ಸಂಕ್ರಾಂತಿ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು ಅನುಮಾನ: ಮಾಜಿ ಸಚಿವ ಸಿಪಿ ಯೋಗೇಶ್ವರ್

2023 ಮುಗಿದ ಬಳಿಕ ರಾಜಕೀಯ ಬದಲಾವಣೆ ನಿರೀಕ್ಷೆಯಿದೆ. ಸಂಕ್ರಾಂತಿಗೆ ಸೂರ್ಯ ಪಥ ಬದಲಿಸುವ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು ಅನುಮಾನ. ಶಾಸಕರು ನಿರುದ್ಯೋಗಿಗಳಾಗಿದ್ದಾರೆ‌. ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​ ಕಿಡಿಕಾರಿದ್ದಾರೆ.

ಸಂಕ್ರಾಂತಿ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು ಅನುಮಾನ: ಮಾಜಿ ಸಚಿವ ಸಿಪಿ ಯೋಗೇಶ್ವರ್
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 02, 2023 | 12:08 PM

ರಾಮನಗರ, ಅಕ್ಟೋಬರ್​ 02: ಸಂಕ್ರಾಂತಿಗೆ ಸೂರ್ಯ ಪಥ ಬದಲಿಸುವ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು ಅನುಮಾನ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwar)​ ಹೇಳಿದ್ದಾರೆ. ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ರಾಜಕೀಯ ಬೆಳವಣಿಗೆ, ಕಾಂಗ್ರೆಸ್ ನಾಯಕರ ನಡೆಯೇ ಇದಕ್ಕೆ ಕಾರಣ. 2023 ಮುಗಿದ ಬಳಿಕ ರಾಜಕೀಯ ಬದಲಾವಣೆ ನಿರೀಕ್ಷೆಯಿದೆ. ಕಾಂಗ್ರೆಸ್​ನ ಅಸಮಾಧಾನಿತ ಶಾಸಕರು ವಿಮುಖವಾಗಿ ಯೋಚನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೆಲ ಕಾಂಗ್ರೆಸ್ ಶಾಸಕರು ವೈಯಕ್ತಿಕವಾಗಿ ನನ್ನ ಜೊತೆ ಮಾತನಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರು ಡಮ್ಮಿಗಳಾಗಿದ್ದಾರೆ‌. ಅವರಿಗೆ ಶಾಸಕರ ಕಾರ್ಯ ನಿರ್ವಹಿಸಲು ಆಗುತ್ತಿಲ್ಲ. ಸರ್ಕಾರ ಐದು ಗ್ಯಾರಂಟಿ ಕೊಟ್ಟಿದೆ ಹಾಗಾಗಿ ಅನುದಾನ ಕೊಡಲ್ಲ ಅಂತ ಹೇಳಿದ್ದಾರೆ‌. ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದಲ್ಲಿ ದುಡ್ಡಿಲ್ಲ. ಹಾಗಾಗಿ ಕಾಂಗ್ರೆಸ್ ಶಾಸಕರು ನಿರುದ್ಯೋಗಿಗಳಾಗಿದ್ದಾರೆ‌ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದ ಮುಗ್ಧ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸುವ ತಾಕತ್ತು ‘ಜಾತ್ಯಾತೀತ’ ಸಿದ್ದರಾಮಯ್ಯರಿಗಿದೆಯೇ? ಬಿಜೆಪಿ ಪ್ರಶ್ನೆ

ಕಾಂಗ್ರೆಸ್ ಶಾಸಕರಿಗೆ ರಾಜಕೀಯ ಭವಿಷ್ಯದ ಆತಂಕ ಇದೆ. ಹಾಗಾಗಿ ಇದರ ಪರಿಣಾಮವನ್ನ ಸಂಕ್ರಾಂತಿ ವೇಳೆಗೆ ಎಲ್ಲರೂ ನೋಡುತ್ತೀರಾ. ನಾವು ಯಾವುದೇ ರೀತಿಯ ಆಪರೇಷನ್ ಮಾಡುತ್ತಿಲ್ಲ. ನಮ್ಮ ಸಂಪರ್ಕದಲ್ಲಿ ಯಾರೂ ಇಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ: ಹೊಸ ಬಾಂಬ್​ ಸಿಡಿಸಿದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್  

ಡಿಸಿಎಂ ಡಿಕೆ ಶಿವಕುಮಾರ್​ ರೀತಿ ಆಪರೇಷನ್ ಹಸ್ತದ ಕೆಲಸವನ್ನೂ ನಾವು ಮಾಡಲ್ಲ. ಸದ್ಯ ನನಗಿರುವ ಮಾಹಿತಿ ಪ್ರಕಾರ ಹೇಳಿದ್ದೇನೆ. ಖಾಸಗಿಯಾಗಿ ಸಿಕ್ಕಾಗ ಕೆಲವರು ನೋವನ್ನ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಹೊಸ ಬಾಂಬ್​ ಸಿಡಿಸಿದ್ದಾರೆ.

ಬಿಜೆಪಿ-ಜೆಡಿಎಸ್ ಎರಡೂ ಪಕ್ಷಕ್ಕೂ ಅನುಕೂಲ

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎದುರಿಸಲು ಮೈತ್ರಿ ಅನಿವಾರ್ಯ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಧಮನಕಾರಿ ಆಡಳಿತ ಮಾಡುತ್ತಿದೆ. ಡಿಕೆ ಶಿವಕುಮಾರ್​ ಆಪರೇಷನ್ ಹಸ್ತ ಅಂತ ಪ್ರಾರಂಭ ಮಾಡಿದ್ದಾರೆ. ಹಾಗಾಗಿ ಅವರನ್ನ ಎದುರಿಸಲು ಹೊಂದಾಣಿಕೆ ಆಗಿದೆ. ಇದರಿಂದ ಬಿಜೆಪಿ-ಜೆಡಿಎಸ್ ಎರಡೂ ಪಕ್ಷಕ್ಕೂ ಅನುಕೂಲ ಆಗಲಿದೆ ಎಂದರು.

ಇದನ್ನೂ ಓದಿ: ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಖರ್ಗೆ ಅಳಿಯ ಕಣಕ್ಕೆ: ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್​

ಮೈತ್ರಿ ಬಗ್ಗೆ ನಿನ್ನೆ ಜೆಡಿಎಸ್ ಸರ್ವಾನುಮತದ ಒಪ್ಪಿಗೆ ಪಡೆದಿದೆ. ಮುಂದಿನವಾರ ಚನ್ನಪಟ್ಟಣ ಬಿಜೆಪಿ ಸ್ಥಳೀಯ ನಾಯಕರ ಸಭೆ ನಡೆಸುತ್ತೇವೆ. ಮೈತ್ರಿ ಬಗ್ಗೆ ಭೂತ್ ಮಟ್ಟದ ನಾಯಕರು, ಕಾರ್ಯಕರ್ತರಿಗೆ ಮನವರಿಕೆ ಮಾಡಲಾಗುವುದು. ಬಳಿಕ ಜೆಡಿಎಸ್ ನಾಯಕರ ಜೊತೆ ಮತ್ತೊಂದು ಸಭೆ ಮಾಡುತ್ತೇವೆ.

ಟಿಕೆಟ್​ ಹಂಚಿಕೆ ವಿಚಾರ ಹೈಕಮಾಂಡ್​ಗೆ ಬಿಟ್ಟಿದ್ದು. ಬೆಂಗಳೂರು ಗ್ರಾಮಾಂತರ ವಿಚಾರದಲ್ಲಿ ಪಕ್ಷದ ವರಿಷ್ಠರು ಏನೇ ತೀರ್ಮಾನ ಮಾಡಿದರೂ ಬದ್ದ. ಬಿಜೆಪಿಗೆ ಅವಕಾಶ ಸಿಕ್ಕಿದ್ದರೆ, ನನ್ನನ್ನ ಚುನಾವಣೆಗೆ ನಿಲ್ಲಲು ಸೂಚಿಸಿದರೆ ನಾನು ಸ್ಪರ್ಧೆ ಮಾಡುತ್ತೇನೆ. ಒಂದು ವೇಳೆ ಜೆಡಿಎಸ್​ಗೆ ಅವಕಾಶ ನೀಡಿದರೆ ಅವರಿಗೆ ಬೆಂಬಲ ನೀಡುತ್ತೇನೆ. ಮುಂದಿನ ರಾಜಕೀಯ ದೃಷ್ಟಿಯಿಂದ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.