ಬೆಂಗಳೂರಿನಲ್ಲಿ ಸರ್ಕಾರಿ ನೌಕರರಿಗೆ ಮತ್ತು ವಿಮಾನ ನಿಲ್ದಾಣಕ್ಕೆ ಲಾಕ್ಡೌನ್ ದಿನಗಳಲ್ಲೂ ಬಸ್ ಸೇವೆ ಲಭ್ಯ
ಮಾರ್ಗಸೂಚಿಯ ಪ್ರಕಾರ ಬಿಎಂಟಿಸಿಯು 95 ಮಾರ್ಗಗಳಲ್ಲಿ 150 ಟ್ರಿಪ್ಗಳನ್ನು ಕರ್ಫ್ಯೂ ಅವಧಿಯಲ್ಲಿಯೂ ಒದಗಿಸಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಈ ಸೇವೆಗಳನ್ನು ಬಳಸಿಕೊಳ್ಳಬಹುದು.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ 2ನೇ ಅಲೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ಸರ್ಕಾರಿ ಜಾರಿ ಮಾಡಿರುವ 14 ದಿನಗಳ ಕೊವಿಡ್ ಕರ್ಫ್ಯೂ ಇಂದು (ಏಪ್ರಿಲ್ 27) ರಾತ್ರಿ 9 ಗಂಟೆಯಿಂದ ಜಾರಿಗೆ ಬಂದಿದೆ. ಕೆಎಸ್ಆರ್ಟಿಸಿಯ ಕೊನೆಯ ಬಸ್ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಹೊರ ಹೊರಟ ನಂತರ ಅಲ್ಲಿನ ಸಿಬ್ಬಂದಿ ಬ್ಯಾರಿಕೇಡ್ಗಳನ್ನು ಅಳವಡಿಸಿ ನಿಲ್ದಾಣ ದ್ವಾರಗಳನ್ನು ಬಂದ್ ಮಾಡಿದರು. ರಾಜ್ಯದಲ್ಲಿ ಇನ್ನು 14 ದಿನ ಬಸ್ ಸಂಚಾರ ಇರುವುದಿಲ್ಲ ಎನ್ನುವುದನ್ನು ಇದು ಸಾಂಕೇತಿಕವಾಗಿ ತಿಳಿಸಿತು.
ಏಪ್ರಿಲ್ 27ರ ರಾತ್ರಿ 9 ಗಂಟೆಯಿಂದ ಮೇ 12ರ ಬೆಳಿಗ್ಗೆ 6 ಗಂಟೆಯವರೆಗೆ ಬಿಎಂಟಿಸಿ ಬಸ್ ಸೇವೆಯನ್ನು ಜನಸಾಮಾನ್ಯರಿಗೆ ನಿರ್ಬಂಧಿಸಲಾಗಿದೆ. ಆದರೆ ಮಾರ್ಗಸೂಚಿಯ ಪ್ರಕಾರ ಬಿಎಂಟಿಸಿಯು 95 ಮಾರ್ಗಗಳಲ್ಲಿ 150 ಟ್ರಿಪ್ಗಳನ್ನು ಕರ್ಫ್ಯೂ ಅವಧಿಯಲ್ಲಿಯೂ ಒದಗಿಸಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಈ ಸೇವೆಗಳನ್ನು ಬಳಸಿಕೊಳ್ಳಬಹುದು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ವಾಯುವಜ್ರ’ ಸೇವೆಯೂ ಸೀಮಿತ ಸಂಖ್ಯೆಯಲ್ಲಿ ಲಭ್ಯವಿದೆ.
ಸರ್ಕಾರದ ಸೂಚನೆಯಂತೆ ಅತ್ಯಗತ್ಯ ಕ್ಷೇತ್ರಗಳು ಎಂದು ಗುರುತಿಸಿರುವ ಸಂಸ್ಥೆಗಳ ಉದ್ಯೋಗಿಗಳು ಮಾತ್ರ ಈ ಸೇವೆಗಳನ್ನು ಬಳಸಿಕೊಳ್ಳಬಹುದು. ಸಾಮಾನ್ಯ ಜನರನ್ನು ಬಸ್ಗಳಿಗೆ ಹತ್ತಿಸಿಕೊಳ್ಳುವುದಿಲ್ಲ. ಬಸ್ನ ಧಾರಣ ಸಾಮರ್ಥ್ಯದ ಅರ್ಧದಷ್ಟು ಜನರು ಮಾತ್ರವೇ ಸಂಚರಿಸಬಹುದಾಗಿದೆ. ಎಲ್ಲ ಸಿಬ್ಬಂದಿ ಮತ್ತು ಪ್ರಯಾಣಿಕರು ಕೊವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬಿಎಂಟಿಸಿ ಪತ್ರಿಕಾ ಹೇಳಿಕೆ ತಿಳಿಸಿದೆ.
ಸರ್ಕಾರದ ಸೂಚನೆಯಂತೆ ಅತ್ಯಗತ್ಯ ಕ್ಷೇತ್ರಗಳು ಎಂದು ಗುರುತಿಸಿರುವ ಸಂಸ್ಥೆಗಳ ಉದ್ಯೋಗಿಗಳು ಮಾತ್ರ ಬಿಎಂಟಿಸಿ ಒದಗಿಸುವ ಈ ಸೇವೆಗಳನ್ನು ಬಳಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ. #bmtc #KSRTC pic.twitter.com/Q03ZGZAL57
— TV9 Kannada (@tv9kannada) April 27, 2021
ಕೆಎಸ್ಆರ್ಟಿಸಿ ಸಹ ವಿಮಾನ ನಿಲ್ದಾಣದ ಬಸ್ ಸೇವೆಗಳನ್ನು ಯಥಾರೀತಿ ಮುಂದುವರಿಸುವ ಭರವಸೆ ನೀಡಿದೆ. ಮೈಸೂರು ಮತ್ತು ಮಡಿಕೇರಿಯಿಂದ ಕೆಎಸ್ಆರ್ಟಿಸಿ ಫ್ಲೈ ಬಸ್ ಸೇವೆಗಳು ಲಭ್ಯವಿರುತ್ತವೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆ ತಿಳಿಸಿದೆ.
ಆದ್ಯ ಗಮನಕ್ಕೆ:
ಸರ್ಕಾರದ ಸುತ್ತೋಲೆಯ ಪ್ರಕಾರ ವಿಮಾನ ನಿಲ್ದಾಣದ ಬಸ್ಸು ಸೇವೆಗಳು ಯಥಾರೀತಿ ಮುಂದುವರಿಯಲಿದೆ. ಅದರಂತೆ ಕೆಎಸ್ಆರ್ಟಿಸಿ ಫ್ಲೈಬಸ್ ಸೇವೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರು ಮತ್ತು ಮಡಿಕೇರಿಗೆ ಕಾರ್ಯ ನಿರ್ವಹಿಸಲಿದೆ. ಆನ್ಲೈನ್ ಬುಕಿಂಗ್ಗಾಗಿ ದಯವಿಟ್ಟು https://t.co/jnSXtGx8bg ಗೆ ಭೇಟಿ ನೀಡಿ
— KSRTC (@KSRTC_Journeys) April 27, 2021
(BMTC busses available for essential services in Bengaluru from April 28)
ಇದನ್ನೂ ಓದಿ: ಜಾರಿಯಾಯ್ತು ಕೊರೊನಾ ಕರ್ಫ್ಯೂ: ಬೆಂಗಳೂರಿನಿಂದ ಹೊರಟವು 6000ಕ್ಕೂ ಹೆಚ್ಚು ಬಸ್
ಇದನ್ನೂ ಓದಿ: 9 ಗಂಟೆಯಿಂದ ಜಾರಿಯಾಯ್ತು ಕೊರೊನಾ ಕರ್ಫ್ಯೂ: ಏನಿರುತ್ತೆ? ಏನಿರಲ್ಲ? ಯಾವುದಕ್ಕೆ ಅನುಮತಿ? ಇಲ್ಲಿದೆ ಮಾಹಿತಿ
Published On - 10:43 pm, Tue, 27 April 21