ಬೆಂಗಳೂರು: ನಾಳೆ ಮುಷ್ಕರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾರಿಗೆ ಸಿಬ್ಬಂದಿಗಳ ಮುಖಂಡರ ಜೊತೆಗೆ ಮಾತುಕತೆ ನಡೆಸಲಾಗಿದೆ. ಆದರೂ ಅವರು ಮುಷ್ಕರಕ್ಕೆ ಮುಂದಾಗಿದ್ದಾರೆ. ಬೆಂಗಳೂರಲ್ಲಿ ಬಹಳ ಪ್ರಯಾಣಿಕರು ಬಿಎಂಟಿಸಿಯನ್ನು ಅವಲಂಬಿಸಿದ್ದಾರೆ. ಹೀಗಾಗಿ ನಾಳೆ ಖಾಸಗಿ ವಾಹನಗಳನ್ನು ಓಡಿಸುವ ಬಗ್ಗೆ ಸಾರಿಗೆ ಆಯುಕ್ತರು ನಮ್ಮ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಪ್ರಮುಖ ಮಾರ್ಗದಲ್ಲಿ ಖಾಸಗಿ ವಾಹನಗಳನ್ನು ಸಂಚಾರ ಮಾಡಲು ನಾವು ಈಗಾಗಲೇ ಮಾರ್ಗದ ಮಾಹಿತಿಯನ್ನು ಹಂಚಿಕೊಂಡಿದ್ದೇವೆ. ಹೆಚ್ಚಿನ ಪ್ರಯಾಣಿಕರು ಸಂಚಾರ ಮಾಡುವ ಮಾರ್ಗಗಳಲ್ಲಿ ಖಾಸಗಿ ವಾಹನಗಳು ಸಂಚಾರ ಮಾಡಲಿವೆ ಎಂದು ಟಿವಿ9 ಪ್ರತಿನಿಧಿಗೆ ಬಿಎಂಟಿಸಿ ಎಂಡಿ ಸಿ.ಶಿಖಾ ತಿಳಿಸಿದರು.
ಪ್ರಮುಖ ಮಾರ್ಗದಲ್ಲಿ ನಮ್ಮ ಅಧಿಕಾರಿಗಳು ನಾಳೆ ಕೆಲಸ ಮಾಡಲಿದ್ದಾರೆ. ಎಲ್ಲಿಂದ ಎಲ್ಲಿಗೆ ಖಾಸಗಿ ವಾಹನಗಳು ಸಂಚಾರ ಮಾಡಬೇಕು ಅಂತ ಮಾಹಿತಿಯನ್ನು ಕೊಟ್ಟಿದ್ದೇವೆ. ಬಿಎಂಟಿಸಿಯಿಂದ ಈಗಾಗಲೇ ನಾವು ಆದೇಶ ಮಾಡಿದ್ದೇವೆ. ಕೆಲಸ ಮಾಡದಿದ್ದರೆ ಸಂಬಳ ಇಲ್ಲ ಎಂಬ ನೀತಿಯನ್ನು ಅನುಸರಿಸುತ್ತೇವೆ. ನಾಳೆ ಯಾವುದೇ ಕಾರಣಕ್ಕೂ ಸಾರಿಗೆ ಸಿಬ್ಬಂದಿಗಳಿಗೆ ರಜೆ ನೀಡುವುದಿಲ್ಲ ಎಂದು ಬಿಎಂಟಿಸಿ ಎಂಡಿ ಸಿ. ಶಿಖಾ ಹೇಳಿದರು.
ರಾಜ್ಯದಲ್ಲಿ ನಾಳೆ ಸಾರಿಗೆ ನೌಕರರ ಮುಷ್ಕರ ಘೋಷಿಸಿದ ಬೆನ್ನಲ್ಲೇ ಅಧಿಕಾರಿಗಳ ಜತೆ ಬಿಎಂಟಿಸಿ ಎಂಡಿ ಸಿ.ಶಿಖಾ ಸಭೆ ನಡೆಸುತ್ತಿದ್ದಾರೆ. ಖಾಸಗಿ ಬಸ್ ಸಂಚಾರದ ಬಗ್ಗೆ ಹಾಗೂ ಯಾವ ಮಾರ್ಗದಲ್ಲಿ ಎಷ್ಟು ಬಸ್ ಸಂಚರಿಸಬೇಕು? ಯಾವ ಮಾರ್ಗಕ್ಕೆ ಹೆಚ್ಚು ಬಸ್‌ಗಳ ಅಗತ್ಯವಿದೆ? ಎಂದು ಬಿಎಂಟಿಸಿಯ ಮುಖ್ಯ ಕಚೇರಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಜತೆ ಬಿಎಂಟಿಸಿ ಎಂಡಿ ಸಿ.ಶಿಖಾ ಚರ್ಚೆ ನಡೆಸಿದ್ದಾರೆ. ನಾಳೆಯ ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಸಂಬಂಧಿಸಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಲು ಸಭೆಯಲ್ಲಿ ಚರ್ಚೆ ಮಾಡಲಾಗುತ್ತಿದೆ. ಸಭೆಯಲ್ಲಿ ಬಿಎಂಟಿಸಿ ಡಿವಿಷನ್ ಕಂಟ್ರೋಲರ್, ಹೆಚ್ಓಡಿಗಳು ಮತ್ತು ಡಿಪೋ ಮ್ಯಾನೇಜರ್ಗಳು ಭಾಗಿಯಾಗಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ
ಸಾರಿಗೆ ಸಿಬ್ಬಂದಿಗಳ ಬೇಡಿಕೆ ಈಡೇರಿಸಲು ಆಗಲ್ಲ ಎಂಬ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿಕೆ ಸರ್ವಾಧಿಕಾರಿ ಧೋರಣೆಯನ್ನು ಸೂಚಿಸುತ್ತದೆ. ಈಗ ಶೇ 8ರಷ್ಟು ವೇತನ ಹೆಚ್ಚಿಸುತ್ತೇವೆ ಎಂದು ಹೇಳುತ್ತಾರೆ. ಈ ಹೇಳಿಕೆ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆಗುವುದಿಲ್ಲವೇ? ಸಾಮಾನ್ಯ ಜನರು ಪ್ರಶ್ನಿಸಿದ್ರೆ ಮಾತ್ರ ನೀತಿಸಂಹಿತೆ ಉಲ್ಲಂಘನೆ ಆಗುತ್ತದೆಯೇ? ಎಂದು ಟಿವಿ9 ಮೂಲಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರವನ್ನು ಪ್ರಶ್ನಿಸಿದರು.
ಇತ್ತ ಸಾರಿಗೆ ಸಿಬ್ಬಂದಿಗಳೂ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ.ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆಯೋ ಮಾತೇ ಇಲ್ಲ. ನಾಳೆ ಒಂದು ಬಸ್ ಕೂಡಾ ರಸ್ತೆಗೆ ಇಳಿಯುವುದಿಲ್ಲ. ಸರ್ಕಾರದ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಎಸ್ಮಾ ಜಾರಿ ಮಾಡಿದ್ರೂ ತಲೆ ಕೆಡಿಸಿಕೊಳ್ಳುವುದಿಲ್ಲ. 6ನೇ ವೇತನ ಆಯೋಗ ಜಾರಿಯಾಗಲೇಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತೇವೆ. ಬೇಡಿಕೆ ಈಡೇರಿಸಿದರೆ ಹಾಲಿನ ಅಭಿಷೇಕ ಮಾಡುತ್ತೇವೆ ಎಂದು ಸಾರಿಗೆ ಸಿಬ್ಬಂದಿ ಸರ್ಕಾರಕ್ಕೆ ಗಂಭೀರ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ನಾಳೆ ಸಾರಿಗೆ ಮುಷ್ಕರ ನಡೆದೇ ನಡೆಯುತ್ತೆ, ಖಾಸಗಿ ನೌಕರರಿಗೂ ಬಸ್ ಓಡಿಸದಂತೆ ಮನವಿ: ಕೋಡಿಹಳ್ಳಿ ಚಂದ್ರಶೇಖರ್
Bus Strike: 14 ಜಿಲ್ಲೆಗಳಲ್ಲಿ ಖಾಸಗಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತೇವೆ – ಕೆ.ಕೆ.ಬಾಲಕೃಷ್ಣ
(BMTC MD C Shikha says will arrange private vehicle tomorrow due to bus workers strike)