ಬೆಂಗಳೂರಿನಲ್ಲಿ ಸರ್ಕಾರಿ ನೌಕರರಿಗೆ ಮತ್ತು ವಿಮಾನ ನಿಲ್ದಾಣಕ್ಕೆ ಲಾಕ್​ಡೌನ್ ದಿನಗಳಲ್ಲೂ ಬಸ್​ ಸೇವೆ ಲಭ್ಯ

|

Updated on: Apr 27, 2021 | 10:49 PM

ಮಾರ್ಗಸೂಚಿಯ ಪ್ರಕಾರ ಬಿಎಂಟಿಸಿಯು 95 ಮಾರ್ಗಗಳಲ್ಲಿ 150 ಟ್ರಿಪ್​ಗಳನ್ನು ಕರ್ಫ್ಯೂ ಅವಧಿಯಲ್ಲಿಯೂ ಒದಗಿಸಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಈ ಸೇವೆಗಳನ್ನು ಬಳಸಿಕೊಳ್ಳಬಹುದು.

ಬೆಂಗಳೂರಿನಲ್ಲಿ ಸರ್ಕಾರಿ ನೌಕರರಿಗೆ ಮತ್ತು ವಿಮಾನ ನಿಲ್ದಾಣಕ್ಕೆ ಲಾಕ್​ಡೌನ್ ದಿನಗಳಲ್ಲೂ ಬಸ್​ ಸೇವೆ ಲಭ್ಯ
ಬಿಎಂಟಿಸಿ ಬಸ್ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ 2ನೇ ಅಲೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ಸರ್ಕಾರಿ ಜಾರಿ ಮಾಡಿರುವ 14 ದಿನಗಳ ಕೊವಿಡ್ ಕರ್ಫ್ಯೂ ಇಂದು (ಏಪ್ರಿಲ್ 27) ರಾತ್ರಿ 9 ಗಂಟೆಯಿಂದ ಜಾರಿಗೆ ಬಂದಿದೆ. ಕೆಎಸ್​ಆರ್​ಟಿಸಿಯ ಕೊನೆಯ ಬಸ್ ಮೆಜೆಸ್ಟಿಕ್ ಬಸ್​ ನಿಲ್ದಾಣದಿಂದ ಹೊರ ಹೊರಟ ನಂತರ ಅಲ್ಲಿನ ಸಿಬ್ಬಂದಿ ಬ್ಯಾರಿಕೇಡ್​ಗಳನ್ನು ಅಳವಡಿಸಿ ನಿಲ್ದಾಣ ದ್ವಾರಗಳನ್ನು ಬಂದ್ ಮಾಡಿದರು. ರಾಜ್ಯದಲ್ಲಿ ಇನ್ನು 14 ದಿನ ಬಸ್ ಸಂಚಾರ ಇರುವುದಿಲ್ಲ ಎನ್ನುವುದನ್ನು ಇದು ಸಾಂಕೇತಿಕವಾಗಿ ತಿಳಿಸಿತು.

ಏಪ್ರಿಲ್ 27ರ ರಾತ್ರಿ 9 ಗಂಟೆಯಿಂದ ಮೇ 12ರ ಬೆಳಿಗ್ಗೆ 6 ಗಂಟೆಯವರೆಗೆ ಬಿಎಂಟಿಸಿ ಬಸ್​ ಸೇವೆಯನ್ನು ಜನಸಾಮಾನ್ಯರಿಗೆ ನಿರ್ಬಂಧಿಸಲಾಗಿದೆ. ಆದರೆ ಮಾರ್ಗಸೂಚಿಯ ಪ್ರಕಾರ ಬಿಎಂಟಿಸಿಯು 95 ಮಾರ್ಗಗಳಲ್ಲಿ 150 ಟ್ರಿಪ್​ಗಳನ್ನು ಕರ್ಫ್ಯೂ ಅವಧಿಯಲ್ಲಿಯೂ ಒದಗಿಸಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಈ ಸೇವೆಗಳನ್ನು ಬಳಸಿಕೊಳ್ಳಬಹುದು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ವಾಯುವಜ್ರ’ ಸೇವೆಯೂ ಸೀಮಿತ ಸಂಖ್ಯೆಯಲ್ಲಿ ಲಭ್ಯವಿದೆ.

ಸರ್ಕಾರದ ಸೂಚನೆಯಂತೆ ಅತ್ಯಗತ್ಯ ಕ್ಷೇತ್ರಗಳು ಎಂದು ಗುರುತಿಸಿರುವ ಸಂಸ್ಥೆಗಳ ಉದ್ಯೋಗಿಗಳು ಮಾತ್ರ ಈ ಸೇವೆಗಳನ್ನು ಬಳಸಿಕೊಳ್ಳಬಹುದು. ಸಾಮಾನ್ಯ ಜನರನ್ನು ಬಸ್​ಗಳಿಗೆ ಹತ್ತಿಸಿಕೊಳ್ಳುವುದಿಲ್ಲ. ಬಸ್​ನ ಧಾರಣ ಸಾಮರ್ಥ್ಯದ ಅರ್ಧದಷ್ಟು ಜನರು ಮಾತ್ರವೇ ಸಂಚರಿಸಬಹುದಾಗಿದೆ. ಎಲ್ಲ ಸಿಬ್ಬಂದಿ ಮತ್ತು ಪ್ರಯಾಣಿಕರು ಕೊವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬಿಎಂಟಿಸಿ ಪತ್ರಿಕಾ ಹೇಳಿಕೆ ತಿಳಿಸಿದೆ.

ಕೆಎಸ್​ಆರ್​ಟಿಸಿ ಸಹ ವಿಮಾನ ನಿಲ್ದಾಣದ ಬಸ್ ಸೇವೆಗಳನ್ನು ಯಥಾರೀತಿ ಮುಂದುವರಿಸುವ ಭರವಸೆ ನೀಡಿದೆ. ಮೈಸೂರು ಮತ್ತು ಮಡಿಕೇರಿಯಿಂದ ಕೆಎಸ್​ಆರ್​ಟಿಸಿ ಫ್ಲೈ ಬಸ್ ಸೇವೆಗಳು ಲಭ್ಯವಿರುತ್ತವೆ ಎಂದು ಕೆಎಸ್​ಆರ್​ಟಿಸಿ ಪ್ರಕಟಣೆ ತಿಳಿಸಿದೆ.

(BMTC busses available for essential services in Bengaluru from April 28)

ಇದನ್ನೂ ಓದಿ: ಜಾರಿಯಾಯ್ತು ಕೊರೊನಾ ಕರ್ಫ್ಯೂ: ಬೆಂಗಳೂರಿನಿಂದ ಹೊರಟವು 6000ಕ್ಕೂ ಹೆಚ್ಚು ಬಸ್

ಇದನ್ನೂ ಓದಿ: 9 ಗಂಟೆಯಿಂದ ಜಾರಿಯಾಯ್ತು ಕೊರೊನಾ ಕರ್ಫ್ಯೂ: ಏನಿರುತ್ತೆ? ಏನಿರಲ್ಲ? ಯಾವುದಕ್ಕೆ ಅನುಮತಿ? ಇಲ್ಲಿದೆ ಮಾಹಿತಿ

Published On - 10:43 pm, Tue, 27 April 21