ಆರ್ಥಿಕ ಅಶಿಸ್ತಿನ ಕಾರಣಕ್ಕೆ ಸಾಮ್ರಾಜ್ಯ ಕುಸಿತ; ಬಿ.ಆರ್​. ಶೆಟ್ಟಿ ಕನಸು ನುಚ್ಚುನೂರು

| Updated By: ಸಾಧು ಶ್ರೀನಾಥ್​

Updated on: Feb 25, 2021 | 4:41 PM

ಆರ್ಥಿಕ ಅಶಿಸ್ತಿನ ಕಾರಣಕ್ಕೆ ಸಾಮ್ರಾಜ್ಯ ಕುಸಿತ ಕಂಡಿದೆ. ಇದರಿಂದಾಗಿ ಬಿ.ಆರ್​. ಶೆಟ್ಟಿಯವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸುವ ಕನಸು ನುಚ್ಚುನೂರಾಗಿದೆ.

ಆರ್ಥಿಕ ಅಶಿಸ್ತಿನ ಕಾರಣಕ್ಕೆ ಸಾಮ್ರಾಜ್ಯ ಕುಸಿತ; ಬಿ.ಆರ್​. ಶೆಟ್ಟಿ ಕನಸು ನುಚ್ಚುನೂರು
Follow us on

ಉಡುಪಿ: ಜಿಲ್ಲೆಯ ಸಾಹಸಿ ಉದ್ಯಮಿ ಬಿ.ಆರ್​. ಶೆಟ್ಟಿ ಕೊಲ್ಲಿ ರಾಷ್ಟ್ರಗಳಲ್ಲಿ ತನ್ನ ಆರ್ಥಿಕ ಸಾಮ್ರಾಜ್ಯ ಕಟ್ಟಿರುವುದು ಒಂದು ಕುತೂಹಲಕಾರಿ ಕಥೆ. ಆದರೆ ಆರ್ಥಿಕ ಅಶಿಸ್ತಿನ ಕಾರಣಕ್ಕೆ ಸಾಮ್ರಾಜ್ಯ ಕುಸಿತ ಕಾಣುತ್ತಿದೆ. ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ. ಪರಿಸ್ಥಿತಿ ಚಿಂತಾಜನಕವಾಗಿದೆ. ಸರಕಾರದ ಜೊತೆ ಒಪ್ಪಂದ ಮಾಡಿಕೊಂಡು ಜಿಲ್ಲೆಯಲ್ಲಿ ಆರಂಭಿಸಲು ಉದ್ದೇಶಿಸಿದ್ದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಕೆಲಸವೂ ಮೊಟಕುಗೊಂಡಿದೆ. ಖಾಸಗಿಯವರೊಂದಿಗೆ ಕೈಜೋಡಿಸಿ ಆಸ್ಪತ್ರೆ ನಿರ್ಮಾಣಕ್ಕೆ ಅವಕಾಶ ನೀಡಿದ್ದ ಸರಕಾರ ಈಗ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದೆ.

ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗೆ ರಾಜ್ಯ ಸರ್ಕಾರದ ಜೊತೆ MOU
ಉಡುಪಿ ಕೊಲ್ಲಿಯಲ್ಲಿ ಬಿದ್ದ ಹೊಡೆತ ಹಳ್ಳಿಗೂ ತಟ್ಟಿದೆ. ತನ್ನ ತವರು ಜಿಲ್ಲೆ ಉಡುಪಿಯಲ್ಲಿ ಬಿ.ಆರ್ ಶೆಟ್ಟಿಅವರು ಒಂದು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಲು ತಯಾರಿ ನಡೆಸಿದ್ದರು. ರಾಜ್ಯ ಸರ್ಕಾರದ ಜೊತೆ MOU ಮಾಡಿಕೊಂಡು ಸರಕಾರಿ ಭೂಮಿಯಲ್ಲಿ ಆಸ್ಪತ್ರೆಯ ಕಾಮಗಾರಿ ಆರಂಭಿಸಿದ್ದರು. ಸರಕಾರಿ ಭೂಮಿಯನ್ನು ಬಳಸಿಕೊಂಡದ್ದಕ್ಕೆ ಪ್ರತಿಯಾಗಿ ಒಂದು ಉಚಿತ ಹೆರಿಗೆ ಆಸ್ಪತ್ರೆಯನ್ನು ನಡೆಸುತ್ತಿದ್ದರು.

ಸಾಮ್ರಾಜ್ಯ ಪತನ ಕಾಣುತ್ತಿದ್ದಂತೆ ಹೆರಿಗೆ ಆಸ್ಪತ್ರೆಯ ಭವಿಷ್ಯ ಅತಂತ್ರವಾಗಿದೆ. ಇತ್ತ ನಿರ್ಮಾಣ ಹಂತದಲ್ಲಿರುವ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಕಾಮಗಾರಿಯೂ ಸ್ಥಗಿತಗೊಂಡಿದೆ. ತನ್ನ ಆಸ್ತಿಯನ್ನು ಖಾಸಗಿಯವರಿಗೆ ವಹಿಸಿಕೊಟ್ಟ ಸರ್ಕಾರ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ. ಜನರ ಉಪಯೋಗಕ್ಕೆ ಬಳಕೆಯಾಗಬೇಕಿದ್ದ ಭೂಮಿ ಪಾಳು ಬಿದ್ದಿದೆ.

ಒಪ್ಪಂದ ಮಾಡಿಕೊಳ್ಳುವುದಕ್ಕೆ ಸ್ಥಳೀಯ ನಾಗರಿಕರ ವಿರೋಧವಿತ್ತು
ಇಷ್ಟಕ್ಕೂ ಬಿ.ಆರ್. ಶೆಟ್ಟಿ ಅವರ ಜೊತೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ಸ್ಥಳೀಯ ನಾಗರಿಕರ ವಿರೋಧವಿತ್ತು. ಹಾಜಿ ಅಬ್ದುಲ್ಲಾ ಸಾಹೇಬ್ ಅನ್ನುವ ವ್ಯಕ್ತಿ ಶತಮಾನದ ಹಿಂದೆ ಬಡವರ ಉಪಯೋಗಕ್ಕಾಗಿ ಈ ಭೂಮಿಯನ್ನು ಬಿಟ್ಟುಕೊಟ್ಟಿದ್ದರು. ಅಬ್ದುಲ್ಲಾ ಸಾಹೇಬರ ಆಶಯಕ್ಕೆ ವಿರುದ್ಧವಾಗಿ ರಾಜ್ಯ ಸರಕಾರ ಈ ಭೂಮಿಯನ್ನು ಶೆಟ್ಟರಿಗೆ ವಹಿಸಿಕೊಟ್ಟಿತ್ತು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಲಾಭಾಂಶದಿಂದ ಉಚಿತ ಸರಕಾರಿ ಹೆರಿಗೆ ಆಸ್ಪತ್ರೆ ನಡೆಸುವ ವಾಗ್ದಾನ ಪಡೆದಿತ್ತು.

ಬಿ.ಆರ್. ಶೆಟ್ಟರ ಸದ್ಯದ ಪರಿಸ್ಥಿತಿ ಕಂಡರೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಆರಂಭವಾಗುವ ಲಕ್ಷಣವಂತೂ ಕಾಣುತ್ತಿಲ್ಲ. ಇದರ ಲಾಭಾಂಶದಲ್ಲಿ ಉಚಿತ ಆಸ್ಪತ್ರೆ ನಡೆಸುವ ಸಾಧ್ಯತೆಯೂ ಇಲ್ಲ. ಮೂರು ವರ್ಷಗಳ ಹಿಂದೆ ಆರಂಭವಾದ ಈ ಉಚಿತ ಆಸ್ಪತ್ರೆಯಲ್ಲಿ ನೌಕರರ ಸಂಬಳ ಸೇರಿದಂತೆ ಅನೇಕ ಸಮಸ್ಯೆಗಳು ತಲೆದೋರುತ್ತಿವೆ. ಅತ್ಯಾಧುನಿಕ ಶೈಲಿಯಲ್ಲಿ ಕಟ್ಟಿರುವ ಉಚಿತ ಆಸ್ಪತ್ರೆಯ ಕಟ್ಟಡವನ್ನು ಸರಕಾರಿ ಅನುದಾನದಲ್ಲಿ ನಿರ್ವಹಣೆ ಮಾಡುವುದು ಸಾಧ್ಯವಿಲ್ಲ. ಮಹತ್ವಾಕಾಂಕ್ಷೆಯೊಂದಿಗೆ ಸರಕಾರ ಮಾಡಿಕೊಂಡ MOU ನಿಷ್ಪ್ರಯೋಜಕವಾಗುವ ಭಯ ಕಾಡುತ್ತಿದೆ.

ಬಿ.ಆರ್​.ಶೆಟ್ಟರು ಉಡುಪಿಯ ಹೆಮ್ಮೆಯ ಉದ್ಯಮಿಯಾಗಿದ್ದರು. ತನ್ನ ಸ್ವಂತ ಊರಿನಲ್ಲಿ ಏನಾದರೂ ಕೊಡುಗೆ ನೀಡಬೇಕು ಅನ್ನೋದು ಅವರ ಆಶಯವಾಗಿತ್ತು. ಕೊಲ್ಲಿ ರಾಷ್ಟ್ರಗಳಲ್ಲಿ ಶೆಟ್ಟರ ಸಾಮ್ರಾಜ್ಯ ಕುಸಿಯುವುದರೊಂದಿಗೆ ಸರಕಾರ ಮತ್ತು ಬಿ.ಆರ್​. ಶೆಟ್ಟಿ ಇಬ್ಬರ ನಿರೀಕ್ಷೆ ಹುಸಿಯಾಗಿದೆ.

ಇದನ್ನೂ ಓದಿ: ಈ ಜನರಿಗೆ ರೋಗ ಕೊಡದೇ ಕಾಪಾಡೋ ದೇವ್ರೆ; ಉತ್ತರ ಕನ್ನಡ ಜಿಲ್ಲೆಗೆ ಒಂದಾದ್ರೂ ಒಳ್ಳೇ ಆಸ್ಪತ್ರೆ ಬೇಡ್ವಾ?