Bengaluru Unlock: ಲಾಕ್‌ಡೌನ್ ತೆರವಿನ ನಂತರ ಬೆಂಗಳೂರಿಗೆ ಪ್ರತ್ಯೇಕ ನಿಯಮಾವಳಿ; ಮೂರು ಹಂತದಲ್ಲಿ ಸಡಿಲಿಕೆ ಸಾಧ್ಯತೆ
Bangalore Unlock Guidelines: ರಫ್ತು ಆಧಾರಿತ ಕೈಗಾರಿಕೆಗಳಿಗೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಮೊದಲ ಹಂತದಲ್ಲಿ, ವಾಣಿಜ್ಯ ಉದ್ಯಮಗಳಿಗೆ ಎರಡನೇ ಹಂತದಲ್ಲಿ, ಬಾರ್ ಮತ್ತು ರೆಸ್ಟೋರಂಟ್‌ಗಳ ಕಾರ್ಯಾಚರಣೆಗೆ ಮೂರನೇ ಹಂತದಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾದ ಲಾಕ್‌ಡೌನ್ ತೆರವು ಮಾಡುವಾಗ ರಾಜಧಾನಿ ಬೆಂಗಳೂರಿಗೆ ಪ್ರತ್ಯೇಕ ಅನ್ಲಾಕ್ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಬಿಬಿಎಂಪಿ ವತಿಯಿಂದ ಸರ್ಕಾರವನ್ನು ಒತ್ತಾಯಿಸಲಾಗಿದೆ. ಲಾಕ್‌ಡೌನ್ ತೆರವಿಗೆ ಸಂಬಂಧಿಸಿದಂತೆ ನಗರಕ್ಕೆ ಹಾಗೂ ರಾಜ್ಯದ ಇತರ ಪ್ರದೇಶಗಳಿಗೆ ಬೇರೆ ಬೇರೆ ಮಾದರಿಗಳನ್ನು ಸಿದ್ಧಪಡಿಸಲಾಗಿದ್ದು, ರಫ್ತು ಆಧಾರಿತ ಕೈಗಾರಿಕೆಗಳಿಗೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಮೊದಲ ಹಂತದಲ್ಲಿ, ವಾಣಿಜ್ಯ ಉದ್ಯಮಗಳಿಗೆ ಎರಡನೇ ಹಂತದಲ್ಲಿ, ಬಾರ್ ಮತ್ತು ರೆಸ್ಟೋರಂಟ್‌ಗಳ ಕಾರ್ಯಾಚರಣೆಗೆ ಮೂರನೇ ಹಂತದಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.
ಈ ಬಗ್ಗೆ ನಿನ್ನೆ (ಜೂನ್ 8) ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಲಾಕ್‌ಡೌನ್ ಸಡಿಲಿಕೆ ಸಂದರ್ಭದಲ್ಲಿ ಬೆಂಗಳೂರಿಗೆ ಪ್ರತ್ಯೇಕ ಮಾದರಿ ಅನುಸರಿಸುವ ಅಗತ್ಯವಿದೆ. ಇಲ್ಲಿನ ಸಂಸ್ಕೃತಿ, ಜನರ ನಡವಳಿಕೆ ಆಧರಿಸಿ ಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಳಿಸುವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿದೆ ಎಂದು ಹೇಳಿದ್ದರು. ಇಡೀ ರಾಜ್ಯಕ್ಕೆ ಒಂದೇ ಮಾದರಿ ಬೇಡ. ಬೆಂಗಳೂರಿಗೆ ಒಂದು ರೀತಿ ಹಾಗೂ ಉಳಿದ ಭಾಗಗಳಿಗೆ ಒಂದು ರೀತಿ ಇಟ್ಟರೆ ಅನುಕೂಲವಾಗುತ್ತದೆ. ಅಲ್ಲದೇ, ಲಾಕ್‌ಡೌನ್‌ನಿಂದಾಗಿ ಬಹಳಷ್ಟು ಜನರಿಗೆ ಕೆಲಸ ಇಲ್ಲದಂತಾಗಿದ್ದು, ಯಾವೆಲ್ಲ ಉದ್ದಿಮೆಗಳ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದರು.
ಸುರಕ್ಷತಾ ಕ್ರಮಗಳ ಬಗ್ಗೆ ಮಾತನಾಡಿದ್ದ ಅವರು, ಈ ತಿಂಗಳಲ್ಲಿ ನಗರದಲ್ಲಿ ಸೋಂಕು ಪತ್ತೆ ಪ್ರಮಾಣ ಬಹಳ ಕಡಿಮೆಯಾಗಿದೆ. ಸರ್ಕಾರ ಸೂಕ್ತ ಸಮಯದಲ್ಲಿ ಕ್ರಮ ಕೈಗೊಂಡಿದ್ದು ಸಹ ಇದಕ್ಕೆ ಕಾರಣವಾಗಿದೆ. ವೈದ್ಯರು, ಶುಶ್ರೂಷಕಿಯರು ಸೇರಿದಂತೆ ಆರೋಗ್ಯ ಸೇವೆಯ ಸಿಬ್ಬಂದಿಗಳ ಎಲ್ಲರ ಪರಿಶ್ರಮದ ಪಾಲೂ ಇದರಲ್ಲಿದೆ. ಆದರೆ, ಲಾಕ್‌ಡೌನ್ ಮುಗಿದ ಬಳಿಕ ಬೇರೆ ಬೇರೆ ಪ್ರದೇಶಗಳಿಂದ ಅಧಿಕ ಪ್ರಮಾಣದ ಜನ ಇಲ್ಲಿಗೆ ಬರುತ್ತಾರೆ. ಆಗ ಮತ್ತೆ ಸೋಂಕು ಹರಡುವ ಅಪಾಯವಿರುತ್ತದೆ. ಆದ್ದರಿಂದ, ಇನ್ನು ಮುಂದೆಯೂ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೊರೊನಾ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಕಾರ್ಮಿಕರು ಇರುವ ಸ್ಥಳಕ್ಕೇ ತೆರಳಿ ಕೊರೊನಾ ಲಸಿಕೆ ಹಾಕಲು ಸರ್ಕಾರ ಅವಕಾಶ ನೀಡಿದೆ. ಬೆಸ್ಕಾಂ ಲೈನ್ ಮ್ಯಾನ್‌ಗಳು, ಜಲಮಂಡಳಿಯ ವಾಲ್ವ್ ಮ್ಯಾನ್‌ಗಳು, ಬಿಬಿಎಂಪಿ ವ್ಯಾಪ್ತಿಯ ಸ್ಮಶಾನಗಳ ಕಾರ್ಮಿಕರು ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಪಾಲಿಕೆ ವತಿಯಿಂದ ವಿಶೇಷ ಲಸಿಕೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರು ಸಂಬಂಧಪಟ್ಟ ಸಂಘದವರ ಜೊತೆ ಸಮಾಲೋಚನೆ ಮಾಡಿ ಲಸಿಕೆ ಶಿಬಿರಗಳ ರೂಪರೇಷೆ ಸಿದ್ಧಪಡಿಸುತ್ತಾರೆ ಎಂದು ಹೇಳಿದ್ದಾರೆ. ಜತೆಗೆ, ಜನರು ಕೊರೊನಾದಿಂದ ರಕ್ಷಣೆ ಪಡೆಯಲು ಲಸಿಕೆ ಹಾಕಿಸಿಕೊಳ್ಳುವುದು ತೀರಾ ಅಗತ್ಯ. ಇನ್ನು 30 ದಿನಗಳಲ್ಲಿ ಬಿಬಿಎಂಪಿಗೆ ಪೂರೈಕೆ ಆಗುವ ಲಸಿಕೆಗಳ ಪ್ರಮಾಣ ಹೆಚ್ಚಾಗಲಿದೆ. ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಎಲ್ಲರಿಗೂ ಲಸಿಕೆ ಕೊಡಲಾಗುವುದು ಎನ್ನುವುದನ್ನೂ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Karnataka Unlock: ಜೂನ್ 14ರ ನಂತರ ಅನ್ಲಾಕ್ಗೆ ಇವತ್ತೇ ಮುಹೂರ್ತ ಫಿಕ್ಸ್? ತಜ್ಞರ ಜೊತೆ ಮಹತ್ವದ ಮೀಟಿಂಗ್
CM on Lockdown Relaxation : ಶೇ.5ಕ್ಕಿಂತ ಪಾಸಿಟಿವಿಟಿ ರೇಟ್ ಬರೋ ಜಿಲ್ಲೆಗಳಲ್ಲಿ ಅನ್ಲಾಕ್..?