾಯಕತ್ವ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡಲೇಬೇಕು: ಸಿಎಂ ಯಡಿಯೂರಪ್ಪ ಆಪ್ತರಿಂದ ನಿರ್ಧಾರ

ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ | ಕೊವಿಡ್ ಸುನಾಮಿ ಮಧ್ಯೆ ನಾಯಕತ್ವ ಬದಲಾವಣೆ ಚರ್ಚೆ ಹುಟ್ಟಿದ್ದೆಲ್ಲಿ? ರಾಜ್ಯ ಬಿಜೆಪಿ ಮುಂದಿನ ದಾರಿ ಯಾವುದು?

(BJP national general secretary, Bhupender Yadav likely to visit Karnataka to assess the political situation and change of leadership issue)