ಬೆಂಗಳೂರು, ಫೆಬ್ರವರಿ 7: ನಾನು ರಾಜ್ಯಾಧ್ಯಕ್ಷ ಆದ ಮೇಲೆ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ ಅವರನ್ನು ಬೇಗ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಅಂತ ಒತ್ತಡ ಇತ್ತು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲು ಹಲವು ಕಾರಣಗಳಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಹೇಳಿದ್ದಾರೆ. ನಗರದ ಮಲ್ಲೇಶ್ವರಂನಲ್ಲಿ ಆಯೋಜಿಸಿದ್ದ ಮಾಡಾಳು ಮಲ್ಲಿಕಾರ್ಜುನ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಇದ್ದಂತಹ ವಾತಾವರಣ ಮತ್ತು ಈಗ ಇರುವ ವಾತಾವರಣಕ್ಕೂ ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ.
ಮೂರು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ 20-22 ಕ್ಷೇತ್ರ ಗೆಲ್ಲುವ ವಿಶ್ವಾಸ ಇಟ್ಟುಕೊಂಡಿದ್ದರು. ನಾಲ್ಕು ತಿಂಗಳ ಬಳಿಕ ಈಗ ಎರಡು ಕ್ಷೇತ್ರ ಗೆಲ್ಲುತ್ತದೆ ಅಂತ ಕಾಂಗ್ರೆಸ್ ಮುಖಂಡರೇ ಮಾತಾಡಿಕೊಳ್ಳುತ್ತಿದ್ದಾರೆ. ಇವತ್ತು ಬದಲಾವಣೆ ಗಾಳಿ ಬೀಸಿ ಬಿಜೆಪಿ ಪರವಾದ ವಾತಾವರಣ ಇದೆ ಎಂದರು.
ನರೇಂದ್ರ ಮೋದಿ ಪರವಾದ ಅಲೆ ನೋಡುತ್ತಿದ್ದೇವೆ. ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಒಂದು ಸೀಟು ಗೆಲ್ಲಲೂ ತಡಕಾಡುವ ಪರಿಸ್ಥಿತಿ ಇದೆ. ಯಾವುದೇ ಒಂದು ಕ್ಷೇತ್ರ ಗೆಲ್ಲುತ್ತೇವೆ ಎಂಬ ವಿಶ್ವಾಸವೇ ಅವರಲ್ಲಿಲ್ಲ.
ಇದನ್ನೂ ಓದಿ: ಡಿಕೆ ಸುರೇಶ್ ಮತ್ತು ವಿನಯ್ ಕುಲಕರ್ಣಿಯನ್ನು ಉಚ್ಛಾಟಿಸಲಾಗದ ಮಲ್ಲಿಕಾರ್ಜುನ ಖರ್ಗೆ ಸ್ಥಾನ ತ್ಯಜಿಸಬೇಕು: ಕೆಎಸ್ ಈಶ್ವರಪ್ಪ
ಪಂಚರಾಜ್ಯಗಳ ಚುನಾವಣೆ, ಬಾಲರಾಮನ ಪ್ರತಿಷ್ಠಾಪನೆ ಬಳಿಕ ಇಡೀ ದೇಶದಲ್ಲೇ ಯಾವ ರೀತಿ ವಾತಾವರಣ ಬದಲಾಗಿದೆ ಅಂತ ಗಮನಿಸಿದ್ದೀರಿ. ರಾಜ್ಯದಲ್ಲಿ ಯಾವತ್ತೇ ವಿಧಾನಸಭೆ ಚುನಾವಣೆ ನಡೆಯಲಿ, ಬೇಕಾದರೆ ನಾಳೆಯೇ ನಡೆಯಲಿ 130-140 ಕ್ಷೇತ್ರ ಬಿಜೆಪಿ ಗೆಲ್ಲುವ ವಾತಾವರಣ ನಿರ್ಮಾಣ ಆಗಿದೆ ಎಂದು ಹೇಳಿದ್ದಾರೆ.
ರಾಜ್ಯಸಭೆ, ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮ ವಿಚಾರವಾಗಿ ಬಿವೈ ವಿಜಯೇಂದ್ರ ಅವರು ನಾಳೆ ಮಧ್ಯಾಹ್ನ ದೆಹಲಿಗೆ ತೆರಳಲಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಬಗ್ಗೆ ಮತ್ತು ರಾಜ್ಯಸಭೆಗೆ 2ನೇ ಅಭ್ಯರ್ಥಿ ಕಣಕ್ಕಿಳಿಸುವ ನಿರ್ಧಾರದ ಬಗ್ಗೆಯೂ ಹೈಕಮಾಂಡ್ ಜೊತೆ ಚರ್ಚೆ ಮಾಡಲಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಕಚೇರಿಯೊಳಗೆ ನುಗ್ಗಲು, ವಿಧಾನಸೌಧದ ದಕ್ಷಿಣ ದ್ವಾರಕ್ಕೆ ಬೀಗ ಹಾಕಲು ಯತ್ನಿಸಿದ ಅಶೋಕ್, ವಿಜಯೇಂದ್ರ
ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. 2023ರ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಸೋತಿದ್ದರು. ಮಲ್ಲಿಕಾರ್ಜುನ ಅವರೊಂದಿಗೆ ಮಾಜಿ ಶಾಸಕ ಗುರುಸಿದ್ದನಗೌಡ, ಡಾ.ರವಿಕುಮಾರ್ ಬಿಜೆಪಿ ಸೇರ್ಪಡೆ ಆಗಿದ್ದಾರೆ.
ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಮಾತನಾಡಿದ ಮಾಡಾಳು ಮಲ್ಲಿಕಾರ್ಜುನ, ಹಿಂದೆ ಏನೆಲ್ಲಾ ಆಗಿತ್ತು ಎಂದು ನಿಮಗೆಲ್ಲಾ ಗೊತ್ತಿದೆ. ನಾವೆಲ್ಲಾ ಪಕ್ಷವನ್ನು ಮತ್ತೆ ಸಂಘಟಿಸಬೇಕು. ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು. ವಿಜಯೇಂದ್ರ ಬಹುಕಾಲ ಸಿಎಂ ಆಗಬೇಕು. ಪಕ್ಷಕ್ಕೆ ಸೇರಿಸಿಕೊಂಡಿದ್ದಕ್ಕೆ ನಾನು ವಿಜಯೇಂದ್ರ ಅವರಿಗೆ ಚಿರಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.