ತಮಿಳುನಾಡಿಗೆ ಕಾವೇರಿ ನೀರು ಹರಿಬಿಡುತ್ತಿರುವುದನ್ನು ವಿರೋಧಿಸಿ ಕಾವೇರಿ ಕೊಳ್ಳದ ಐದು ಜಿಲ್ಲೆಗಳ ರೈತರು, ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಧರಣಿಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸರ್ಕಾರ ಮತ್ತು ಕೇಂದ್ರ ಸಂಸದರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಕಾವೇರಿ ಜಲ ನಿಯಂತ್ರಣ ಸಮಿತಿ ಆದೇಶವನ್ನು ಎತ್ತಿ ಹಿಡಿದಿರುವ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಪ್ರಾಧಿಕಾರ ಹಾಗೂ ಸುಪ್ರಿಂಕೋರ್ಟ್ಗೆ ಮರು ಪರಿಶೀಲನೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸರ್ಕಾರ ಪತನವಾಗಲಿದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿಯವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ನಾಯಕರು ತಿರುಗೇಟು ನೀಡುತ್ತಿದ್ದಾರೆ. ಇದರೊಂದಿಗೆ ರಾಜ್ಯದ ಮಳೆ, ಬರಗಾಲ ಹಾಗೂ ಇನ್ನಿತರ ಲೇಟೆಸ್ಟ್ ಅಪ್ಡೇಟ್ಸ್ ಟಿವಿ9 ಡಿಜಿಟಲ್ನಲ್ಲಿ…
ಯಾದಗಿರಿ: ಲಿಂಗಾಯತ ಸಿಎಂ ವಿಚಾರ ಚರ್ಚೆ ವೇಳೆಯೇ ಡಿಸಿಎಂ ಆಗ್ತೇನೆಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್‌ನಲ್ಲಿ ಮಾತನಾಡಿದ ಅವರು‘ ನನ್ನ ವಿರೋಧಿಗಳು ಸಾಯುತ್ತಾರೆಂದು ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಮಾಡಿದ್ರು, ಇದರಿಂದ ನಾನು ಸೋತಿದ್ದೆನೆ. ಮತದಾರರಿಗೆ ನ್ಯಾಯಕೊಡಿಸುವ ಸಲುವಾಗಿ ನಾನು ರಾಜಕೀಯದಲ್ಲಿ ಜೀವಂತ ಇದ್ದೆನೆ. ಉಪಮುಖ್ಯಮಂತ್ರಿಯಾಗಿ ರಾಜಕೀಯ ನಿವೃತ್ತಿಯಾಗುತ್ತೆನೆ ಎನ್ನುವ ಮೂಲಕ ಡಿಸಿಎಂ ಆಗುವ ಆಸೆಯನ್ನ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ: ಮಂಗಳೂರಿನ ಹೆಸರಾಂತ ಮಹೇಶ್ ಬಸ್ ಟ್ರಾವೆಲ್ಸ್ ಮಾಲೀಕ ಆತ್ಮಹತ್ಯೆ ಮಾಡಿಕೊಂಡ
ಮಂಗಳೂರಿನ ಕದ್ರಿ ಕಂಬಳ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಪ್ರಕಾಶ್ ಶೇಖ(43) ನೇಣಿಗೆ ಶರಣಾದ ವ್ಯಕ್ತಿ. ಇತ ನೂರಕ್ಕೂ ಹೆಚ್ಚು ಬಸ್‌ಗಳನ್ನು ಹೊಂದಿದ್ದು, ಖಾಸಗಿ ಬಸ್, ಟೂರಿಸ್ಟ್, ಲಾರಿ ಉದ್ಯಮದಲ್ಲಿ ಹೆಸರು ಮಾಡಿದ್ದರು. ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲುತೂರಾಟ ಹಿನ್ನಲೆ ಸ್ಥಳಕ್ಕೆ ಪೂರ್ವ ವಿಭಾಗದ ಐಜಿಪಿ ತ್ಯಾಗರಾಜನ್, ಜಿಲ್ಲಾಧಿಕಾರಿ ಸೆಲ್ವಮಣಿ, ಎಸ್‌ಪಿ ಮಿಥುನ್ ಕುಮಾರ್, ಸ್ಥಳೀಯ ಶಾಸಕ ಚನ್ನಬಸಪ್ಪ ಭೇಟಿ ನೀಡಿದ್ದು, ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಬೆಂಗಳೂರು: ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ್ಕೆ ಶೇ.20 ರಷ್ಟು ಬೆಳವಣಿಗೆ ದರ ದಾಖಲು ಆಗಿದೆ. ಹೌದು, ದೇಶದ ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ 2ನೇ ಸ್ಥಾನ ಪಡೆದಿದೆ. ಉಳಿದಂತೆ 1) ಮಹಾರಾಷ್ಟ್ರ 25.137 ಸಾವಿರ ಕೋಟಿ 2)ಕರ್ನಾಟಕ 11.693 ಸಾವಿರ ಕೋಟಿ 3) ತಮಿಳುನಾಡು 10.481 ಸಾವಿರ ಕೋಟಿ 4) ಗುಜರಾತ್ 10.129 ಸಾವಿರ ಕೋಟಿ 5)ಹರಿಯಾಣ 8009 ಸಾವಿರ ಕೋಟಿ
ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆಯಲ್ಲಿ ಕಲ್ಲು ತೂರಾಟಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗ ನಗರದ ರಾಗಿಗುಡ್ಡ ಶಾಂತಿನಗರದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿಯಾಗಿದ್ದು, ಪೊಲೀಸರ ಮೇಲೆ ಕಲ್ಲು ತೂರಿದ ಹಿನ್ನೆಲೆ ಮನೆ ಮನೆಗೆ ಹುಡುಕಿ, ಯುವಕರನ್ನು ವಶಕ್ಕೆ ಪಡೆಯುತ್ತಿದ್ದಾರೆ. ಈವರೆಗೆ ಗಲಾಟೆ, ಕಲ್ಲು ತೂರಾಟ ಮಾಡಿದ 10 ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಗ್ರಾಮಾಂತರ: ಕೊಬ್ಬರಿಗೆ 15ರಿಂದ 25 ಸಾವಿರ ರೂ. ಬೆಂಬಲ ನೀಡುವಂತೆ ಆಗ್ರಹಿಸಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುತ್ತಿದ್ದು, ತುಮಕೂರಿನಿಂದ ಹೊರಟಿರುವ ಪಾದಯಾತ್ರೆ ದಾಬಸ್ಪೇಟೆ ತಲುಪಿದೆ. ಇಂದು ಅಲ್ಲಿಯೇ ವಾಸ್ತವ್ಯ ಹೂಡಿದ ರೈತರು, ನಾಳೆ ದಾಬಸ್ಪೇಟೆಯಿಂದ ಹೊರಟು ನೆಲಮಂಗಲ ತಲುಪಲಿದ್ದಾರೆ. ಬಳಿಕ ಅಕ್ಟೋಬರ್ 4ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರ ನಿರ್ಧಾರ ಮಾಡಿದ್ದಾರೆ.
ಶಿವಮೊಗ್ಗ: ನಗರದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆ ವೇಳೆ ಕಲ್ಲೆಸೆತ ಹಿನ್ನಲೆ ಶಾಂತಿನಗರದ ರಾಗಿಗುಡ್ಡ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಗಿಗುಡ್ಡ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಿ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮನಿ ಆದೇಶಿಸಿದ್ದಾರೆ. ಜೊತೆಗೆ ಶಾಂತಿನಗರದಲ್ಲಿ ಲಘು ಲಾಠಿಚಾರ್ಜ್ ಮಾಡಿದ್ದು, ಈ ವೇಳೆ ಕಿಡಿಗೇಡಿಗಳಿಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ.
ಶಿವಮೊಗ್ಗ: ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸ್ಥಳಕ್ಕೆ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಭೇಟಿ ನೀಡಿ ಪರಿಸ್ಥಿತಿ ಹತೋಟಿಗೆ ತೆಗೆದುಕೊಂಡಿದೆ. ಸ್ಥಳಕ್ಕೆ ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಶಿವಮೊಗ್ಗ: ನಗರದಲ್ಲಿ ಈದ್ ಮಿಲಾದ್ ಹಬ್ಬದ ಸಂಭ್ರಮ ಮನೆಮಾಡಿದ್ದು, ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಈದ್ ಮಿಲಾದ್ ಮೆರವಣಿಗೆ ಅದ್ಧೂರಿಯಿಂದ ನಡೆಯುತ್ತಿದೆ. ಈ ವೇಳೆ ಮುಸ್ಲಿಂ ಸಮುದಾಯದ ಸಾವಿರಾರು ಯುವಕ, ಯುವತಿಯರು ಭಾಗಿಯಾಗಿದ್ದು, ಹಸಿರು ಬಾವುಟ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆಹಾಕಿದ್ದಾರೆ. ಇದರ ಜೊತೆಗೆ ವಿಭಿನ್ನ ವೇಷ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೋಂಡಿದ್ದಾರೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬರೊಬ್ಬರಿ ಎರಡೂವರೆ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ದಾವಣಗೆರೆ: ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗುತ್ತಿದೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರ ‘ಅನ್ಯಾಯ ಆಗ್ತಿದ್ರೆ ಶಾಮನೂರುರವರೇ ಮುಂದೆ ಬಂದು ಸರಿಪಡಿಸಬೇಕು ಎಂದು ಸತೀಶ್ ಜಾರಕಿಹೊಳಿ ಕಿವಿಮಾತು ಹೇಳಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಮಾತನಾಡಿದ ಅವರು ‘ಅನ್ಯಾಯ ಆಗುತ್ತಿರುವ ಬಗ್ಗೆ ಸಿಎಂ ಗಮನಕ್ಕೆ ತಂದ್ರೆ ಸರಿಪಡಿಸುತ್ತಾರೆ. ಈ ಹಿಂದೆ ಬಿಜೆಪಿ ಇದ್ದಾಗ ಯಾವ ಅಧಿಕಾರಿಗಳಿಗೆ ಎನಾಗಿದೆ ಎಂದು ಯಾರು ಮಾತಾಡಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಇದು ಸುರುವಾಗುತ್ತದೆ ಎಂದರು.
ಬೆಂಗಳೂರು: ಹುಟು ಹಬ್ಬದ ಆಚರಣೆ ವೇಳೆ ಭಾರಿ ಅವಘಡ ಸಂಭವಿಸಿದ್ದು, ಆಚರಣೆಯಲ್ಲಿ ಬಳಸಲಾಗಿದ್ದ ಹೀಲಿಯಂ ಬಲೂನ್ ವಿದ್ಯುತ್ ತಂತಿಗೆ ತಗುಲಿ ಬೆಂಕಿ ಅವಘಡ ನಿನ್ನೆ ರಾತ್ರಿ ಕಾಡುಗೋಡಿ ಠಾಣಾ ವ್ಯಾಪ್ತಿಯ ಬೆಲ್ತೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಹಾಗೂ ನಾಲ್ವರು ಮಕ್ಕಳಿಗೆ ಗಾಯಗಳಾಗಿದ್ದು, ಕೂಡಲೇ ವಿಕ್ಟೋರಿಯಾ ಆಸ್ಪತ್ರೆ ರವಾನಿಸಲಾಗಿದೆ.
ಬೆಂಗಳೂರು: ಜೆಡಿಎಸ್ ಬಿಟ್ಟು ಹೋಗದಂತೆ ಶಾಸಕರು, ಮುಖಂಡರಿಗೆ ಜಿಟಿ ದೇವೇಗೌಡ ಪ್ರತಿಜ್ಞೆ ಮಾಡಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿ ಹಿನ್ನೆಲೆ ಅಸಮಾಧಾನದಿಂದ ಮುಖಂಡರು ಪಕ್ಷ ಬಿಟ್ಟು ಹೋಗುತ್ತಿದ್ದು, ಯಾರೂ ಪಕ್ಷ ಬಿಟ್ಟು ಹೋಗದಂತೆ ಪ್ರತಿಜ್ಞೆ ಭೋದನೆ ಮಾಡಿದ್ದಾರೆ. ‘ಪಕ್ಷ ನಮ್ಮ ತಾಯಿ ಇದ್ದಂಗೆ, ಪಕ್ಷದ ಪರವಾಗಿ ವಿಧೇಯರಾಗಿರ್ತೇವೆ. ಪಕ್ಷ ಪರವಾಗಿ ಕೆಲಸ ಮಾಡುತ್ತೇವೆ, ಪಕ್ಷದ ತೀರ್ಮಾನವೇ ಅಂತಿಮ ತೀರ್ಮಾನ, ಪಕ್ಷದ ತೀರ್ಮಾನಕ್ಕೆ ವಿಧೇಯರಾಗಿರ್ತೇವೆ ಎಂದು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.
ರಾಮನಗರ: ಯಾವುದೇ ಕಾರಣಕ್ಕೂ ನಾವು ಸಿದ್ಧಾಂತದಲ್ಲಿ ರಾಜಿಯಾಗುವುದಿಲ್ಲ ಎಂದು ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ವೈಎಸ್ವಿ ದತ್ತಾ ಹೇಳಿದ್ದಾರೆ. ರಾಮನಗರ ತಾಲೂಕಿನ ಕೇತಗಾನಹಳ್ಳಿ ಅಲ್ಲಿರುವ ತೋಟದ ಮನೆಯಲ್ಲಿ ಮಾತನಾಡಿದ ಅವರು ‘ ಈ ಹಿಂದೆ ಬಿಜೆಪಿ ಜೊತೆ ಸೇರಿ ಜೆಡಿಎಸ್ ಆಡಳಿತ ಮಾಡಿರಲಿಲ್ವಾ?. ಭಾರತೀಯ ಜನತಾ ಪಕ್ಷಕ್ಕೆ ಕುಮಾರಸ್ವಾಮಿ ಬಂಬಲ ನೀಡಿದ್ದರು. ಶೋಭಾಯಾತ್ರೆ ವಿಚಾರದಲ್ಲಿ ನಾವು ವಿರೋಧ ಮಾಡಿದ್ದೆವು. ರಾಜ್ಯದ ವಿಚಾರವಾಗಿ ನಾವು ಬಿಜೆಪಿ ಜೊತೆ ಹೋಗಲು ಸಿದ್ಧರಿದ್ದೇವೆ ಎಂದರು.
ಬೆಂಗಳೂರು: ಅಮಿಷ ಒಡ್ಡಿ ಕಾಂಗ್ರೆಸ್ ಬಿಜೆಪಿ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂಬ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹೇಳಿಕೆಗೆ ಡಿಕೆಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ‘ಆಪರೇಟ್ ಕಮಲದ ಬಗ್ಗೆ ಅವರು ನೆನಪು ಮಾಡಿಕೊಳ್ಳಲಿ, ಅಧಿವೇಶನದಲ್ಲಿ ಶಾಸಕ ಶ್ರೀನಿವಾಸ್ ಗೌಡ ಏನ್ ಹೇಳಿದ್ರು ಎಂದು ಗೊತ್ತಿದೆ. ಒಳಗಡೆ ಏನಿದೆ? ಹೊರಗಡೆ ಏನ್ ಬಂತು. ಈಗ ಏನ್ ನಡೆಯುತ್ತಿದೆ ಗೊತ್ತಿದೆ. ಅವರ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಸೀಟಿಗೆ ಏನ್ ಏನ್ ನಡೀತು. ಅವರು ಅದನ್ನ ಮೆಲುಕು ಹಾಕಿಕೊಂಡ್ರೆ ಬಹಳ ಒಳ್ಳೆಯದು. ಎನ್ನುವ ಮೂಲಕ ಡಿಕೆಶಿ ತಿರುಗೇಟು ನೀಡಿದ್ದಾರೆ.
ಗದಗ: ಒನ್ ನೇಷನ್, ಒನ್ ಎಲೆಕ್ಷನ್ನಲ್ಲಿ ರಾಜಕೀಯ ಹುನ್ನಾರದ ವಾಸನೆ ಬರುತ್ತಿದೆ ಎಂದು ಗದಗದಲ್ಲಿ ಕಾನೂನು ಸಚಿನ ಎಚ್. ಕೆ ಪಾಟೀಲ್ ಹೇಳಿದ್ದಾರೆ. ಈ ಮಾತನ್ನು ಎಲೆಕ್ಷನ್ ಕಮೀಷನ್ ಮಾತಾಡುತ್ತಿದೆ. ಇವಾಗ ಅದರ ಅವಶ್ಯಕತೆ ಇತ್ತಾ?. ನಾಲ್ಕು ವರ್ಷದ ಹಿಂದೇ ಮಾತಾಡಬೇಕಿತ್ತು. ಕೇಂದ್ರ ಸರ್ಕಾರ ಚುನಾವಣಾ ವ್ಯವಸ್ಥೆ ಬದಲಾಯಿಸಬೇಕು ಎಂದು ಹೊರಟ್ಟರೆ ರಾಷ್ಟ್ರದ ಜನ್ರು ಒಪ್ಪಲ್ಲ. ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳು ಸೇರಿ ಇಂಡಿಯಾ ಒಕ್ಕೂಟ ಮಾಡಿದ್ದೇವೆ. ಇಂಡಿಯಾ ಒಕ್ಕೂಟ ಆದ ಮೇಲೆ ಬಿಜೆಪಿ ಯವರಿಗೆ ಗೆಲುವಿನ ವಿಶ್ವಾಸ ಹೋಗಿದೆ. ಬಿಜೆಪಿ ಏನು ರಾಜಕೀಯ ಗಿಮಿಕ್ ಮಾಡಿದ್ರೆ, ಅನುಕೂಲ ಆಗುತ್ತೇ ಎಂದು ಚಿಂತನೆ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಬಾಗಲಕೋಟೆ: ಬಿಜೆಪಿ-ಜೆಡಿಎಸ್ ಮೈತ್ರಿ ಯಿಂದ ಕಾಂಗ್ರೆಸ್ಗೆ ದೊಡ್ಡ ಲಾಭ ಆಗುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಬಾಗಲಕೋಟೆಯಲ್ಲಿ ಹೇಳಿದ್ದಾರೆ. ‘ಇವತ್ತು ಡೈರಿಯಲ್ಲಿ ಬೇಕಾದರೆ ಬರೆದು ಇಟ್ಕೊಳ್ರಿ, ಮಹಾಲಿಂಗಪುರಕ್ಕೆ ಬಂದಾಗ ಲಕ್ಷ್ಮಣ ಸವದಿ ಹೇಳಿದ್ದ ಮಾತು, ನಿಜ ಆಯ್ತು ಎಂದುಕೊಳ್ಳಿ ಎಂದರು. ಇನ್ನು
ಲೋಕಸಭೆ ಚುನಾವಣೆಯ ಬಳಿಕ ಮತ್ತೆ ನಾನು ನಿಮ್ಮ ಜೊತೆ ಚರ್ಚೆ ಮಾಡ್ತಿನಿ. ಸುಮಾರು 20ಸ್ಥಾನದವರೆಗೆ ಮುಟ್ಟಲಿಕ್ಕೆ ನಮಗೆ ತೊಂದರೆಯಿಲ್ಲ, ಲೆಕ್ಕಾಚಾರ ಹಾಕಿಕೊಂಡಿದ್ದೇವೆ ಎಂದಿದ್ದಾರೆ.
ಬೆಂಗಳೂರು: ‘ವೀರಶೈವ ಸಮುದಾಯ ಕಡೆಗಣನೆ ವಿಚಾರ ಗಂಭೀರವಾಗಿ ಪರಿಗಣಿಸಿ ಎಂಬ ಮಾಜಿ ಸಿಎಂ ಬಿಎಸ್ವೈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ‘ ಇದು ಜಾತ್ಯಾತೀತ ಸರ್ಕಾರ, ಯಾರಿಗೂ ತೊಂದರೆ ಆಗೋದಿಲ್ಲ. ಶಕ್ತಿ ಯೋಜನೆ ಬರೀ ಒಂದು ಸಮುದಾಯಕ್ಕೆ ತಂದಿದ್ದೀವಾ? ಜಾತ್ಯಾತೀತ ಯೋಜನೆ ಅದು. ಅನ್ನ ಭಾಗ್ಯ, ಗೃಹ ಜ್ಯೋತಿ ,ಗೃಹ ಲಕ್ಷ್ಮಿ ಇದಕ್ಕೆ ಜಾತಿ ಇದೆಯಾ? ಎಲ್ಲಾ ಜಾತಿಯನ್ನ ಸಮಾನವಾಗಿ ನೋಡೋದು ನಮ್ಮ ಸರ್ಕಾರ ಎಂದರು.
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವ ವಿಚಾರ ‘ಮಳೆ ಕಡಿಮೆ ಆದಾಗ ಕಾವೇರಿ ನದಿ ನೀರು ವಿವಾದ ಸದ್ದು ಮಾಡುತ್ತೆ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ. ಮಳೆಗಾಲ ಕ್ಷೀಣಿಸಿದಾಗ ನೀರಿಗೆ ಒತ್ತಡ ಇದ್ದು, ಇದು ತಮಿಳುನಾಡಿನ ವಸ್ತುಸ್ಥಿತಿಗೆ ನಾಚಿಸುವಂತಿದೆ. ಕರ್ನಾಟಕದ ನಿರ್ಧಾರವನ್ನ ನಾನು ಸಮರ್ಥನೆ ಮಾಡ್ತೇನೆ. ನಾನು ಸಿಎಂ ಆಗಿದ್ದಾಗಲೂ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಅಟಲ್ ಅವರು ಉಭಯ ಸಿಎಂಗಳ ಜೊತೆ ಸಂಧಾನ ಮಾಡಲು ಪ್ರಯತ್ನಿಸಿದರು. ಆದ್ರೆ, ಸಫಲ ಆಗಲಿಲ್ಲ. ಅಂತಿಮವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಬೇಕಾಯ್ತು ಎಂದರು.
ಯಾದಗಿರಿ: ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳಲ್ಲಿ 19 ಜನರಿಗೆ ವಾಂತಿ, ಭೇದಿಯಿಂದ ಬಳಲುತ್ತಿದ್ದಾರೆ. 19 ಜನ ಅಸ್ವಸ್ಥರಾಗಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಮರಾಜನಗರ: ತಮಿಳುನಾಡಿಗೆ ನೀರು ಹರಿಸಬೇಕೆಂದು CWMA ಆದೇಶಕ್ಕೆ ವಿರೋಧಿಸಿ ಭುವನೇಶ್ವರಿ ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳು ಧರಣಿ ನಡೆಸಿದವು. ಒಣಗಿದ ಸೊಪ್ಪು, ತರಕಾರಿ ಬೆಳೆ ಹಿಡಿದು ವಿವಿಧ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ತಮಿಳುನಾಡಿಗೆ ನೀರು ಬಿಟ್ಟಿದ್ದರಿಂದ ಕಾವೇರಿ ನೀರು ಕಡಿಮೆಯಾಗುತ್ತಿದೆ. ಪ್ರಧಾನಿ ಮೋದಿ ಕರ್ನಾಟಕ, ತಮಿಳುನಾಡು ನಡುವೆ ಮಧ್ಯಸ್ಥಿಕೆ ವಹಿಸಬೇಕು ಎಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿದವು.
ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಸಮುದಾಯಕ್ಕೆ ಅಧಿಕಾರಕ್ಕೆ ಬಂದಂಗೆ. ನಮ್ಮದೇ ಫಿಲಾಸಫಿ, ನಮ್ಮದೇ ತತ್ವ ಸಿದ್ದಾಂತದ ಮೇಲೆ ಕೆಲಸ ಮಾಡಿಕೊಂಡು ಬಂದಿದ್ದೇವೆ. ಎಸ್ಎಂ ಕೃಷ್ಣ ಅವರಿಂದಾಗಿ ಇಡೀ ದೇಶದಲ್ಲಿ ಬಿಸಿಯೂಟ ಇಡೀ ರಾಜ್ಯದಲ್ಲಿ ಸಾಧ್ಯವಾಯಿತು. ಹೆಣ್ಣು ಮಕ್ಕಳ ಸಾಬಲ್ಯಕ್ಕೆ ಸ್ತ್ರೀ ಶಕ್ತಿ ಕಾರ್ಯಕ್ರಮ ತಂದರು. ಮೊದಲ ಗ್ಲೋಬಲ್ ಇನವೆಸ್ಟರ್ಸ್ ಮೀಟ್ ಮಾಡಿದ್ದು ಎಸ್ ಎಂ ಕೃಷ್ಣ ಕಾಲದಲ್ಲೇ. ಎಲ್ಲ ವರ್ಗಕ್ಕೆ ಭೂಮಿ ಯೋಜನೆಯಿಂದ ಅನುಕೂಲ ಆಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರು: ಶಾಮನೂರು ಶಿವಶಂಕರಪ್ಪ ನಮ್ಮ ಸಮುದಾಯ, ಪಕ್ಷದ ಹಿರಿಯ ನಾಯಕರು. ಶಾಮನೂರು ಶಿವಶಂಕರಪ್ಪನವರ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೇವೆ. ಸಮುದಾಯದ ಅಧಿಕಾರಿಗಳಿಗೆ ಆ ರೀತಿ ಆಗಿದ್ದರೆ ಚರ್ಚಿಸಿ ಬಗೆಹರಿಸುತ್ತೇವೆ. ಸಿದ್ದರಾಮಯ್ಯ ಸಂಪುಟದಲ್ಲಿ ಲಿಂಗಾಯತ ಸಮುದಾಯದ 7 ಜನ ಸಚಿವರಿದ್ದೇವೆ. ಹಿರಿಯರು ಹೇಳಿರುವ ವಿಚಾರದ ಬಗ್ಗೆ ಸಂಬಂಧಿಸಿದವರ ಜೊತೆ ಮಾತಾಡುತ್ತೇವೆ. ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಸಮಸ್ಯೆಯಾಗಿದ್ದರೆ ಸಿಎಂ ಗಮನಕ್ಕೆ ತರುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೇಳಿದರು.
ಮಂಡ್ಯ: ಕಾವೇರಿ ನೀರಿಗಾಗಿ ಮಂಡ್ಯದಲ್ಲಿ ರೈತ ಹಿತರಕ್ಷಣಾ ಸಮಿತಿಯಿಂದ ಧರಣಿ ಸತ್ಯಾಗ್ರಹ ಮುಂದುವರೆದಿದೆ. ತಮಿಳುನಾಡಿಗೆ ನೀರು ಹರಿಸುತ್ತಿರೋದನ್ನ ಖಂಡಿಸಿ ತಕ್ಷಣ ನೀರು ನಿಲ್ಲಿಸಲು ಆಗ್ರಹಿಸಿದ್ದಾರೆ. ರೈತರಿಗಿಂತ ಅಧಿಕಾರವೇ ಮುಖ್ಯ ಆಯ್ತಾ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಧರಣಿಯಲ್ಲಿ ರೈತ ಮುಖಂಡರು ಭಾಗಿಯಾಗಿದ್ದಾರೆ.
ಚಿಕ್ಕಮಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದ್ದು, ಚಿತ್ರನಟ ನೆನಪಿರಲಿ ಪ್ರೇಮ್ ಸಾಥ್ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರೇಮ್ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಕಾವೇರಿ ನಮ್ಮದು ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕಾವೇರಿ ವಿಚಾರವಾಗಿ ರಾಜ್ಯಕ್ಕೆ ನ್ಯಾಯ ನೀಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ರಾಯಚೂರು: ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯ ಆಗುತ್ತಿಲ್ಲ. ಶಾಮನೂರು ಶಿವಶಂಕರಪ್ಪ ಅವರ ಮಗ ಮಲ್ಲಿಕಾರ್ಜುನ ಸಚಿವರಾಗಿದ್ದಾರೆ. ಅವರಿಗೆ ಎಷ್ಟು ಪ್ರಾಧಾನ್ಯತೆ ಕೊಡಬೇಕು, ಕೊಡಲಾಗಿದೆ. ಇನ್ನು ಕೊಡಬೇಕಂದರೇ ಕೊಡುತ್ತಾರೆ. ಶಿವಶಂಕ್ರಪ್ಪನವರು ನಮ್ಮ ಹಿರಿಯ ನಾಯಕರು. ಪಕ್ಷನಿಷ್ಟೆಗೆ ಮಾದರಿಯಾಗಿರುವವರು. ಅವರಿಗೆ ಪಕ್ಷ ಕೂಡ ಗೌರವ ಕೊಟ್ಟಿದೆ. ಅಧಿಕಾರಿಗಳು ಮಾತನಾಡಿರಬಹುದು, ಅದಕ್ಕೆ ಸಹಜವಾಗಿ ಎಲ್ಲೋ ಕುಳಿತಲ್ಲಿ ಮಾತನಾಡಿರುತ್ತಾರೆ. ಅದು ಬಿಟ್ಟರೆ ಏನಿಲ್ಲ. ಅವರು ನಿಷ್ಟಾವಂತರು ಎಂದು ಸಚಿವ ಎನ್ಎಸ್ ಬೋಸರಾಜ್ ಹೇಳಿದರು.
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ನಾಯಕರಿಕೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿ ಶಾಮನೂರು ಶಿವಶಂಕರಪ್ಪ ವೀರಶೈವ ಸಮಾಜದ ರಾಷ್ಟ್ರೀಯ ಅಧ್ಯಕ್ಷರು. ಶಾಮನೂರು ಅವರು ವ್ಯಕ್ತಪಡಿಸಿರುವ ಭಾವನೆಗಳಿಗೆ ನನ್ನ ಸಂಪೂರ್ಣ ಬೆಂಬಲ ಇದೆ. ವೀರಶೈವ ಸಮುದಾಯದವರು ಬಹಳ ದೊಡ್ಡ ಪ್ರಮಾಣದಲ್ಲಿ ಇದ್ದಾರೆ. ಆದರೆ ಸಮುದಾಯದವರನ್ನು ಕಡೆಗಣಿಸಲಾಗುತ್ತಿದೆ. ಇದರ ಬಗ್ಗೆ ಶಾಮನೂರು ಅವರಿಗೆ ಕಳಕಳಿ ಇದೆ. ಹೀಗಾಗಿ ಎಲ್ಲ ವೀರಶೈವ ಸಮುದಾಯದ ಮುಖಂಡರಲ್ಲಿ ಇದೇ ತಳಮಳ ಇದೆ. ಹೀಗಾಗಿ ಅವರ ಹೇಳಿಕೆಯನ್ನು ನಾನು ಸಂಪೂರ್ಣ ಒಪ್ಪುತ್ತೇನೆ. ಈ ಸಮಯದಲ್ಲಿ ವೀರಶೈವ ಲಿಂಗಾಯತ ಸಮಾಜದವರು ಜಾಗೃತ ಆಗಬೇಕು, ಒಂದಾಗಬೇಕು, ಒಟ್ಟಾಗಬೇಕು ಅನ್ನೋ ಕರೆಯನ್ನು ನಾನು ಸಹ ಕೊಡುತ್ತೇನೆ ಎಂದರು.
ಬೆಂಗಳೂರು: ವಾರ್ಡ್ ಪುನರ್ವಿಂಗಡಣೆ ಅಂತಿಮಪಟ್ಟಿಯ ನಕ್ಷೆಯನ್ನು ಬಿಬಿಎಂಪಿ ಬಿಡುಗಡೆ ಮಾಡಿದೆ. 2011ರ ಜನಗಣತಿಯ ಆಧಾರದ ಮೇರೆಗೆ ವಾರ್ಡ್ವಾರು ಪುನರ್ವಿಂಗಡಣೆ ಮಾಡಲಾಗಿದೆ. bbmpdelimitation2023.com/ ವೆಬ್ಸೈಟ್ನಲ್ಲಿ ವಾರ್ಡ್ ಮಾಹಿತಿ ಲಭ್ಯವಿದ್ದು, ತಮ್ಮ ವಾರ್ಡ್ಗಳ ನಕ್ಷೆಯನ್ನ ಸಾರ್ವಜನಿಕರು ವೀಕ್ಷಿಸಬಹುದಾಗಿದೆ.
ಚಿಕ್ಕಮಗಳೂರು: ಆರು ತಿಂಗಳಿನಲ್ಲಿ ಸರ್ಕಾರ ಬಿದ್ದು ಹೋಗುತ್ತದೆ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ, ಹೆಚ್ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ನಾಲ್ಕು ತಿಂಗಳು ಮುಗಿಸಿ 5ನೇ ತಿಂಗಳಿಗೆ ಈ ಸರ್ಕಾರ ಬಂದಿದೆ. ಆದರೆ ಐದು ತಿಂಗಳಲ್ಲಿ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ಈ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ, ಸ್ವಜನ ಪಕ್ಷಪಾತದ ಉತ್ತುಂಗಕ್ಕೆ ಏರಿದೆ ಎಂದು ಆರೋಪಿಸಿದರು.
ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ
ಇಂದಿನ ನೀರಿನ ಮಟ್ಟ – 2897.90 ಅಡಿ,
ಜಲಾಶಯದ ಗರಿಷ್ಠ ನೀರಿನ ಮಟ್ಟ – 2922 ಅಡಿ,
ಒಟ್ಟು ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ,
ಇಂದಿನ ಸಂಗ್ರಹ ಸಾಮರ್ಥ್ಯ – 18.500 ಟಿಎಂಸಿ,
ಬಳಕೆಗೆ ಲಭ್ಯವಿರುವ ನೀರು – 14. 128 ಟಿಎಂಸಿ,
ಒಳಹರಿವು – 2378 ಕ್ಯೂಸೆಕ್,
ಹೊರಹರಿವು – 1360 ಕ್ಯುಸೆಕ್ ಇದೆ.
ಬೆಂಗಳೂರು: ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ದಳದ ನಾಯಕರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕರು, ಮಾಜಿ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳ ಜೊತೆಗೆ ಬೆಳಗ್ಗೆ 11 ಗಂಟೆಗೆ ಬಿಡದಿಯ ತೋಟದ ಮನೆಯಲ್ಲಿ ಸಭೆ ನಡೆಸಲಿದ್ದಾರೆ.
ಮೈಸೂರು: ಕೇರಳದ ವಯನಾಡು ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಿದ ಹಿನ್ನೆಲೆಯಲ್ಲಿ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಒಳಹರಿವಿನ ಪ್ರಮಾಣ 4565 ಕ್ಯೂಸೆಕ್‌ಗೆ ಏರಿದೆ. ಹೊರಹರಿವು 1 ಸಾವಿರ ಕ್ಯೂಸೆಕ್ ಇದೆ. 84 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ 73.85 ಅಡಿ ನೀರು ಇದೆ. ಗರಿಷ್ಠ 19.52 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವಿದ್ದು, ಜಲಾಶಯದಲ್ಲಿ ಸದ್ಯಕ್ಕೆ 13.65 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ 18.60 ಟಿಎಂಸಿ ನೀರು ಸಂಗ್ರಹವಿತ್ತು.
ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ಪ್ರಾಧಿಕಾರ ಸೂಚನೆ ಹಿನ್ನೆಲೆಯಲ್ಲಿ ಪ್ರಾಧಿಕಾರದ ಸೂಚನೆ ಖಂಡಿಸಿ ಇಂದು ಮಂಡ್ಯದಲ್ಲಿ ಸಾಲು ಸಾಲು ಪ್ರತಿಭಟನೆಗಳು ನಡೆಯಲಿವೆ. ಬೆಳಗ್ಗೆ ಹತ್ತು ಗಂಟೆಗೆ ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ, ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ನಡೆಯಲಿದೆ. ಬೆಳಗ್ಗೆ 11.30 ಕ್ಕೆ ಅಖಂಡ ಕರ್ನಾಟಕ ರಕ್ಷಣಾ ಸೇವಾದಳ ಕಾರ್ಯಕರ್ತರು ಮಂಡ್ಯದ ಸಂಜಯ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಬೆಳಗ್ಗೆ 11.30 ಕ್ಕೆ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ.
Published On - 8:11 am, Sun, 1 October 23