ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಗೆ ಕೊರೊನಾ ಸೋಂಕು ದೃಢ
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ನಡೆದಿದ್ದ ಮದುವೆ ಕಾರ್ಯಕ್ರಮದಲ್ಲಿ ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಸ್ಕ್ ಇಲ್ಲದೇ ಭಾಗವಹಿಸಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಡಿದಾಡಿತ್ತು.
ಬೆಂಗಳೂರು: ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಗೆ ಕೊರೊನಾ ಸೋಂಕು ತಗುಲಿದೆ. ಪಾಸಿಟಿವ್ ಎಂದು ತಿಳಿಯುತ್ತಿದ್ದಂತೆ ವೈದ್ಯರ ಸಲಹೆ ಮೇರೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದೆರಡು ದಿನಗಳಿಂದ ಕೆಮ್ಮು ಕಾಣಿಸಿಕೊಂಡ ಕಾರಣ ನಿನ್ನೆ ಟೆಸ್ಟ್ ಮಾಡಿಸಿದ್ದ ಸಭಾಪತಿ ಬಸವರಾಜ ಹೊರಟ್ಟಿ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಖಾಸಗಿ ಮದುವೆ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೇ ಭಾಗವಹಿಸಿದ ಚಿತ್ರವೊಂದು ಮೊನ್ನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ನಡೆದಿದ್ದ ಮದುವೆ ಕಾರ್ಯಕ್ರಮದಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಸ್ಕ್ ಇಲ್ಲದೇ ಭಾಗವಹಿಸಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಡಿದಾಡಿತ್ತು.
ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಸ್ಕ್ ಧರಿಸದೇ ಮದುವೆಯಲ್ಲಿ ಭಾಗವಹಿಸಿದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಆಡಿಯೋ ತುಣುಕುಗಳು ಸಹ ಹಡಿದಾಡಿದ್ದವು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಡೆಯನ್ನು ಟೀಕಿಸಿ ಆಡಿಯೋದನ್ನು ಮಾತನಾಡಲಾಗಿತ್ತು. “ಬೆಂಗಳೂರಿನಿಂದ ಸಿದ್ಧಾಪುರಕ್ಕೆ ಬಂದು ಸ್ಪೀಕರ್ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇವರು ಮದುವೆಯಲ್ಲಿ ಓಡಾಡಿದ್ರೂ ನಡೆಯುತ್ತೆ, ಜನರಿದ್ದಲ್ಲಿ ನಡೆದಾಡಿದ್ರೂ ನಡೆಯುತ್ತೆ“. “ಜನಸಾಮಾನ್ಯರು ಓಡಾಡದಿದ್ರೆ ಪೊಲೀಸರು ಲಾಠಿ ತೆಗೆದುಕೊಂಡು ಹೊಡೀತಾರೆ“. “ಇವರ ವಿರುದ್ಧ ಯಾರೂ ಮಾತಾನಾಡಲು ತಯಾರಿಲ್ಲವೇ” ಎಂದು ಆಡಿಯೋ ಮೂಲಕ ಕೆಲವು ಪ್ರಶ್ನಿಸಿದ್ದರು.
ಮಂತ್ರಾಲಯ ಮಠದ ಆಪ್ತ ಕಾರ್ಯದರ್ಶಿ ಸುಯಮೇಂದ್ರಾಚಾರ್ಯಗೆ ಕೊರೊನಾ ಸೋಂಕು ದೃಢಪಟ್ಟಿದೆ. ದೆಹಲಿಯ ಅಪಾರ್ಟ್‌ಮೆಂಟ್‌ನಲ್ಲಿ ಅವರು ಪ್ರತ್ಯೇಕವಾಸ ಕೈಗೊಂಡಿದ್ದಾರೆ.
ಕರ್ನಾಟಕದಲ್ಲಿ ಇಂದಿನ ಕೊರೊನಾ ಸೋಂಕಿತರ ಲೆಕ್ಕ ಕರ್ನಾಟಕದಲ್ಲಿ ಮಂಗಳವಾರ (ಏಪ್ರಿಲ್ 27) ಒಟ್ಟು 31,830 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು 180 ಜನರು ಕೋವಿಡ್-19ರಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಒಂದೇ ದಿನ 17,550 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 97 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಇಂದು ಹೊಸದಾಗಿ 31,830 ಜನರಿಗೆ ಕೊರೊನಾ ದೃಢಪಡುವುದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 14,00,775ಕ್ಕೆ (14 ಲಕ್ಷ) ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 180 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ ಸಾವನ್ನಪ್ಪಿದ್ದವರ ಸಂಖ್ಯೆ 14,807ಕ್ಕೆ ಮುಟ್ಟಿದೆ. ಸೋಂಕಿತರ ಪೈಕಿ 10,84,050 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 3,01,899 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ ಇಂದು 17,550 ಜನರಲ್ಲಿ ಸೋಂಕು ದೃಢಪಟ್ಟಿದ್ದು, 97 ಜನರು ಬಲಿಯಾಗಿದ್ದಾರೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 6,002ಕ್ಕೆ ಮುಟ್ಟಿದೆ. ಸೋಂಕಿತರ ಒಟ್ಟು ಸಂಖ್ಯೆ 6,87,751 ಮುಟ್ಟಿದೆ. ಈ ಪೈಕಿ 4,75,525 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 2,06,223 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು? ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 180. ಈ ಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ, 97 ಜನರು ಸಾವನ್ನಪ್ಪಿದ್ದಾರೆ. ಬಳ್ಳಾರಿ 18, ಮೈಸೂರು 9, ಕಲಬುರಗಿ 7, ರಾಮನಗರ 6, ಹಾಸನ, ಧಾರವಾಡ, ಬೀದರ್ ಜಿಲ್ಲೆಯಲ್ಲಿ ತಲಾ ಐವರು, ವಿಜಯಪುರ 4, ತುಮಕೂರು, ಹಾವೇರಿ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಮೂವರು ಮೃತಪಟ್ಟಿದ್ದಾರೆ. ಶಿವಮೊಗ್ಗ, ಕೋಲಾರ, ಚಾಮರಾಜನಗರ ಜಿಲ್ಲೆಗಳಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ, ರಾಯಚೂರು, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.