ಜಾರಿಯಾಯ್ತು ಕೊರೊನಾ ಕರ್ಫ್ಯೂ: ಬೆಂಗಳೂರಿನಿಂದ ಹೊರಟವು 6000ಕ್ಕೂ ಹೆಚ್ಚು ಬಸ್
ಸಂಜೆಯ ನಂತರ ಮೆಜೆಸ್ಟಿಕ್ನಲ್ಲಿ ಅಕ್ಷರಶಃ ಜನಜಾತ್ರೆಯ ವಾತಾವರಣವಿತ್ತು. ಕೆ.ಆರ್.ಮಾರುಕಟ್ಟೆ ಮತ್ತು ಆನಂದರಾವ್ ಸರ್ಕಲ್ಗಳಿಂದ ಖಾಸಗಿ ಬಸ್ಗಳೂ ದೊಡ್ಡ ಸಂಖ್ಯೆಯಲ್ಲಿ ಇತರ ಊರುಗಳಿಗೆ ಹೊರಟವು.
ಬೆಂಗಳೂರು: ಕರ್ನಾಟಕ ಸರ್ಕಾರವು ಸೋಮವಾರ ಘೋಷಿಸಿದ್ದಂತೆ ಇಂದು (ಏಪ್ರಿಲ್ 27) ರಾತ್ರಿ 9 ಗಂಟೆಯಿಂದ ರಾಜ್ಯಾದ್ಯಂತ ಕೊವಿಡ್ ಕರ್ಫ್ಯೂ ಹೆಸರಿನ ಲಾಕ್ಡೌನ್ ಜಾರಿಯಾಗಿದೆ. ನಗರ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇಡೀದಿನ ಬಸ್ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗಿಯೇ ಇತ್ತು. ಒಂದರ ಹಿಂದೆ ಒಂದರಂತೆ ಬಸ್ಗಳು ಹೊರಟವು. ರಾತ್ರಿ 9 ಗಂಟೆಯ ನಂತರ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸಾರಿಗೆ ನಿಗಮದ ಬಸ್ ಸಂಚಾರ ಇರುವುದಿಲ್ಲ ಎಂದು ಮಧ್ಯಾಹ್ನವೇ ಕೆಎಸ್ಆರ್ಟಿಸಿ ಘೋಷಿಸಿತ್ತು. ಹೀಗಾಗಿ ಸಂಜೆಯ ನಂತರ ಅಕ್ಷರಶಃ ಜನಜಾತ್ರೆಯ ವಾತಾವರಣವಿತ್ತು. ಕೆ.ಆರ್.ಮಾರುಕಟ್ಟೆ ಮತ್ತು ಆನಂದರಾವ್ ಸರ್ಕಲ್ಗಳಿಂದ ಖಾಸಗಿ ಬಸ್ಗಳೂ ದೊಡ್ಡ ಸಂಖ್ಯೆಯಲ್ಲಿ ಇತರ ಊರುಗಳಿಗೆ ಹೊರಟವು.
ರಾತ್ರಿ 9 ಗಂಟೆ ಸುಮಾರಿಗೆ ಬಸ್ ನಿಲ್ದಾಣದಿಂದ ಕೊನೆಯ ಸರ್ಕಾರಿ ಬಸ್ ಹೊರಟಿತು. ಕೊನೇ ಬಸ್ ಹೊರಟ ನಂತರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಕಾರ್ಯಾಚರಣೆಯನ್ನು ಸಿಬ್ಬಂದಿ ಬಂದ್ ಮಾಡಿದರು. ನಿಲ್ದಾಣದ ಪ್ರವೇಶ, ನಿರ್ಗಮನ ದ್ವಾರಗಳ ಬಳಿ ಬ್ಯಾರಿಕೇಡ್ ಅಳವಡಿಸಲಾಯಿತು.
ಇದರ ಹೊರತಾಗಿ ದೊಡ್ಡ ಸಂಖ್ಯೆಯಲ್ಲಿ ಖಾಸಗಿ ವಾಹನಗಳಲ್ಲಿಯೂ ಜನರು ಬೆಂಗಳೂರಿನಿಂದ ಹೊರಟರು. ನೆಲಮಂಗಲದ ನವಯುಗ ಟೋಲ್ನಲ್ಲಿ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿದ್ದವು. ಮನೆಗಳನ್ನು ಖಾಲಿ ಮಾಡಿಕೊಂಡು ಸಾವಿರಾರು ಮಂದಿ ಬೆಂಗಳೂರು ತೊರೆದ ದೃಶ್ಯಗಳೂ ಕಣ್ಣಿಗೆ ಬಿದ್ದವು. ಲಾಕ್ಡೌನ್ಗೆ ವಿಧಿಸಿರುವ 14 ದಿನಗಳ ಗಡುವು ಮುಗಿದ ನಂತರವೂ ಪರಿಸ್ಥಿತಿ ಸುಧಾರಿಸುತ್ತೋ? ಇಲ್ಲವೋ ಎಂಬ ಆತಂಕ ಹಲವರನ್ನು ಬಾಧಿಸುತ್ತಿತ್ತು.
ಬೆಂಗಳೂರು ನಗರದಲ್ಲಿ ನೈಟ್ ಹಾಲ್ಟ್ ಆಗುತ್ತಿದ್ದ ಬಹುತೇಕ ಬಸ್ಸುಗಳನ್ನು ಖಾಸಗಿ ಬಸ್ ಕಂಪನಿಗಳು ವಾಪಸ್ ಕಳಿಸಿವೆ. ನಾಳೆ ಬೆಳಿಗ್ಗೆ ಜಿಲ್ಲಾ ಕೇಂದ್ರಗಳಿಂದಲೂ ಬಸ್ಗಳು ಇರುವುದಿಲ್ಲ. ಹೀಗಾಗಿ ಹಳ್ಳಿಗಳಿಗೆ ತಲುಪುವವರು ಸ್ವಂತ ವಾಹನಗಳನ್ನೇ ಅವಲಂಬಿಸಬೇಕಾಗುತ್ತದೆ. ಸರಿಸುಮಾರು 6000 ಬಸ್ಗಳು ಇಂದು ಸಂಜೆಯಿಂದ ಬೆಂಗಳೂರು ತೊರೆದಿವೆ ಎಂದು ಖಾಸಗಿ ಬಸ್ ಏಜೆಂಟರೊಬ್ಬರು ಮಾಹಿತಿ ನೀಡಿದರು.
ನಾಯಂಡಹಳ್ಳಿಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಕಾಸರಗೋಡು ನಗರಕ್ಕೆ ಹೋಗುವ ಬಸ್ ಇನ್ನೂ ಬಂದಿರದ ಕಾರಣ ಪ್ರಯಾಣಿಕರು ಆತಂಕದಲ್ಲಿದ್ದರು. ಈ ಬಸ್ 8 ಗಂಟೆಗೆ ಬರಬೇಕಿತ್ತು. ಲಾಕ್ಡೌನ್ಗೆ 10 ನಿಮಿಷ ಬಾಕಿಯಿರುವಂತೆಯೇ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಕೆಎಸ್ಆರ್ಟಿಸಿಯ ಬಹುತೇಕ ಬಸ್ಗಳು ಹೊರಟವು. ನಿಲ್ದಾಣದಲ್ಲಿ ಜನದಟ್ಟಣೆ ಒಮ್ಮೆಲೆ ಕಡಿಮೆಯಾದಂತೆ ಭಾಸವಾಯಿತು.
ಬಸ್ ಟಿಕೆಟ್ ಸಿಗದ ಕೆಲವರು ರೈಲು ಹಿಡಿದು ಊರಿಗೆ ಹೋಗಲು ಧಾವಿಸಿದರು. ಆದರೆ ಅಲ್ಲಿಯೂ ಅವಕಾಶ ಸಿಗಲಿಲ್ಲ. ಹೀಗಾಗಿ ರೈಲು ನಿಲ್ದಾಣದಲ್ಲಿಯೇ ಮಲಗಿದ್ದು, ಬೆಳಿಗ್ಗೆ ಟಿಕೆಟ್ ಪಡೆದು ಊರುಗಳಿಗೆ ತೆರಳು ನಿರ್ಧರಿಸಿ ಅಲ್ಲಿಯೇ ಮಲಗಿದ್ದಾರೆ. ಏನಾದರೂ ಆಗಲಿ, ಲಾಕ್ಡೌನ್ ವೇಳೆ ಬೆಂಗಳೂರಿನಲ್ಲಿ ಇರುವುದು ಬೇಡ. ನಮ್ಮ ಊರುಗಳಿಗೆ ಹೋಗುವುದು ಒಳ್ಳೆಯದು ಎಂಬ ನಿರ್ಧಾರಕ್ಕೆ ವಲಸಿಗರು ಬಂದಂತೆ ಇದೆ.
(Thousands of KSRTC Private bus left Bengaluru lockdown began state)
ಇದನ್ನೂ ಓದಿ: 14 ದಿನಗಳ ಕೊರೊನಾ ಕರ್ಫ್ಯೂ; ಬೆಂಗಳೂರಿಗೆ ವಿದಾಯ ಹೇಳಿ ತಮ್ಮ ಗೂಡು ಸೇರುತ್ತಿರುವ ಜನ
Published On - 9:39 pm, Tue, 27 April 21