ಬಸ್ನಲ್ಲಿ ನನಗಾದರೆ ಸೀಟ್ ಕೊಟ್ಟಿದ್ದೀರಿ, ಆದರೆ ನಾನು ಸಾಕಿದ ನಾಯಿಗೆ ಏಕೆ ಸೀಟ್ ಕೊಡುವುದಿಲ್ಲ? ಮಹಿಳೆಯ ಪ್ರಶ್ನೆಗೆ ಕರಗಿತು ಬಸ್ ಸಿಬ್ಬಂದಿ ಕರುಳು
ನೀವು ಬೇಕಾದರೆ ಬಸ್ ಹತ್ತಿ, ಆದರೆ ನೀವು ಸಾಕಿದ ನಾಯಿಯನ್ನು ಬಸ್ ಹತ್ತಿಸಬೇಡಿ ಎಂದು ಬಸ್ ಸಿಬ್ಬಂದಿ ಅವಕಾಶ ನಿರಾಕರಿಸಿದರು. ಸಾರಿಗೆ ಸಿಬ್ಬಂದಿ ಎಷ್ಟೇ ಬಿಗಿ ಪಟ್ಟು ಹಿಡಿದರೂ ಮಹಿಳೆ ಮಾತ್ರ ತನ್ನ ಬೇಡಿಕೆಯಿಂದ ಹಿಂದೆ ಸರಿಯಲಿಲ್ಲ.
ಬೆಂಗಳೂರು: ಲಾಕ್ಡೌನ್ ಎಂಬುದು ನಮಗೊಂದೇ ಅಲ್ಲ, ಸಾಕುಪ್ರಾಣಿಗಳಿಗೂ ಸೃಷ್ಟಿಸುವ ಸಮಸ್ಯೆಗಳು ಹಲವು. ಹಿಂದಿನ ವರ್ಷದ ಲಾಕ್ಡೌನ್ನಿಂದ ಸಾಕುಪ್ರಾಣಿಗಳು ಊರಿಗೆ ಹೊರಟುನಿಂತ ತಮ್ಮ ಮಾಲೀಕರಿಂದ ದೂರ ಉಳಿಯಬೇಕಾದ ಪ್ರಸಂಗವನ್ನೂ ಸೃಷ್ಟಿಸಿತ್ತು. ಈಗಲೂ ಬೆಂಗಳೂರಿಗರು ಎದ್ದೆವೋ ಬಿದ್ದೆವೋ ಎಂದು ನಗರ ತೊರೆದು ಹಳ್ಳಿ ತೊರೆದು ಮನೆ ಸೇರುತ್ತಿದ್ದಾರೆ. ಆದರೆ ಅಲ್ಲಿ ಸಾಕಿದ್ದ, ಪ್ರೀತಿಯಿಂದ ಸಲುಹಿದ್ದ ತಮ್ಮ ಸಾಕುಪ್ರಾಣಿಗಳನ್ನು ತಮ್ಮ ಜತೆಯೇ ಕರೆದೊಯ್ಯುವ ಪ್ರಯತ್ನವನ್ನೂ ನಡೆಸಿದ್ದಾರೆ. ಸ್ವಂತ ಕಾರು, ಜೀಪ್ ಇರುವವರಿಗೆ ಹೋದಲ್ಲಿ ಬಂದಲ್ಲಿ ತಮ್ಮೊಡನೆ ಸಾಕುಪ್ರಾಣಿಗಳನ್ನು ಕರೆದೊಯ್ಯಲು ಆಗಬಹುದು. ಆದರೆ ಸಾರ್ವಜನಿಕ ಸಾರಿಗೆಯನ್ನೇ ಆಶ್ರಯಿಸಿದವರಿಗೆ? ಇಂದು ರಾತ್ರಿ 9 ಗಂಟೆ ನಂತರ ಬೆಂಗಳೂರಿನಿಂದ ಇತರ ಸ್ಥಳಗಳಿಗೆ ಯಾವುದೇ ಬಸ್ ಸಂಚಾರ ಇರುವುದಿಲ್ಲ ಎಂದು ತಿಳಿಯುತ್ತಿದ್ದಂತೆ ನೂರಾರು ಪ್ರಯಾಣಿಕರು ತಮ್ಮ ಗಂಟುಮೂಟೆ ಹೊತ್ತು ಸ್ವಂತ ಊರುಗಳತ್ತ ಧಾವಿಸುತ್ತಿದ್ದಾರೆ. ಅಲ್ಲಿ ನಡೆದ ಈ ಘಟನೆ ಎಂಥವರ ಮನವನ್ನೂ ಮಿಡಿಯುವಂತೆ ಮಾಡುತ್ತದೆ.
ಸಾರ್ವಜನಿಕ ಸಾರಿಗೆಯಲ್ಲಿ ಅತ್ಯವಶ್ಯಕ ಸಾಮಾಗ್ರಿಗಳನ್ನೇನೋ ಒಯ್ಯಬಹುದು, ಆದರೆ ಸಾಕುಪ್ರಾಣಿಗಳನ್ನು ಹೇಗೆ ಕರೆದೊಯ್ಯುವುದು? ಇಂತಹುದೇ ಪ್ರಸಂಗವೊಂದು ಬೆಂಗಳೂರಲ್ಲಿ ನಡೆದಿದೆ. ಮೆಜೆಸ್ಟಿಕ್ ಬಳಿ ತನ್ನ ಊರಿಗೆ ತೆರಳಲು ಮಹಿಳೆಯೋರ್ವರು ಆಗಮಿಸಿದ್ದರು. ಅವರ ಜತೆ ಅವರು ಸಾಕಿದ ಪ್ರೀತಿಯ ನಾಯಿಯೂ ಇತ್ತು. ಬೆಂಗಳೂರಿನಿಂದ ಊರಿಗೆ ತಮ್ಮ ನಾಯಿಯನ್ನೂ ಕರೆದೊಯ್ಯುವ ಹುಕಿಯನ್ನು ಅವರು ಮೆಜೆಸ್ಟಿಕ್ಗೆ ಆಗಮಿಸಿದ್ದರು.
ಆದರೆ ಮಹಿಳೆಯ ಹಂಬಲಕ್ಕೆ ಸಾರಿಗೆ ಸಿಬ್ಬಂದಿ ಭಂಗ ತಂದರು. ನೀವು ಬೇಕಾದರೆ ಬಸ್ ಹತ್ತಿ, ಆದರೆ ನೀವು ಸಾಕಿದ ನಾಯಿಯನ್ನು ಬಸ್ ಹತ್ತಿಸಬೇಡಿ ಎಂದು ಬಸ್ ಸಿಬ್ಬಂದಿ ಅವಕಾಶ ನಿರಾಕರಿಸಿದರು. ಸಾರಿಗೆ ಸಿಬ್ಬಂದಿ ಎಷ್ಟೇ ಬಿಗಿ ಪಟ್ಟು ಹಿಡಿದರೂ ಮಹಿಳೆ ಮಾತ್ರ ತನ್ನ ಬೇಡಿಕೆಯಿಂದ ಹಿಂದೆ ಸರಿಯಲಿಲ್ಲ. ಬಸ್ನಲ್ಲಿ ನನಗಾದರೆ ಸೀಟ್ ಕೊಟ್ಟಿದ್ದೀರಿ, ಆದರೆ ನಾನು ಸಾಕಿದ ನಾಯಿಗೆ ಏಕೆ ಸೀಟ್ ಕೊಡುವುದಿಲ್ಲ ಎಂದು ತಮ್ಮ ಪ್ರೀತಿಯ ಸಂಗಾತಿಯನ್ನು ಬಿಟ್ಟು ಬಸ್ ಹತ್ತಲು ಒಪ್ಪಲಿಲ್ಲ.
ಸಾರಿಗೆ ಸಿಬ್ಬಂದಿಯೂ ಒಂದು ಕ್ಷಣಕ್ಕೆ ಮಹಿಳೆಯ ಬೇಡಿಕೆಗೆ ಮಣಿಯಲಿಲ್ಲ. ಆದರೆ ತನ್ನ ಜತೆ ತಾನು ಸಾಕಿದ ನಾಯಿಗೂ ಬಸ್ ಏರಲು ಬಿಡಬೇಕು, ಇಲ್ಲದಿದ್ದರೆ ನಾನೂ ಪ್ರಯಾಣಿಸುವುದಿಲ್ಲ ಎಂದು ಮಹಿಳೆ ಪಟ್ಟು ಹಿಡಿದು ಕುಳಿತುಬಿಟ್ಟರು. ಇದು ಬಸ್ ಸಿಬ್ಬಂದಿಯ ಗಂಟಲು ಕಟ್ಟಿಸಿತು. ಎಷ್ಟೆಂದರೂ ಅವರೂ ಮನುಷ್ಯರು, ಅವರ ಮನೆಯಲ್ಲೂ ಸಾಕುಪ್ರಾಣಿಗಳಿರುತ್ತವೆ. ಅವಕ್ಕೂ ಸಾಕುಪ್ರಾಣಿಗಳ ಮೇಲೆ ಅಕ್ಕರೆ, ಕನಿಕರ ಇರುತ್ತದೆ. ಒಂದುವೇಳೆ ನಾಯಿಯನ್ನು ಬಿಟ್ಟು ಮಹಿಳೆಯೊಬ್ಬಳೇ ಸ್ವಂತ ಊರಿಗೆ ಹೋಗಿದ್ದರೆ ನಾಯಿ ಪಾಡೇನು? ಎಂಬ ಪ್ರಶ್ನೆ ಬಸ್ ಸಿಬ್ಬಂದಿಯ ಕರುಳಿಗೂ ತಾಕಿತು. ಮಹಿಳೆಯ ಆಗ್ರಹವೇ ಗೆದ್ದಿತು. ತನ್ನ ಪ್ರೀತಿಯ ಶ್ವಾನದ ಜತೆಗೇ ಮಹಿಳೆ ಬಸ್ ಏರಿದಳು.
(Women demands seat to her dog in KSRTC bus in Majestic Bangalore in Corona curfew )
Published On - 7:20 pm, Tue, 27 April 21