ವಿಚಾರಣೆಗೆ 15 ದಿನ ಕ್ವಾರಂಟೈನ್?: ‘ರಮೇಶ್ ಜಾರಕಿಹೊಳಿಗೆ ಕೊರೊನಾ ಇದೆ’ ಎಂದ ಸಚಿವ ಭೈರತಿ ಬಸವರಾಜು

ಉಪಚುನಾವಣೆ ಪ್ರಚಾರಕ್ಕೆ ಕರೆಯುವ ಸಲುವಾಗಿ ನಾನು ರಮೇಶ್ ಜಾರಕಿಹೊಳಿ ಅವರಿಗೆ ಕರೆ ಮಾಡಿದ್ದೆ. ಆದರೆ, ಅವರು ಪ್ರಚಾರಕ್ಕೆ ಬರುವುದು ಅನುಮಾನ. ನಾನು ಫೋನ್ ಮಾಡಿದ್ದಾಗ ರಮೇಶ್ ಜಾರಕಿಹೊಳಿ ಕೊರೊನಾ ಇದೆ ಎಂದು ಹೇಳಿದ್ದಾರೆ ಎನ್ನುವುದಾಗಿ ಭೈರತಿ ಬಸವರಾಜು ತಿಳಿಸಿದ್ದಾರೆ.

ವಿಚಾರಣೆಗೆ 15 ದಿನ ಕ್ವಾರಂಟೈನ್?: ‘ರಮೇಶ್ ಜಾರಕಿಹೊಳಿಗೆ ಕೊರೊನಾ ಇದೆ’ ಎಂದ ಸಚಿವ ಭೈರತಿ ಬಸವರಾಜು
ಭೈರತಿ ಬಸವರಾಜು ಮತ್ತು ರಮೇಶ್​ ಜಾರಕಿಹೊಳಿ
Updated By: ಸಾಧು ಶ್ರೀನಾಥ್​

Updated on: Apr 05, 2021 | 10:29 AM

ಬೆಳಗಾವಿ: ಅಶ್ಲೀಲ ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಇದೆ. ಹೀಗಾಗಿ ಬೈಎಲೆಕ್ಷನ್​ ಪ್ರಚಾರಕ್ಕೆ ಅವರು ಬರುವ ಸಾಧ್ಯತೆ ಕಡಿಮೆ ಎಂದು ಭೈರತಿ ಬಸವರಾಜು ಬೆಳಗಾವಿಯಲ್ಲಿ ಇದೀಗತಾನೆ ಹೇಳಿದ್ದಾರೆ. ಉಪಚುನಾವಣೆ ಪ್ರಚಾರಕ್ಕೆ ಕರೆಯುವ ಸಲುವಾಗಿ ನಾನು ರಮೇಶ್ ಜಾರಕಿಹೊಳಿ ಅವರಿಗೆ ಕರೆ ಮಾಡಿದ್ದೆ. ಆದರೆ, ಅವರು ಪ್ರಚಾರಕ್ಕೆ ಬರುವುದು ಅನುಮಾನ. ನಾನು ಫೋನ್ ಮಾಡಿದ್ದಾಗ ರಮೇಶ್ ಜಾರಕಿಹೊಳಿ ಅವರೇ ತಮಗೆ ಕೊರೊನಾ ಇರುವುದಾಗಿ ಮಾಹಿತಿ ನೀಡಿದ್ದಾರೆಂದು ಭೈರತಿ ಬಸವರಾಜು ತಿಳಿಸಿದ್ದಾರೆ.

ಸದ್ಯ ಎಸ್​ಐಟಿ ವಿಚಾರಣೆಗೂ ಅನಾರೋಗ್ಯ ನೆಪವೊಡ್ಡಿ ತಪ್ಪಿಸಿಕೊಳ್ಳುತ್ತಿರುವ ರಮೇಶ್ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ರಮೇಶ್ ಜಾರಕಿಹೊಳಿ ಉಪಚುನಾವಣೆ ಪ್ರಚಾರಕ್ಕೆ ಬರುತ್ತಾರೆ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದರು. ಆದರೆ, ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಕಾಣಿಸಿಕೊಳ್ಳುವುದು ಅನುಮಾನವಿದೆ.

ಎಸ್​​ಐಟಿ ತನಿಖೆ ಕತೆ ಏನಾಗಲಿದೆ?
ಒಂದುವೇಳೆ ಭೈರತಿ ಬಸವರಾಜು ಹೇಳಿರುವುದು ನಿಜವೇ ಆಗಿದ್ದು, ಸ್ವತಃ ರಮೇಶ್​ ಜಾರಕಿಹೊಳಿಯವರೇ ಹೇಳಿಕೊಂಡಿರುವಂತೆ ಅವರಿಗೆ ಕೊರೊನಾ ಸೋಂಕು ಇದ್ದಿದ್ದೇ ಆದಲ್ಲಿ ಎಸ್​ಐಟಿ ತನಿಖೆ ಕತೆ ಏನಾಗಲಿದೆ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಸಹಜವಾಗಿ ಉದ್ಭವಿಸುತ್ತದೆ. ಈಗಾಗಲೇ ಎಸ್​ಐಟಿ ತನಿಖಾಧಿಕಾರಿಗಳು ರಮೇಶ್​ ಜಾರಕಿಹೊಳಿಗೆ ನೋಟಿಸ್​ ನೀಡಿ ಇಂದು (ಏಪ್ರಿಲ್​ 5) ಬೆಳಗ್ಗೆ 11ರ ಒಳಗೆ ವಿಚಾರಣೆಗೆ ಹಾಜರಾಗಬೇಕೆಂದು ತಿಳಿಸಿದ್ದಾರೆ.

ಆದರೆ, ರಮೇಶ್​ ಜಾರಕಿಹೊಳಿ ತಮಗೆ ಕೊರೊನಾ ಬಂದಿದೆ ಎಂದು ಭೈರತಿ ಬಸವರಾಜು ಅವರಿಗೆ ತಿಳಿಸಿರುವುದನ್ನು ನೋಡಿದರೆ ಸದ್ಯ ಕೊರೊನಾ ನಿಯಮಾವಳಿಗಳನ್ನು ಪಾಲಿಸಿ, ಸೂಕ್ತ ಚಿಕಿತ್ಸೆ ಪಡೆದು ಮತ್ತೆ ತನಿಖೆಗೆ ಹಾಜರಾಗಲು ಕನಿಷ್ಠ 15 ದಿನಗಳಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಎಸ್​​ಐಟಿ ಅಧಿಕಾರಿಗಳು ಯಾವ ರೀತಿ ಹೆಜ್ಜೆ ಇಡಲಿದ್ದಾರೆ. ತನಿಖೆ ಯಾವ ಆಯಾಮ ಪಡೆದುಕೊಳ್ಳಲಿದೆ ಎಂಬುದು ಸದ್ಯದ ಕುತೂಹಲ.

ಇಂದು ವಿಚಾರಣೆಗೆ ಗೈರು?
ಅಶ್ಲೀಲ ಸಿಡಿ ಬಹಿರಂಗವಾದ ನಂತರ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳದ ರಮೇಶ್ ಜಾರಕಿಹೊಳಿ ಅಜ್ಞಾತ ಸ್ಥಳದಲ್ಲಿ ಇದ್ದುಕೊಂಡೇ ಪ್ರಕರಣದಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಯೋಜನೆ ರೂಪಿಸುತ್ತಿದ್ದಾರೆ. ಸದ್ಯ ಅನಾರೋಗ್ಯದ ನೆಪವನ್ನೂ ಒಡ್ಡಿರುವ ರಮೇಶ್ ಜಾರಕಿಹೊಳಿ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಅಂತೆಯೇ, ಇಂದು ಸಹ ಆರೋಗ್ಯ ಸಮಸ್ಯೆಯ ಕಾರಣ ನೀಡಿ, ವಕೀಲರ ಮೂಲಕ ಎಸ್​ಐಟಿ ಅಧಿಕಾರಿಗಳಿಗೆ ಮನವಿ ಮಾಡಲು ನಿರ್ಧರಿಸಿರುವ ರಮೇಶ್ ಜಾರಕಿಹೊಳಿ ವಿಚಾರಣೆಯಿಂದ ವಿನಾಯಿತಿ ಪಡೆಯಲಿದ್ದಾರೆ ಎನ್ನಲಾಗಿದೆ.

ಹೀಗಾಗಿ ಇಂದು ವಿಚಾರಣೆಗೆ ರಮೇಶ್ ಜಾರಕಿಹೊಳಿ ಹಾಜರಾಗುವುದು ಬಹುತೇಕ ಅನುಮಾನವಾಗಿದ್ದು, ಕಳೆದ ಎಂಟು ದಿನಗಳಿಂದ ಸಂಪರ್ಕಕ್ಕೆ ಸಿಗದ ಅವರು ತಮ್ಮ ವಕೀಲರ ಜೊತೆ ಈ ಬಗ್ಗೆ ಈಗಾಗಲೇ ಸಮಾಲೋಚನೆ ನಡೆಸಿದ್ದಾರೆ.

ಇದನ್ನೂ ಓದಿ:
ಪೂರ್ವಯೋಜಿತ ರಾಜಕೀಯ ಷಡ್ಯಂತ್ರ ಎಂದು ನಿರೂಪಿಸಲು ಬಲವಾದ ಸಾಕ್ಷ್ಯದ ಬೇಟೆಯಲ್ಲಿ ರಮೇಶ್​ ಜಾರಕಿಹೊಳಿ?

Published On - 10:15 am, Mon, 5 April 21