ರಾಜ್ಯ ರಾಜಕಾರಣದಲ್ಲಿ ಸದ್ಯ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಮೈತ್ರಿಯಿಂದಾಗಿ ಜೆಡಿಎಸ್ ನಾಯಕರು ಮುನಿಸಿಕೊಂಡಿದ್ದು, ನಿನ್ನೆ ಬಿಜೆಪಿ ಮೈತ್ರಿಗೆ ಅಸಮಾಧಾನಗೊಂಡಿರುವವರನ್ನು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮನವೊಲಿಸಲು ಮುಂದಾಗಿದ್ದರು. ಆ ಮೂಲಕ ಅಸಮಾಧಾನಿತರನ್ನು ಉಳಿಸಿಕೊಳ್ಳುವ ಸವಾಲು ಹೆಚ್ಡಿ ಕುಮಾರಸ್ವಾಮಿ ಅವರಿಗೆ ಎದುರಾಗಿದೆ. ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರ 154ನೇ ಜನ್ಮದಿನಾಚರಣೆ. ಹಾಗಾಗಿ ದೆಹಲಿಯ ರಾಜ್ಘಾಟ್ಗೆ ಕಾಂಗ್ರೆಸ್ ನಾಯಕರ ಭೇಟಿ ನೀಡಲಿದ್ದಾರೆ. ಇದರೊಂದಿಗೆ ರಾಜ್ಯದ ಮಳೆ, ಬರಗಾಲ ಹಾಗೂ ಇನ್ನಿತರ ಲೇಟೆಸ್ಟ್ ಅಪ್ಡೇಟ್ಸ್ ಟಿವಿ9 ಡಿಜಿಟಲ್ನಲ್ಲಿ.
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಘಟನೆ ಮತ್ತು ಬೆಳವಣಿಗೆ ಕುರಿತು ಸಿಎಂ ಸಿದ್ದರಾಮಯ್ಯ ವರದಿ ಕೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಜಿ & ಐಜಿಪಿಯಿಂದ ವರದಿ ಕೇಳಿದ್ದಾರೆ. ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಕಿಡಿಗೇಡಿಗಳು ಯಾರೇ ಇದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರವಾಣಿ ಮೂಲಕ ಡಿಜಿ&ಐಜಿಪಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರಿದಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಉಡವೇಪುರ ಗ್ರಾಮದ ಬಳಿ ಹುಲಿ ದಾಳಿಯಿಂದ ರೈತ ಮೃತಪಟ್ಟಿದ್ದಾನೆ. ದನ ಮೇಯಿಸುತ್ತಿದ್ದ ರೈತ ಗಣೇಶ(55) ಸ್ಥಳದಲ್ಲೇ ಸಾವು. ಹುಲಿ ರೈತನ ಮೃತದೇಹವನ್ನು ಅರ್ಧ ತಿಂದು ಬಿಟ್ಟುಹೋಗಿದೆ. ಕೂಡಲೇ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಸ್ಥಳೀಯ ಶಾಸಕ ಜಿ.ಡಿ.ಹರೀಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಾಳೆ ಕೋಲಾರದಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಗಾಂಧಿ ವೃತ್ತದವರೆಗೂ ಧರಣಿ ನಡೆಯಲಿದೆ. ಜನತಾ ದರ್ಶನದಲ್ಲಿ ಸಂಸದ ಮುನಿಸ್ವಾಮಿಗೆ ಅಪಮಾನ ಪ್ರಕರಣ, ಕ್ಲಾಕ್ ಟವರ್‌ನಲ್ಲಿ ತಲ್ವಾರ್ ದ್ವಾರ ನಿರ್ಮಿಸಲು ಅನುಮತಿ ಹಾಗೂ ಜಿಲ್ಲೆಯಲ್ಲಿ ಅಶಾಂತಿ, ರೈತರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಯಲಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಡಾ.ಅಶ್ವತ್ಥ್ ನಾರಾಯಣ, ಈಶ್ವರಪ್ಪ, ಸಿ.ಟಿ.ರವಿ, ಸಂಸದ ಮುನಿಸ್ವಾಮಿ ನಾಳೆಯ ಧರಣಿಯಲ್ಲಿ ಭಾಗಿಯಾಗಲಿದ್ದಾರೆ.
ಮಂಡ್ಯದ ಕೆ.ಆರ್.ಪೇಟೆ ಪಟ್ಟಣದ ಬೊಮ್ಮೇಗೌಡ ವೃತ್ತದಲ್ಲಿ ಪುನೀತ್ ರಾಜ್‍ಕುಮಾರ್ ಕಂಚಿನ ಪುತ್ಥಳಿ ಅನಾವರಣಗೊಳಿಸಲಾಗಿದೆ. ಪುನೀತ್ ಯುವ ಸಾಮ್ರಾಜ್ಯ ಸಂಘದ ವತಿಯಿಂದ 8 ಅಡಿ ಎತ್ತರದ ಅಪ್ಪು ಪುತ್ಥಳಿ ಅನಾವರಣಗೊಳಿಸಲಾಗಿದೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು 8 ಅಡಿ ಎತ್ತರದ ಪುತ್ಥಳಿ ಅನಾವರಣ ಮಾಡಿದರು.
ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ನಲ್ಲಿ ಸೀಟ್ಗಾಗಿ ಮಹಿಳೆಯರು ಕಿತ್ತಾಡಿಕೊಂಡಿದ್ದಾರೆ. ಈಶಾ ಪೌಂಡೇಷನ್ಗೆ ತೆರಳಿ ಶಿವನ ದರ್ಶನ ಪಡೆದು ವಾಪಸ್ಸಾಗಿದ್ದರು. ಈ ವೇಳೆ ಚಿಕ್ಕಬಳ್ಳಾಪುರ ಬಸ್ ನಿಲ್ದಾಣಕ್ಕೆ ಬಂದು ಸರ್ಕಾರಿ ಬಸ್ ಹತ್ತಿದಾಗ ಮಹಿಳೆಯರು ಕಿತ್ತಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬರುವ ಕೆಎಸ್‌ಆರ್‌ಟಿಸಿ ಬಸ್ನಲ್ಲಿ ಘಟನೆ ನಡೆದಿದೆ.
ಬೆಂಗಳೂರಿನ ವಾರ್ತಾ ಇಲಾಖೆಯ ಸುಲೋಚನಾ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಮಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 2023ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದ್ದ ಧಾರವಾಡ ಜಿಲ್ಲೆಯ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾರತದ ತ್ರಿವರ್ಣ ಧ್ವಜ ತಯಾರಿಸುವ ಗರಗ ಕ್ಷೇತ್ರೀಯ ಸೇವಾ ಸಂಘ, ರಾಷ್ಟ್ರಧ್ವಜಕ್ಕೆ ಬೇಕಾಗುವ ಬಟ್ಟೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ದೇಶದ ಮೊದಲ ಖಾದಿ ಗ್ರಾಮೋದ್ಯೋಗ ಸಂಸ್ಥೆ ಎಂಬ ಹಿರಿಮೆ ಹೊಂದಿದೆ.
ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗದ ಬಗ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಶಾಮನೂರು ಹೇಳಿಕೆ ನೂರಕ್ಕೆ ನೂರರಷ್ಟು ಸತ್ಯ ಎಂದು ಬಿ.ಸಿ.ಪಾಟೀಲ್ ಟ್ವೀಟ್ ಮಾಡಿದ್ದಾರೆ. ಲಿಂಗಾಯತ ಅಧಿಕಾರಿಗಳಿಗೆ ಬೆಂಗಳೂರಿನಲ್ಲಿ ಸ್ಥಾನ ಇಲ್ಲ. ಓರ್ವ ಐಪಿಎಸ್ ಅಧಿಕಾರಿಗೆ ಮಾತ್ರ ಬೆಂಗಳೂರು ನಗರದಲ್ಲಿ ಸ್ಥಾನ ಸಿಕ್ಕಿದೆ. ಐಎಎಸ್ ಅಧಿಕಾರಿಗಳಿಗಂತೂ ಬೆಂಗಳೂರು ನಗರದಲ್ಲಿ ಸ್ಥಾನವೇ ಇಲ್ಲ. ಕಾಂಗ್ರೆಸ್ ಸರ್ಕಾರ ಲಿಂಗಾಯತರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ ಎಂದು ಸಿಎಂ, ಡಿಸಿಎಂಗೆ ಟ್ಯಾಗ್ ಮಾಡಿ ಮಾಜಿ ಸಚಿವ ಬಿ.ಸಿ.ಪಾಟೀಲ್ ಟ್ವೀಟ್ ಮಾಡಿದ್ದಾರೆ.
ಲೋಕಸಭೆಯಲ್ಲಿ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿ ದೇಶದಲ್ಲಿ ಕಾಂಗ್ರೆಸ್ಸಿಗರು 30 ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಮೈತ್ರಿ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ, ಜೆಡಿಎಸ್ ಮೈತ್ರಿಯಾದರೆ ತಪ್ಪೇನು? ಅವರು ಮೈತ್ರಿ ಮಾಡಿಕೊಂಡರೆ ತಪ್ಪಲ್ಲ, ಇವರು ಮಾಡಿಕೊಂಡ್ರೆ ತಪ್ಪಾ? ಮೈತ್ರಿ ಪಕ್ಷಗಳ ಸೋಲು, ಗೆಲುವಿನ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದರು.
ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ನ ತೀರ್ಮಾನಕ್ಕೆ ನಾವೆಲ್ಲರೂ ಬದ್ಧವಾಗಿರುವುದು ಅಗತ್ಯ. ಕೋರ್ಟ್ ಆದೇಶವನ್ನು ಮೀರಿ ಹೋಗಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ಗೆ ಸಮರ್ಪಕವಾಗಿ ವಾಸ್ತವ ಸ್ಥಿತಿ ವಿವರಿಸಬೇಕು. ಮೊದಲು ಕುಡಿಯಲು ನೀರು ಬೇಕು, ಆನಂತರ ಬೆಳೆಗೆ ನೀರು ಹರಿಸಿ. ನ್ಯಾಯಾಲಯದ ಮೇಲೆ ಪ್ರಭಾವ ಬೀಳುವುದಾದರೆ ಪ್ರತಿಭಟನೆ ಬೇಕು ಎಂದು ಉಡುಪಿಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳ ಹೇಳಿದರು.
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ರೈತರ ಪ್ರತಿಭಟನೆ ಮುಂದುವರಿದಿದೆ. ಶ್ರೀರಂಗಪಟ್ಟಣದ ಕುವೆಂಪು ವೃತ್ತದಿಂದ ತಾಲೂಕು ಕಚೇರಿವರೆಗೆ ನೇಣು ಕುಣಿಕೆ ಹಿಡಿದು ರೈತರು ಬೃಹತ್ ಪ್ರತಿಭಟನಾ ಱಲಿ ನಡೆದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ರೈತರ ಆಕ್ರೋಶ ಹೊರ ಹಾಕಿದ್ದಾರೆ.
ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿದ್ದು ಸತ್ಯ. ಒಬ್ಬ ಜಿಲ್ಲಾಧಿಕಾರಿ ಕೊಟ್ಟಿಲ್ಲ, ಈ ಬಗ್ಗೆ ಸಿಎಂ ಜೊತೆ ಮಾತಾಡುತ್ತೇನೆ. ಎಲ್ಲಿ ಯಾರಿಗೆ ತೊಂದರೆ ಆಗಿದೆ ಎಂದು ಮುಖ್ಯಮಂತ್ರಿ ಬಳಿ ಹೇಳ್ತೇನೆ ಎಂದು ದಾವಣಗೆರೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತೆ ವಾಗ್ದಾಳಿ ನಡೆಸಿದ್ದಾರೆ. 7 ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ, ಅದರ ಬಗ್ಗೆ ಪ್ರಶ್ನೆ ಮಾಡಲ್ಲ. ಲಿಂಗಾಯತ IAS, IPS, ಕೆಎಎಸ್ ಅಧಿಕಾರಿಗಳ ಬಗ್ಗೆ ಹೇಳುತ್ತಿದ್ದೇನೆ. ನಾನು ಸತ್ಯ ಹೇಳಿದ್ದೇನೆ, ಅದಕ್ಕೆ ರಾಜ್ಯಾದ್ಯಂತ ಚರ್ಚೆ ಆಗುತ್ತಿದೆ. ಹೆಚ್.ವಿಶ್ವನಾಥ್ ರೀತಿ ಯಾರಿಗೋ ಬೆಣ್ಣೆ ಹಚ್ಚಿ ಎಂಎಲ್ಸಿ ಆಗಿಲ್ಲ. ಹೆಚ್.ವಿಶ್ವನಾಥ್ರನ್ನು ಹುಚ್ಚಾಸ್ಪತ್ರೆಗೆ ಕಳಿಸಬೇಕು. ಎಲ್ಲಿ ಯಾರಿಗೆ ಅನ್ಯಾಯ ಆಗಿದೆ ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ ಎಂದರು.
ಶಿವಮೊಗ್ಗ ಗಲಭೆ ಸಣ್ಣ ಘಟನೆ ಎಂಬ ಗೃಹ ಸಚಿವರ ಹೇಳಿಕೆಗೆ ಮಂಡ್ಯ ನಗರದಲ್ಲಿ ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಹಿಂದೂಗಳ ಮೇಲೆ ಹಲ್ಲೆ ನಡೆದರೆ ಅದು ಸಣ್ಣ ಗಲಾಟೆ ಆಗುತ್ತೆ. ಅದೇ ಮುಸ್ಲಿಮರ ಮೇಲೆ ಹಲ್ಲೆ ನಡೆದರೆ ಅದು ದೊಡ್ಡ ಗಲಾಟೆ ಆಗುತ್ತೆ. ಕಾಂಗ್ರೆಸ್ ವೋಟ್ ಆಧಾರಿತ ಪಕ್ಷ. ಗೃಹ ಸಚಿವ ಪರಮೇಶ್ವರ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಮಂಡ್ಯದಲ್ಲಿ ಕಾಂಗ್ರೆಸ್ ವಿರುದ್ಧ ಶಾಸಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಪತ್ನಿ ಸಾವಿನಿಂದ ಮನನೊಂದು ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಸಂಚಾರಿ ಠಾಣೆ ಹೆಡ್ ಕಾನ್ಸ್ಟೇಬಲ್ ಜಯಪ್ಪ ಉಪ್ಪಾರ್ ನೇಣಿಗೆ ಶರಣಾಗಿದ್ದಾರೆ. 2 ದಿನದ ಹಿಂದೆ ಜಯಪ್ಪ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿ ಸಾವಿನಿಂದ ಖಿನ್ನತೆಗೊಳಗಾಗಿ ಜಯಪ್ಪ ಉಪ್ಪಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಟಿವಿ9ನಲ್ಲಿ ಹೆಚ್‌ಡಿಕೆ EXCLUSIVE ಸಂದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಡಾ.ಎಂ.ಸಿ.ಸುಧಾಕರ್ ಲೇವಡಿ ಮಾಡಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಅನುಭವಿ ರಾಜಕಾರಣಿ, ಭವಿಷ್ಯ ಹೇಳುವುದನ್ನ ಅಭ್ಯಾಸ ಮಾಡ್ತಿರಬೇಕು. ಹೆಚ್‌ಡಿಕೆ ಭವಿಷ್ಯ ನಿಜವಾದ್ರೆ ಅವರ ಭೇಟಿಗೆ ಅಪಾಯಿಂಟ್ಮೆಂಟ್ ಪಡೆಯುವೆ. ಹೆಚ್.ಡಿ.ಕುಮಾರಸ್ವಾಮಿ ಬಳಿ ನನ್ನ ಭವಿಷ್ಯ ಬಗ್ಗೆ ಕೇಳಿ ತಿಳಿದುಕೊಳ್ಳುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಚಿವ ಡಾ.ಎಂ.ಸಿ.ಸುಧಾಕರ್ ಲೇವಡಿ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ರಾಮನಗರ ಜಿಲ್ಲೆ ಚನ್ನಪಟ್ಟಣದ ಜೆಡಿಎಸ್ ಮುಖಂಡರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಸೇರಿ ಹಲವು ಜೆಡಿಎಸ್ ಮುಖಂಡರು ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ಪಕ್ಷಕ್ಕಾಗಿ ಕೆಲಸ ಮಾಡಿದವರೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ. ಜಾತ್ಯತೀತ ತತ್ವಕ್ಕೆ ತಿಲಾಂಜಲಿ ಇಟ್ಟ ಜೆಡಿಎಸ್ಗೆ ಧಿಕ್ಕಾರಕೂಗಿ ಬರುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.
ಗದಗದಲ್ಲಿ ಭೀಕರ ಬರಕ್ಕೆ ನೇಗಿಲಯೋಗಿ ಅಕ್ಷರಶಃ ಕಂಗಾಲಾಗಿದ್ದಾನೆ. ಮಳೆ ನಂಬಿ ಬಿತ್ತನೆ ಮಾಡಿದ ಬೆಳೆ ನೆಲಬಿಟ್ಟು ಏಳುತ್ತಿಲ್ಲ. 10 ಸಾವಿರಕ್ಕೆ ಕೆಜಿ ಮೆಣಸಿನ ಬೀಜ ಎಂದು ಬಿತ್ತನೆ ಮಾಡಿದ ಅನ್ನದಾತ ಕಂಗಾಲಾಗಿದ್ದಾನೆ. ನೆಲಬಿಟ್ಟು ಎದ್ದ ಅಷ್ಟೋ ಇಷ್ಟು ಬೆಳೆ ಬಿಸಿಲಿನ ಹೊಡೆತಕ್ಕೆ ಒಣಗುತ್ತಿದೆ.
ರಾಜ್ಯದ ಜನ ಉತ್ತರ ಕೊಟ್ಟಿದ್ದಾರೆ. ಗಲಭೆಗೂ ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೆವು. ಆದರೂ ಕೂಡ ಒಂದು ಸಣ್ಣ ಘಟನೆ ನಡೆದಿದೆ. ಅನವಶ್ಯಕವಾಗಿ ಮಾತನಾಡಿ ಪ್ರಚೋದನೆ ಮಾಡೋದು ಸರಿಯಲ್ಲ ಎಂದು ತುಮಕೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಪ್ರತಿಕೃತಿ ದಹನಕ್ಕೆ ಯಾಕೆ ಶಿವಮೊಗ್ಗ ಜಿಲ್ಲಾಡಳಿತ ಅವಕಾಶ ಕೊಟ್ಟಿತು? ಈದ್ ಮಿಲಾದ್ ನಡೆದಿದ್ದೋ ಅಥವಾ ಟಿಪ್ಪು ಜಯಂತಿ ನಡೆಸಿದ್ರೋ? ಮೆರವಣಿಗೆಯಲ್ಲಿ ತಲವಾರು ಹಿಡಿದು ಬೆದರಿಸುವ ಕೆಲಸ ಮಾಡಿದ್ದಾರೆ. ಮತ್ತೊಂದು ಪಾಕಿಸ್ತಾನ ಮಾಡುವ ಸಂಚು ಸ್ಪಷ್ಟವಾಗಿದೆ ಎಂದು ಬೆಂಗಳೂರಿನಲ್ಲಿ ಸರ್ಕಾರದ ವಿರುದ್ಧ ಮಾಜಿ ಶಾಸಕ ಸಿ.ಟಿ.ರವಿ ವಾಗ್ದಾಳಿ ಮಾಡಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ಸಿಗರು 30 ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ, ಜೆಡಿಎಸ್ ಮೈತ್ರಿಯಾದರೆ ತಪ್ಪೇನು? ಅವರು ಮೈತ್ರಿ ಮಾಡಿಕೊಂಡರೆ ತಪ್ಪಲ್ಲ, ಇವರು ಮಾಡಿಕೊಂಡ್ರೆ ತಪ್ಪಾ? ಮೈತ್ರಿಯ ಗೆಲುವು, ಸೋಲು ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಇಡೀ ರಾಜ್ಯದ ಜನ ಬಿಜೆಪಿ ಜೆಡಿಎಸ್ ಅನ್ನು ಬಹಳ ಕೀಳಾಗಿ ತಿರಸ್ಕಾರ ಮಾಡಿದ್ದಾರೆ. ಅವರಿಗೆ ಚೇತರಿಕೆ ಆಗತ್ತೋ ಇಲ್ವೋ ಎನ್ನೋ ಭಯ ಶುರುವಾಗಿದೆ. ಈ ಭಯಕ್ಕೆ ಮೈತ್ರಿ ಮಾಡಿಕೊಂಡು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.
ಸಮಾಜದ ಸ್ವಾಸ್ಥ್ಯ ಕೆಡಿಸುವ ಕಾರ್ಯಕ್ಕೆ ಯಾರು ಕೈ ಹಾಕಬಾರದು. ನಮ್ಮಲ್ಲಿ ನ್ಯಾಯಾಲಯ ಸರಕಾರ ಇದೆ ಅವುಗಳ ಮೇಲೆ ಒತ್ತಡ ಹೇರಿ. ಕಾನೂನು ನ್ಯಾಯ ತೀರ್ಮಾನವನ್ನು ಪ್ರಜೆಗಳು ಕೈಗೆತ್ತಿಕೊಳ್ಳಬಾರದು. ಸಮಾಜದ ಕ್ಷೋಭೆ ಮುಗಿಯೋದಿಲ್ಲ ಎಂದು ಪೇಜಾವರಶ್ರೀ ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ರೀತಿ ಆಪರೇಷನ್ ಹಸ್ತದ ಕೆಲಸವನ್ನೂ ನಾವು ಮಾಡಲ್ಲ. ಸದ್ಯ ನನಗಿರುವ ಮಾಹಿತಿ ಪ್ರಕಾರ ಹೇಳಿದ್ದೇನೆ. ಖಾಸಗಿಯಾಗಿ ಸಿಕ್ಕಾಗ ಕೆಲವರು ನೋವನ್ನ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಸಂಕ್ರಾಂತಿ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು ಅನುಮಾನ: ಮಾಜಿ ಸಚಿವ ಸಿಪಿ ಯೋಗೇಶ್ವರ್
ನಿನ್ನೆ ನಡೆದ ಮುಸಲ್ಮಾನರ ಮೆರವಣಿಗೆ ರಾಜ್ಯ ಸರ್ಕಾರ ತಲೆ ತಗ್ಗಿಸಬೇಕು. ಮೆರವಣಿಗೆಯಲ್ಲಿ ಕೈಯಲ್ಲಿ ತಲ್ವಾರ್ ಹಿಡಿದುಕೊಂಡು ಹೋಗಿದ್ದರು. ಇದು ಯಾರಿಗೆ ಎಚ್ಚರಿಕೆ ಹಿಂದೂ ಸಮಾಜದವರಿಗಾ? ಪೊಲೀಸರು ಹೆದರಿ ಹೋಗಿದ್ದಾರೆ ಈ ಸರ್ಕಾರದಿಂದ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡುವ ಮೂಲಕ ಕಲ್ಲು ತೂರಾಟದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದಾರೆ. ನಿನ್ನೆ ರಾತ್ರಿ ನಡೆದಿದ್ದ ಕಲ್ಲು ತೂರಾಟದಲ್ಲಿ 7 ಜನ ಗಾಯಗೊಂಡಿದ್ದರು. ರೋಹನ್, ಧನಂಜಯ್, ಮಾರುತಿ, ಪ್ರದೀಪ್, ಕಿರಣ್, ಭರತ್, ಶಾಂತಮ್ಮಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿವಮೊಗ್ಗದಲ್ಲಿ ಆದ ಘಟನೆ ಘಟನೆ ಖಂಡಿಸುತ್ತೇನೆ. ಸರ್ಕಾರ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಕೆಲಸ ಸರ್ಕಾರ ಮಾಡುತ್ತಿದೆ. ಮುಂದೆ ಈ ರೀತಿ ಅಹಿತಕರ ಘಟನೆ ಆಗದಂತೆ ಸರ್ಕಾರ ಕ್ರಮಕೈಗೊಳ್ಳತ್ತೆ ಎಂದು ವಿಜ್ಞಾನ, ತಂತ್ರಜ್ಞಾನ ಸಚಿವ ಬೋಸರಾಜ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 60ಕ್ಕೂ ಹೆಚ್ಚು ಜನರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ ಎಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೆರವಣಿಗೆ ವೇಳೆ ಯಾರೋ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಪೊಲೀಸರು, ಮನೆಗಳ ಮೇಲೆ ಕಲ್ಲು ತೂರಿದ್ದವರನ್ನು ಬಂಧಿಸಲಾಗಿದೆ ಎಂದರು.
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಗಿಗುಡ್ಡ, ಶಾಂತಿನಗರದಲ್ಲಿ ಪೊಲೀಸ್ ಹೈಅಲರ್ಟ್ ಆಗಿದ್ದಾರೆ. ಶಾಂತಿನಗರದ ಮುಖ್ಯ ರಸ್ತೆಯಲ್ಲಿ ಪೊಲೀಸರಿಂದ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬೈಕ್ ಸವಾರ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.
ಮಹಾತ್ಮ ಗಾಂಧೀಜಿ ತತ್ವಗಳು ಇಡೀ ಜಗತ್ತಿಗೆ ಆದರ್ಶವಾಗಿವೆ. ಗಾಂಧಿ ಅವರ ಬೋಧನೆಗಳು ನಮಗೆಲ್ಲ ಮಾರ್ಗದರ್ಶನವಾಗಿವೆ. ಮಹಾತ್ಮ ಗಾಂಧಿ ತತ್ವಗಳು ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಿವೆ. ಮಾನವೀಯತೆ, ಏಕತೆ, ಸಹಕಾರ, ಸಹಾನಭೂತಿ ಹೆಚ್ಚಿಸಲು ಪ್ರೇರಣೆ. ಗಾಂಧಿ ಕನಸು ನನಸಾಗಿಸುವ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡೋಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜನ್ಮದಿನಾಚರಣೆ ಪ್ರಯುಕ್ತ ದೆಹಲಿಯ ರಾಜ್ಘಾಟ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ, ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.
I bow to Mahatma Gandhi on the special occasion of Gandhi Jayanti. His timeless teachings continue to illuminate our path. Mahatma Gandhi's impact is global, motivating the entire humankind to further the spirit of unity and compassion. May we always work towards fulfilling his…
— Narendra Modi (@narendramodi) October 2, 2023
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಅವರನ್ನು ಸ್ಮರಿಸುತ್ತಿದ್ದೇವೆ. ಅವರ ಸರಳತೆ, ದೇಶಕ್ಕಾಗಿ ಸಮರ್ಪಣೆ ಮತ್ತು 'ಜೈ ಜವಾನ್, ಜೈ ಕಿಸಾನ್' ಎಂಬ ಸಾಂಪ್ರದಾಯಿಕ ಕರೆ ಇಂದಿಗೂ ಪ್ರತಿಧ್ವನಿಸುತ್ತದೆ, ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಭಾರತದ ಪ್ರಗತಿಗೆ ಅವರ ಅಚಲ ಬದ್ಧತೆ ಮತ್ತು ಸವಾಲಿನ ಸಮಯದಲ್ಲಿ ಅವರ ನಾಯಕತ್ವವು ಅನುಕರಣೀಯವಾಗಿದೆ. ಬಲಿಷ್ಠ ಭಾರತಕ್ಕಾಗಿ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸಲು ನಾವು ಯಾವಾಗಲೂ ಕೆಲಸ ಮಾಡೋಣ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Remembering Lal Bahadur Shastri Ji on his Jayanti. His simplicity, dedication to the nation, and iconic call for 'Jai Jawan, Jai Kisan' resonate even today, inspiring generations. His unwavering commitment to India's progress and his leadership during challenging times remain…
— Narendra Modi (@narendramodi) October 2, 2023
ಇಂದು ಮಹಾತ್ಮ ಗಾಂಧಿ 154ನೇ ಜನ್ಮದಿನಾಚರಣೆ ಹಿನ್ನೆಲೆ ದೆಹಲಿಯ ರಾಜ್ಘಾಟ್ಗೆ ಕಾಂಗ್ರೆಸ್ ನಾಯಕರ ಭೇಟಿ ನೀಡಲಿದ್ದಾರೆ. ಗಾಂಧಿ ಸಮಾಧಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮಿಸಿದ್ದಾರೆ.
Published On - 8:22 am, Mon, 2 October 23