ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಆತಂಕ: ಅಯ್ಯಪ್ಪ ಭಕ್ತರಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಹಾವಳಿ ಜೋರಾಗಿದೆ. ಹೀಗಾಗಿ ಶಬರಿಮಲೆಗೆ ಹೋಗುವ ಕರ್ನಾಟಕದ ಭಕ್ತರು ಎಚ್ಚರ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಆ ಮೂಲಕ ಭಕ್ತರ ಆರೋಗ್ಯ ರಕ್ಷಣೆಗೆ ಮುಂದಾಗಿದೆ. ಹಾಗಾದರೆ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಏನು ಎಂಬ ಮಾಹಿತಿ ಇಲ್ಲಿದೆ.

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಆತಂಕ: ಅಯ್ಯಪ್ಪ ಭಕ್ತರಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
ಶಬರಿಮಲೆ (ಸಂಗ್ರಹ ಚಿತ್ರ)
Updated By: ಗಂಗಾಧರ​ ಬ. ಸಾಬೋಜಿ

Updated on: Nov 18, 2025 | 7:12 PM

ಬೆಂಗಳೂರು, ನವೆಂಬರ್​ 18: ಕೇರಳದಲ್ಲಿ ಶಬರಿಮಲೆ (Sabarimala) ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಭಕ್ತರ ದರ್ಶನಕ್ಕಾಗಿ ತೆರೆಯಲಾಗಿದೆ. ಆದರೆ ಇದೇ ಸಂದರ್ಭದಲ್ಲಿ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ರೋಗದ ಹಾವಳಿಯೂ ಜೋರಾಗಿದೆ. ಈ ವೈರಸ್ ಕರ್ನಾಟಕಕ್ಕೂ ಟೆನ್ಷನ್ ಹೆಚ್ಚಿಸಿದ್ದು, ಸದ್ಯ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಬರಿಮಲೆ ಅಯ್ಯಪ್ಪ ಭಕ್ತರಿಗಾಗಿ ಮಾರ್ಗಸೂಚಿ (Guidelines) ಬಿಡುಗಡೆ ಮಾಡಿದೆ.

ಈಗಾಗಲೇ ಕೇರಳದಲ್ಲಿ ನೂರಾರು ಜನರಿಗೆ ಬಾಧಿಸುತ್ತಿರುವ ಈ ವೈರಸ್‌, ರಾಜ್ಯದಿಂದ ಶಬರಿ ಮಲೆಗೆ ಹೋಗುವ ಭಕ್ತರ ಟೆನ್ಷನ್​ಗೆ ಕಾರಣವಾಗಿದೆ. ಹೀಗಾಗಿ ಭಕ್ತರ ಆರೋಗ್ಯ ರಕ್ಷಣೆಗೆ ಮುಂದಾಗಿರುವ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆಗೆ ಮಾಡಿದೆ.

ಆರೋಗ್ಯ ಇಲಾಖೆಯ ಮಾರ್ಗಸೂಚಿಯಲ್ಲಿ ಏನಿದೆ? 

  • ನೇಗ್ಲೇರಿಯಾ ಫೌಲೇರಿ ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಇದು ಮುಖ್ಯವಾಗಿ ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತದೆ. ಉದಾಹರಣೆಗೆ ನಿಂತ ನೀರು, ಕೊಳ, ಈಜು ಕೊಳಗಳು ಹಾಗೂ ಕೆರೆ.
  • ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಹರಡುವುದಿಲ್ಲ.
  • ನೇಗ್ಲೇರಿಯಾ ಫೌಲೇರಿ ಅತ್ಯಂತ ವಿಷಕಾರಿ ಸೂಕ್ಷ್ಮಜೀವಿಯಾಗಿದ್ದು, ನೀರಿನಿಂದ ಮೂಗಿಗೆ ಪ್ರವೇಶಿಸಿದಾಗ ಅದು ಮೆದುಳನ್ನು ತಲುಪಿ, ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್‌ ಎನ್ನುವ ಅಪರೂಪದ ಗಂಭೀರ, ಮಾರಣಾಂತಿಕ ಖಾಯಿಲೆಯನ್ನು ಉಂಟುಮಾಡುತ್ತದೆ. ಯಾತ್ರೆಯ ಸಂದರ್ಭದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ನೀರು ಪ್ರವೇಶಿಸದಂತೆ ಮೂಗಿನ ಕ್ಲಿಪ್‌ ಗಳನ್ನು ಬಳಸಿ ಅಥವಾ ನಿಮ್ಮ ಮೂಗನ್ನು ಬಿಗಿಯಾಗಿ ಮುಚ್ಚಿ ಹಿಡಿದು ಮುನ್ನೆಚ್ಚರಿಕೆ ವಹಿಸಿ.
  • ನೀರಿನ ಸಂಪರ್ಕದ ಏಳು ದಿನಗಳ ಒಳಗೆ ಜ್ವರ, ತೀವು ತಲೆನೋವು, ವಾಕರಿಕೆ, ವಾಂತಿ, ಕುತ್ತಿಗೆ ಬಿಗಿತ, ಗೊಂದಲ, ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆಗಳು ಹಾಗೂ ವ್ಯಕ್ತಿಯ ವರ್ತನೆಯಲ್ಲಿ ಅಸ್ವಸ್ಥತೆ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸದೆ ತುರ್ತು ಆರೈಕೆಯನ್ನು ಪಡೆಯಲು ಹತ್ತಿರದ ಸರ್ಕಾರಿ ಆಸ್ಪತ್ರೆ,ವೈದ್ಯರನ್ನು ಸಂಪರ್ಕಿಸಿ.

ಸಾಮಾನ್ಯವಾಗಿ ನಿಂತ ನೀರು, ಕೊಳಗಳು ಮತ್ತು ಸರೋವರಗಳಲ್ಲಿ ಈ ಅಮೀಬಾ ಬೆಳೆಯುತ್ತೆ. ಒಂದು ವೇಳೆ ಅಂತಹ ನೀರಿನಲ್ಲಿ ಈಜಾಡಿದರೆ, ಆ ಅಮೀಬಾವು ಮೂಗಿನ ಮೂಲಕ ನಮ್ಮ ಮೆದುಳನ್ನ ಹೊಕ್ಕು ನೇರವಾಗಿ ಕೇಂದ್ರ ನರವ್ಯೂಹಕ್ಕೆ ಹಾನಿಯುಂಟು ಮಾಡುತ್ತದೆ. ಕೆಲವೊಮ್ಮೆ ಸೋಂಕಿನ ಪ್ರಮಾಣ ಹೆಚ್ಚಾದರೆ ಸಾವು ಕೂಡ ಸಂಭವಿಸಬಹುದು.

ಇದನ್ನೂ ಓದಿ: Video: ಶಬರಿಮಲೆ ಯಾತ್ರೆ ಆರಂಭ, ಅಯ್ಯಪ್ಪ ಭಕ್ತರಿಗೆ ಮೆದುಳು ತಿನ್ನುವ ಅಮೀಬಾ ಸೋಂಕಿನ ಭೀತಿ, ಮಾರ್ಗಸೂಚಿ ಬಿಡುಗಡೆ

ಸದ್ಯ ನಮ್ಮ‌ರಾಜ್ಯದಲ್ಲಿ ಯಾವುದೇ ರೀತಿ ನೇಗ್ಲೇರಿಯಾ ಫೌಲೇರಿ ಸೋಂಕು ಕಾಣಿಸಿಕೊಂಡಿಲ್ಲ. ಆದರೂ ಕೂಡ ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.