ಸಂವಿಧಾನ ವಿಚಾರದಲ್ಲಾದ ಡ್ಯಾಮೇಜ್ ಕಂಟ್ರೋಲ್‌ಗೆ ಸರ್ಕಸ್: ಬಿಜೆಪಿಯಿಂದ ‘ಭೀಮ ಸಂಗಮ’ ಅಭಿಯಾನ

| Updated By: Ganapathi Sharma

Updated on: Jan 10, 2025 | 7:06 AM

ಸಂವಿಧಾನದ ವಿಚಾರದಲ್ಲಿ ಆಗಿರುವ ಡ್ಯಾಮೇಜ್ ಕಂಟ್ರೋಲ್ ನಿವಾರಿಸಲು ಹಾಗೂ ಕಾಂಗ್ರೆಸ್​ಗೆ ತಿರುಗೇಟು ನೀಡಲು ಬಿಜೆಪಿ "ಭೀಮ ಸಂಗಮ" ಎಂಬ ರಾಜ್ಯವ್ಯಾಪಿ ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಜನವರಿ 25 ರೊಳಗೆ ಪಕ್ಷದ ಶಾಸಕರು ಮತ್ತು ಸಂಸದರು ತಮ್ಮ ಮನೆಗಳಲ್ಲಿ ಎಸ್ಸಿ/ಎಸ್ಟಿ ಸಮುದಾಯದವರನ್ನು ಆಹ್ವಾನಿಸಿ ಸನ್ಮಾನಿಸುವರು ಮತ್ತು ಸಂವಿಧಾನದ ಪೀಠಿಕೆಯನ್ನು ಓದುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ.

ಸಂವಿಧಾನ ವಿಚಾರದಲ್ಲಾದ ಡ್ಯಾಮೇಜ್ ಕಂಟ್ರೋಲ್‌ಗೆ ಸರ್ಕಸ್: ಬಿಜೆಪಿಯಿಂದ ‘ಭೀಮ ಸಂಗಮ’ ಅಭಿಯಾನ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜನವರಿ 10: ಸಂವಿಧಾನ ವಿಚಾರದಲ್ಲಿ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತಲೇ ಇರುವ ಬಿಜೆಪಿ ಹೊಸ ಹೊಸ ಪ್ರಯೋಗಗಳನ್ನು ‌ಮಾಡುತ್ತಲೇ ಇದೆ. ಇದೀಗ ಸಂವಿಧಾನ ಗೌರವ ಅಭಿಯಾನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ‘ಭೀಮ ಸಂಗಮ’ ಅಭಿಯಾನಕ್ಕೆ ಬಿಜೆಪಿ ಮುಂದಾಗಿದೆ. ಈ ಮೂಲಕ ಸಂವಿಧಾನ ವಿಚಾರದಲ್ಲಿ ಆಗಿರುವ ಚುನಾವಣಾ ಹಿನ್ನೆಡೆಯನ್ನು ಭರ್ತಿ ಮಾಡಿಕೊಳ್ಳಲು ತೀರ್ಮಾನಿಸಿದೆ.‌ ಜನವರಿ 25 ರೊಳಗೆ ರಾಜ್ಯವ್ಯಾಪಿ ಭೀಮ ಸಂಗಮ ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಲಾಗಿದ್ದು, ಶಾಸಕರು ಮತ್ತು ಸಂಸದರಿಗೆ ಜವಾಬ್ದಾರಿ ಹೊರಿಸಲಾಗಿದೆ.

ಮನೆ ಮನೆಗಳಿಗೆ ಅಂಬೇಡ್ಕರ್ ವಿಚಾರಧಾರೆ: ಸಂವಿಧಾನ ಪೀಠಿಕೆ ಓದುವ ‘ಭೀಮ ಸಮ್ಮೇಳನ’

ಬಿಜೆಪಿ‌ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರು ತಮ್ಮ ಮನೆಗಳಲ್ಲಿ ನಡೆಸಲಿರುವ ಕಾರ್ಯಕ್ರಮ ಇದಾಗಿದ್ದು, ಎಸ್​​ಸಿ ಮತ್ತು ಎಸ್​​ಟಿ ಸಮುದಾಯದವರನ್ನು ತಮ್ಮ ಮನೆಗೆ ಕರೆಸಿಕೊಂಡು ಸನ್ಮಾನ ಮಾಡಲಿದ್ದಾರೆ.

ಮನೆ ಮನೆಗಳಿಗೆ ಅಂಬೇಡ್ಕರ್ ಅವರ ವಿಚಾರಧಾರೆ ಮುಟ್ಟಿಸುವುದು, ಪರಿಶಿಷ್ಟ ಜಾತಿ ಸಮುದಾಯದ ಕುಟುಂಬಗಳನ್ನು ಸೇರಿಸಿ ಭೀಮ ಸಂಗಮ ನಡೆಸುವುದು ಮತ್ತು ಸಂವಿಧಾನ ಪೀಠಿಕೆ ಓದುವ ಭೀಮ ಸಮ್ಮೇಳನ ಹಮ್ಮಿಕೊಳ್ಳಲು ಬಿಜೆಪಿ ತೀರ್ಮಾನಿಸಿದೆ.

ಬೆಂಗಳೂರಿನ‌ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಗುರುವಾರ ನಡೆದ ಸಂವಿಧಾನ ಗೌರವ ಅಭಿಯಾನ ಕಾರ್ಯಕ್ರಮದಲ್ಲಿ ಈ ನಿರ್ದೇಶನಗಳನ್ನು ನೀಡಲಾಗಿದೆ. ಅಲ್ಲದೇ, ದೇಶದ ಎಲ್ಲಾ ರಾಜ್ಯಗಳಲ್ಲೂ ಪಕ್ಷದ ಮುಖವಾಣಿಯಲ್ಲಿ ಸಂವಿಧಾನ ವಿಚಾರದಲ್ಲಿ ಕಾಂಗ್ರೆಸ್ ಮಾಡಿರುವ ತಪ್ಪುಗಳನ್ನು ಮುದ್ರಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದು, ರಾಜ್ಯದಲ್ಲೂ ಸಹ ಪಾಲನೆಯಾಗಲಿದೆ.

ಇದನ್ನೂ ಓದಿ: ವಕ್ಫ್ ವಿರುದ್ಧ 3ನೇ ಹಂತದ ಹೋರಾಟಕ್ಕೆ ಯತ್ನಾಳ್ ಬಣ ಸಜ್ಜು: ಪರಾಜಿತ ಅಭ್ಯರ್ಥಿಗಳೊಂದಿಗೆ ನಾಳೆ ವಿಜಯೇಂದ್ರ ಸಭೆ

ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಕುರಿತು ಅಮಿತ್ ಶಾ ಲೋಕಸಭೆಯಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದರು. ಅದಾದ ನಂತರವೂ ಕಾಂಗ್ರೆಸ್ ದೇಶದಾದ್ಯಂತ ಶಾ ಹೇಳಿಕೆ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದೆ. ಇದು ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದೆ. ಇದರ ಬೆನ್ನಲ್ಲೇ ಕೇಸರಿ ಪಕ್ಷ ದೇಶದಾದ್ಯಂತ ಸಂವಿಧಾನ ಕುರಿತ ಅಭಿಯಾನ ಹಮ್ಮಿಕೊಳ್ಳಲು ಮುಂದಾಗಿದ್ದು, ಸಂವಿಧಾನಕ್ಕೆ ಮತ್ತು ಅಂಬೇಡ್ಕರ್​ಗೆ ಕಾಂಗ್ರೆಸ್ ಮಾಡಿರುವ ಅಪಚಾರಗಳನ್ನು ಎತ್ತಿ ತೋರಿಸಲು ಮುಂದಾಗಿದೆ. ಆ ಡ್ಯಾಮೇಜ್ ಕಂಟ್ರೋಲ್ ಮಾಡುವುದಲ್ಲದೆ ಕಾಂಗ್ರೆಸ್​​ಗೆ ಕೌಂಟರ್ ಕೊಡಲು ಮುಂದಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ