ಬೆಳಗಾವಿ: ಕಳೆದ ಕೆಲ ದಿನಗಳಿಂದ ಬೆಳಗಾವಿ ಉಪಚುನಾವಣಾ ಪ್ರಚಾರದಲ್ಲಿ ಮಗ್ನರಾಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬೈಕ್ ಮೆರವಣಿಗೆ ಆಯೋಜಿಸಿದ್ದ ವೇಳೆ, ರೋಡ್ ಶೋನಲ್ಲಿ ತೆರೆದ ವಾಹನ ಏರಲು ಯಡಿಯೂರಪ್ಪ ತುಸು ಕಷ್ಟಪಟ್ಟಿದ್ದರು. ಅದಾದ ಬಳಿಕ ರೋಡ್ ಶೋ ಆಯೋಜನೆ, ಟ್ರಾಫಿಕ್ ನಿರ್ವಹಣೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಕಾರಿನಲ್ಲೇ 5 ನಿಮಿಷಗಳಿಗೂ ಹೆಚ್ಚು ಕಾಲ ಕುಳಿತಿದ್ದ ಸಿಎಂ ಹಾಗೂ ಸಚಿವರು ಸುಸ್ತಾಗಿದ್ದರು.
ಮೊನ್ನೆ ರಾತ್ರಿಯಿಡೀ ಜ್ವರದಿಂದ ಬಳಲಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಸಿಲಿನ ತಾಪ ತಾಳಲಾರದೇ ರಕ್ಷಣೆಗಾಗಿ ಟೋಪಿ ಮತ್ತು ಕೊಡೆಯ ಮೊರೆ ಹೋಗಿದ್ದರು. ಅಷ್ಟೇ ಅಲ್ಲದೇ ಪ್ರಚಾರದ ವೇಳೆಯೇ ಮುಖ್ಯಮಂತ್ರಿಗಳಿಗೆ ಕೊರೊನಾ ಸೋಂಕು ತಗುಲಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿತ್ತು. ಏಪ್ರಿಲ್ 12 ರಂದು ಬೀದರ್ನ ಬಸವಕಲ್ಯಾಣದಲ್ಲಿ ಪ್ರಚಾರ ನಡೆಸುವ ವೇಳೆ ಡೋಲೋ 650 ಮಾತ್ರೆ ನುಂಗಿದ್ದು ಟಿವಿ9 ಕ್ಯಾಮೆರದಲ್ಲಿ ಸೆರೆಯಾಗಿತ್ತು. ಹೀಗಾಗಿ ಅಂದೇ ಮುಖ್ಯಮಂತ್ರಿಗಳಿಗೆ ತೀವ್ರ ಜ್ವರ ಕಾಡಿತ್ತು ಎಂಬ ಅನುಮಾನ ಬಲವಾಗಿದೆ.
ನಂತರ ರೋಡ್ ಶೋ ವೇಳೆಯೂ ಸುಸ್ತು ತಾಳಲಾರದೇ ಅದನ್ನು ಅರ್ಧಕ್ಕೇ ಮೊಟಕುಗೊಳಿಸಿದ ಯಡಿಯೂರಪ್ಪ, ವಿಶ್ರಾಂತಿ ಪಡೆಯಲು ಹೊಟೇಲ್ಗೆ ಆಗಮಿಸಿದ್ದರು. ಇದೀಗ ಮುಖ್ಯಮಂತ್ರಿಗಳಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಪ್ರಚಾರದ ವೇಳೆ ಸಾಕಷ್ಟು ಜನರೊಂದಿಗೆ ಸಿಎಂ ಸಂಪರ್ಕಕ್ಕೆ ಬಂದಿರುವುದರಿಂದ ಸೋಂಕು ಇತರರಿಗೆ ಹರಡಿರುವ ಸಾಧ್ಯತೆಯೂ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳೂ ಟ್ವೀಟ್ ಮಾಡಿದ್ದು ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದ್ದಾರೆ.
ಜ್ವರದ ಹಿನ್ನಲೆಯಲ್ಲಿ ಇಂದು ತಪಾಸಣೆಗೆ ಒಳಪಟ್ಟಾಗ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿರುತ್ತದೆ. ಅಲ್ಪ ಪ್ರಮಾಣದಲ್ಲಿ ರೋಗ ಲಕ್ಷಣಗಳಿರುವುದರಿಂದ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್ ನಲ್ಲಿದ್ದು, ಒಮ್ಮೆ ಪರೀಕ್ಷಿಸಿಕೊಳ್ಳಿ ಎಂದು ಕೋರುತ್ತೇನೆ
— B.S. Yediyurappa (@BSYBJP) April 16, 2021