ರಾಯಚೂರಿನಲ್ಲಿ ಪತ್ತೆಯಾದ ವಿಗ್ರಹಗಳೀಗ ಅನಾಥ! ಪುರಾತತ್ವ ಇಲಾಖೆ ನಿರ್ಲಕ್ಷಕ್ಕೆ ಸಾರ್ವಜನಿಕರ ಆಕ್ರೋಶ
ಗಡಿ ಜಿಲ್ಲೆ ರಾಯಚೂರಿನಲ್ಲಿ ಐತಿಹಾಸಿ ವಿಗ್ರಹಗಳು ಪತ್ತೆಯಾದ ಪ್ರಕರಣ ಸದ್ದಿಲ್ಲದೇ ಮೂಲೆಗುಂಪಾಗುವ ಲಕ್ಷಣ ಕಾಣುತ್ತಿದೆ. ಇತಿಹಾಸ ಹಿನ್ನೆಲೆಯುಳ್ಳ ಆ ಭಾಗದಲ್ಲಿ ಪತ್ತೆಯಾದ ವಿಗ್ರಹಗಳು, ಅಳಿದು ಹೋದ ಅದೆಷ್ಟೋ ಸತ್ಯ ಬಯಲು ಮಾಡುತ್ತವೆ ಎಂದು ಜನ ಕಾಯುತ್ತಿದ್ದಾರೆ. ಆದ್ರೆ, ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ವಿಗ್ರಹಗಳು ಅನಾಥವಾಗಿವೆ.
ರಾಯಚೂರು, ಫೆ.07: ಮೊನ್ನೆಯಷ್ಟೇ ರಾಯಚೂರು ಹಾಗೂ ತೆಲಂಗಾಣ ಗಡಿ ಭಾಗದ ಕೃಷ್ಣಾ ನದಿ ಒಡಲಿನಲ್ಲಿ ಐತಿಹಾಸಿ ವಿಗ್ರಹಗಳು ಪತ್ತೆಯಾಗಿದ್ದವು. ರಾಯಚೂರು ತಾಲ್ಲೂಕಿನ ದೇವಸುಗುರು(Devarsugur) ಗ್ರಾಮ ಹಾಗೂ ಸುತ್ತಲಿನ ಜನ ಸಖತ್ ಖುಷ್ ಆಗಿದ್ದರು. ಜೊತೆಗೆ ಐತಿಹಾಸಿಕ ವಿಗ್ರಹಗಳು(Idols) ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರು. ಈ ಭಾಗದಲ್ಲಿ ಒಂದೊಂದು ರೀತಿಯ ಐತಿಹಾಸಿಕ ವೈಶಿಷ್ಟ್ಯವಿರುವ ಬಗ್ಗೆ ಇತಿಹಾಸ ತಜ್ಞರು ಹೇಳಿದ್ದು, ಈ ವಿಗ್ರಹಗಳು 11 ನೇ ಶತಮಾನದ ಕಲ್ಯಾಣ ಚಾಲುಕ್ಯರಿಗೆ ಸೇರಿದೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲ, ವಿಗ್ರಹ ಸಿಕ್ಕ ಸ್ಥಳ ಹಾಗೂ ರಾಯಚೂರಿನಲ್ಲಿ ಸುಮಾರು 163 ಯುದ್ಧಗಳು ನಡೆದಿದ್ದವು. ಹೀಗಾಗಿ ಪತ್ತೆಯಾದ ವಿಗ್ರಹಗಳಿಂದ ಮಣ್ಣಲ್ಲಿ ಮಣ್ಣಾಗಿ ಹೋಗಿರುವ ಅದೆಷ್ಟೋ ಇತಿಹಾಸ ಸತ್ಯ ಹೊರಬರಹುದು ಎಂದು ಜನ ನಿರೀಕ್ಷಿಸಿದ್ದರು. ಆದರೆ, ಅಲ್ಲಾಗಿದ್ದೆ ಬೇರೆ, ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಪತ್ತೆಯಾದ ಸ್ಥಳದಲ್ಲೇ ವಿಗ್ರಹಗಳು ಅನಾಥವಾಗಿ ಬಿದ್ದಿವೆ. ಇದು ಸಾರ್ವಜನಿಕರು ಕೆರಳುವಂತೆ ಮಾಡಿದೆ.
ಈ ಹಿಂದೆ ಬಹುಮನಿ ಸುಲ್ತಾನರು ಹಿಂದು ದೇವಾಲಯಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದರಂತೆ. ಆಗ ದೇವರ ವಿಗ್ರಹಗಳನ್ನು ಪಕ್ಕದ ಕೃಷ್ಣಾ ನದಿಗೆ ಬೀಸಾಡಿರುವ ಉದಾಹರಣೆಗಳಿವೆಯಂತೆ. ಇದೇ ಕಾರಣಕ್ಕೆ ಕೃಷ್ಣಾ ನದಿಯಲ್ಲಿ ಸಿಕ್ಕ ದಶಾವತಾರದ ವಿಷ್ಣುವಿನ ವಿಗ್ರಹ ಹಾಗೂ ಶಿವಲಿಂಗ ನಮಗೆ ಸೇರಿದ್ದು ಎಂದು ರಾಜ್ಯದ ತೆಲಂಗಾಣ ಗಡಿಯ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಜಟಾಪಟಿ ಮಧ್ಯೆ ದೇವಸುಗೂರು ಗ್ರಾಮಸ್ಥರು ಒಂದು ವಿಷ್ಣುವಿನ ಶಿಲೆಯನ್ನ ತಮ್ಮೂರಿನ ರಾಮಲಿಂಗ ದೇವಾಲಯದಲ್ಲಿರಿಸಿ ಪೂಜೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ರಾಯಚೂರಿನ ಕೃಷ್ಣ ನದಿಯಲ್ಲಿ ವಿಗ್ರಹಗಳು ಪತ್ತೆ: ಅಂತಾರಾಜ್ಯ ವಿವಾದಕ್ಕೆ ಕಾರಣವಾಗುತ್ತಾ ವಿಗ್ರಹಗಳು?
ಅನಾಥವಾಗಿ ಬಿದ್ದ ವಿಷ್ಣು, ಶಿವಲಿಂಗ ವಿಗ್ರಹ
ಇತ್ತ ನದಿ ಒಡಲಲ್ಲಿ ಒಂದು ವಿಷ್ಣುವಿನ ವಿಗ್ರಹ ಹಾಗು ಶಿವಲಿಂಗ ವಿಗ್ರಹ ಈಗ ಅನಾಥವಾಗಿ ಬಿದ್ದಿವೆ. ಆ ಮಾರ್ಗದಲ್ಲಿ ಓಡಾಡುತ್ತಿರುವ ಜನರು ಅವುಗಳ ದರ್ಶನ ಪಡೆಯುತ್ತಿದ್ದಾರೆ. ಆದ್ರೆ, ಪುರಾತತ್ವ ಇಲಾಖೆ ಮಾತ್ರ ಇತ್ತ ಕಣ್ಣು ಬಿಟ್ಟು ನೋಡುತ್ತಿಲ್ಲ. ಇದರಿಂದ ಕೆರಳಿರುವ ಜನ, ಧಾರ್ಮಿಕ ಭಾವನೆಗಳಿಗೆ ಅಧಿಕಾರಿಗಳು ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಏನೇ ಇರಲಿ ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಬಗ್ಗೆ ಕ್ರಮವಹಿಸಬೇಕಿದೆ. ಪತ್ತೆಯಾದ ವಿಗ್ರಹಗಳ ಸಂಶೋಧನೆ ಮಾಡುವ ಮೂಲಕ ಐತಿಹಾಸಿಕ ಹಿನ್ನೆಲೆ ಬೆಳಕಿಗೆ ತರಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ