ವಿಜಯಪುರ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದು, ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗಿಳಿದ ಬಳಿಕವೂ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇನ್ನೂ ರಾಜಕೀಯ ಬಾಂಬ್ಗಳನ್ನು ಸಿಡಿಸುತ್ತಲೇ ಇದ್ದಾರೆ. ಅವರೀಗ ನನಗೆ ಮುಖ್ಯಮಂತ್ರಿ ಆಗೋ ಅವಕಾಶವಿತ್ತು, ಯಡಿಯೂರಪ್ಪ ನನಗೆ ಅವಕಾಶ ತಪ್ಪಿಸಿದರು. ಯತ್ನಾಳ್ ಅವರನ್ನ ಸಿಎಂ ಮಾಡಿದರೆ ಮೂರು ತಿಂಗಳಲ್ಲಿ ಸರ್ಕಾರ ಕೆಡವುತ್ತೇನೆಂದು ಕೇಂದ್ರದ ನಾಯಕರ ಮುಂದೆ ಯಡಿಯೂರಪ್ಪ ಬೆದರಿಕೆ ಹಾಕಿದ್ದರು ಎಂದು ಹೊಸ ಆರೋಪ ಮಾಡಿದ್ದಾರೆ.
ನನಗೆ ಮುಖ್ಯಮಂತ್ರಿ ಆಗುವ ಅವಕಾಶವನ್ನು ಯಡಿಯೂರಪ್ಪ ತಪ್ಪಿಸಿದರು. ಆದರೆ ಈಗ ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲ್ಲಾ. ಈ ಹಿಂದೆ ನಾನೇನೂ ದೆಹಲಿಯಲ್ಲಿ ಲಾಬಿ ಮಾಡಿ ಕೇಂದ್ರದಲ್ಲಿ ಸಚಿವ ಆಗಿರಲಿಲ್ಲ. ಮೋದಿ ಪ್ರಾಮಾಣಿಕರು, ದೇಶಕ್ಕಾಗಿ ಪರಿವರ್ತನೆ ಯಜ್ಞ ಮಾಡುತ್ತಿದ್ದಾರೆ. ದೆಹಲಿ ಲಾಬಿ ಮಾಡಿ ಮಂತ್ರಿಯಾಗೋವಷ್ಟು ಕೆಳಮಟ್ಟದ ರಾಜಕಾರಣಿಯಲ್ಲಾ ನಾನು. ಯಡಿಯೂರಪ್ಪ ಒಬ್ಬರೇ ಬೊಮ್ಮಾಯಿ ಅವರನ್ನಾ ಸಿಎಂ ಮಾಡಿಲ್ಲ. ಯತ್ನಾಳ್ ಅವರನ್ನ ಸಿಎಂ ಮಾಡಿದರೆ ಮೂರು ತಿಂಗಳಲ್ಲಿ ಸರ್ಕಾರ ಕೆಡವುತ್ತೇನೆಂದು ಕೇಂದ್ರದ ನಾಯಕರ ಮುಂದೆ ಯಡಿಯೂರಪ್ಪ ಬೆದರಿಕೆ ಹಾಕಿದರು ಎಂದು ಯತ್ನಾಳ್ ಹೇಳಿದ್ದಾರೆ.
ಯತ್ನಾಳ್ ಸಿಎಂ ಆದರೆ ಇವರೆಲ್ಲಾ ಜೈಲಿಗೆ ಹೋಗ್ತಾರೆ ಎಂಬ ಭಯವಿದೆ. 10 ಸಾವಿರ ಕೋಟಿ ಭ್ರಷ್ಟಾಚಾರವನ್ನು ಮಾಜಿ ಸಿಎಂ ಯಡಿಯೂರಪ್ಪ ಮಾಡಿದ್ದಾರೆ ಎಂದು ಇದೇ ವೇಳೆ ಯತ್ನಾಳ್ ಆರೋಪ ಮಾಡಿದರು. ಯಡಿಯೂರಪ್ಪ ತಾವು ಶಿಕಾರಿಪುರದ ಸಿಎಂ ಎಂಬಂತೆ ವರ್ತಿಸಿದರು. ತಮ್ಮ ಭಾಗಕ್ಕೇ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಕೊಂಡಿದ್ದಾರೆ. ಈಗ ಜಿಲ್ಲೆಗಳ ಪ್ರವಾಸಕ್ಕೆ ಬರುತ್ತೇನೆಂದು ಹೇಳುತ್ತಿದ್ದಾರೆ. ಯಡಿಯೂರಪ್ಪ ವಿಜಯಪುರ ಜಿಲ್ಲೆಗೆ ಬರಲಿ ನಾನೇ ಈ ಕುರಿತು ಪ್ರಶ್ನೆ ಮಾಡುತ್ತೇನೆ. ನನ್ನ ಬಗ್ಗೆ ಯಡಿಯೂರಪ್ಪ ಅವರಿಗೆ ಭಯ ಇದೆ. ಅದಕ್ಕೇ ನನಗೆ ಸಿಎಂ ಸ್ಥಾನ ತಪ್ಪಿಸಿದರು ಎಂದು ಯತ್ನಾಳ್ ಆರೋಪಿಸಿದರು.
ಮುಖ್ಯಮಂತ್ರಿ ಆಗಲು ಬಸವರಾಜ ಬೊಮ್ಮಾಯಿ ಅವರ ಹೆಸರಿಗಿಂತ ಮುಂಚೆಯೇ ನನ್ನ ಹೆಸರೇ ಇತ್ತು:
ರಾಜ್ಯದ ಮುಖ್ಯಮಂತ್ರಿ ಆಗಲು ಬಸವರಾಜ ಬೊಮ್ಮಾಯಿ ಅವರ ಹೆಸರಿಗಿಂತ ಮುಂಚೆಯೇ ನನ್ನ ಹೆಸರೇ ಇತ್ತು. ಆದರೆ ಅದನ್ನು ತಪ್ಪಿಸಿದರು. ಬಿಎಸ್ವೈ ತನ್ನ ಸುಪುತ್ರ ಭ್ರಷ್ಟ ವಿಜಯೇಂದ್ರನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಲು ಈ ತಂತ್ರ ಮಾಡಿದ್ದಾರೆ. ನಾನು ಪ್ರಾಮಾಣಿಕ ಇದ್ದೇನೆ, ನಾನೇನಾದರೂ ಸಿಎಂ ಆಗಿದ್ದರೆ ಇಡೀ ರಾಜ್ಯದಲ್ಲಿ ಹಿಂದುತ್ವದ ಅಲೆ ಏಳುತ್ತಿತ್ತು. ಹಿಂದುತ್ವದ ಆಧಾರದ ಮೇಲೆ ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆದ್ದರೆ, ಅವರ ಅಸ್ತಿತ್ವಕ್ಕೆ ಧಕ್ಕೆ ಆಗುತ್ತಿತ್ತು. ಎಲ್ಲ ಮಠಾಧೀಶರ ಬಾಯಿ ಬಂದ್ ಆಗುತ್ತಿತ್ತು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ನಾನು ಮಂತ್ರಿ ಆಗಲ್ಲ ಎಂಬ ಶೆಟ್ಟರ್ ಹೇಳಿಕೆ ಕುರಿತು ಮಾತನಾಡಿದ ಯತ್ನಾಳ್ ಜಗದೀಶ್ ಶೆಟ್ಟರ್ ಅವರಿಗೆ ಸ್ವಾಭಿಮಾನ ಹಾಗೂ ನೈತಿಕತೆ ಬಗ್ಗೆ ಬಹಳ ತಡವಾಗಿ ಜ್ಞಾನೋದಯವಾಗಿದೆ. ಇನ್ನೂ ಬೇಗನೆ ಅವರಿಗೆ ಜ್ಞಾನೋದಯವಾಗಬೇಕಿತ್ತು. ಆದರೆ ಈವಾಗ ಆಗಿದೆಯೆಂದು ಟಾಂಗ್ ಕೊಟ್ಟರು.
ಬಿ.ಎಸ್.ಯಡಿಯೂರಪ್ಪ ಕೆಳಗಿಳಿದರು ಅದಕ್ಕೆ ಗಡ್ಡ ತೆಗೆದೆ; ಬಸನಗೌಡ ಪಾಟೀಲ್ ಯತ್ನಾಳ್
(bs yediyurappa played spoilsport in i am becoming the chief minister of karnataka says yatnal )
Published On - 1:01 pm, Fri, 30 July 21