ಬೆಂಗಳೂರು, (ಜುಲೈ 29): ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ, ಮುಡಾ ನಿವೇಶನ ಹಗರಣ ಹಾಗೂ ಪರಿಶಿಷ್ಟರ ಉಪಯೋಜನೆ ಹಣ ದುರ್ಬಳಕೆ ಮುಂದಿಟ್ಟುಕೊಂಡು ಬಿಜೆಪಿ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ. ಇದೇ ಆಗಸ್ಟ್ 3ರಂದು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಲು ನಿರ್ಧರಿಸಿದ್ದು, ಆಗಸ್ಟ್ 10ರಂದು ಮೈಸೂರಿನಲ್ಲಿಅಂತ್ಯಗೊಳ್ಳಲಿದೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಇಂದು (ಜುಲೈ 29) ಪಕ್ಷದ ನಾಯಕರ ಸಭೆ ನಡೆಸಿ ಮಹತ್ವದ ಚರ್ಚೆ ನಡೆಸಿದರು. ಅಲ್ಲದೇ ಪಾದಯಾತ್ರೆಗೆ ಸಹಕಾರ ಪಡೆದುಕೊಂಡರು.
ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಬಿಜೆಪಿ-ಜೆಡಿಎಸ್ ಸಮಾಲೋಚಿಸಿ ಆಗಸ್ಟ್ 03ರಂದು ಮೈಸೂರಿಗೆ ಪಾದಯಾತ್ರೆ ಮಾಡಿಡುತ್ತೇವೆ. ಶನಿವಾರ ಬೆಳಗ್ಗೆ 8.30ಕ್ಕೆ ಕೆಂಗೇರಿಯ ಕೆಂಪಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭವಾಗಲಿದೆ. ಇಂದು ಸಭೆ ನಡೆಸಿ ಎಲ್ಲರ ಸಹಕಾರ ಪಡೆದಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಹೆಚ್.ಡಿ. ಕುಮಾರಸ್ವಾಮಿ, ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಉಪಸ್ಥಿತಿಯಲ್ಲಿ ಪಾದಯಾತ್ರೆಗೆ ಚಾಲನೆ ಸಿಗಲಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಪಾದಯಾತ್ರೆ: ರೂಪುರೇಷ ಸಿದ್ಧ, ಇಲ್ಲಿದೆ ರೂಟ್ಮ್ಯಾಪ್
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಮೈಸೂರು ಚಲೋ ಪಾದಯಾತ್ರೆಯ ಪೂರ್ವಭಾವಿ ಸಭೆಯನ್ನು ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷ ನಾಯಕರಾದ ಶ್ರೀ @RAshokaBJP , ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಶ್ರೀ @NswamyChalavadi , ಮಾಜಿ ಮುಖ್ಯಮಂತ್ರಿಗಳಾದ ಶ್ರೀ… pic.twitter.com/lPcY3VgNi6
— BJP Karnataka (@BJP4Karnataka) July 29, 2024
ಕೆಂಗೇರಿಯ ಕೆಂಪಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭವಾಗಲಿದ್ದು, ಪ್ರತಿನಿತ್ಯ 20 ಕಿ.ಮೀಟರ್ನಷ್ಟು ಪಾದಯಾತ್ರೆ ನಡೆಯಲಿದೆ. ಮೊದಲ ದಿನ 8 ವಿಧಾನಸಭೆ ಕ್ಷೇತ್ರಗಳ ಕಾರ್ಯಕರ್ತರು ಭಾಗವಹಿಸುತ್ತಾರೆ. 224 ವಿಧಾನಸಭೆ ಕ್ಷೇತ್ರಗಳ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ ವಿಜಯೇಂದ್ರ, ಮೊದಲ ದಿನ 8 ವಿಧಾನಸಭೆ ಕ್ಷೇತ್ರಗಳ ಕಾರ್ಯಕರ್ತರು ಭಾಗವಹಿಸುತ್ತಾರೆ. ಒಂದೊಂದು ದಿನ ಒಂದೊಂದು ಮೋರ್ಛಾ ಕಾರ್ಯಕರ್ತರು ಭಾಗವಹಿಸುತ್ತಾರೆ. ಬೆಳಗ್ಗಿನಿಂದ ಮಧ್ಯಾಹ್ನ ಒಂದು ತಂಡ, ಮಧ್ಯಾಹ್ನದಿಂದ ಸಂಜೆಯವರೆಗೆ ಮತ್ತೊಂದು ತಂಡ ಭಾಗವಹಿಸುತ್ತದೆ. ಪಾದಯಾತ್ರೆ ಯಶಸ್ವಿಗೆ ಬಿಜೆಪಿ ಮತ್ತು ಜೆಡಿಎಸ್ ನಿಂದ ಸಮನ್ವಯ ತಂಡ ಕೂಡಾ ರಚಿಸುತ್ತೇವೆ. ಇನ್ನು ಪಾದಯಾತ್ರೆ ಆಗಸ್ಟ್ 10 ರಂದು ಮುಕ್ತಾಯ ಆಗಲಿದ್ದು, ಸಮಾರೋಪ ಸಮಾವೇಶದಲ್ಲಿ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ