ಬಳ್ಳಾರಿ ನಗರದಲ್ಲಿ ನಾಯಿ ಮರಿಯೊಂದು ಪಾರ್ಕ್ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಕೆಳಗೆ ಮಲಗಿದ್ದಾಗ, ಕಾರಿನ ಮಾಲೀಕ ಅದರ ಅರಿವಿಲ್ಲದೇ ಮರಿಯ ಮೇಲೆ ಕಾರು ಹರಿಸಿದ್ದಾನೆ. ಅಪಘಾತದಲ್ಲಿ ನಾಯಿ ಮುಖ ಸಂಪೂರ್ಣ ಜಜ್ಜಿ ಹೋಗಿತ್ತು. ಬಳಿಕ ಈ ವಿಷಯವನ್ನು ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಸಂಸ್ಥೆಗೆ ತಿಳಿಸಲಾಗಿತ್ತು. ಇದೀಗ ಈ ಸಂಸ್ಥೆ ಈ ನಾಯಿಯ ಆರೈಕೆಗೆ ಮುಂದಾಗಿದ್ದು, ಮರುಜೀವ ನೀಡಿದೆ.
ಫೇಸ್ಬುಕ್ನಿಂದ ಪ್ರಸಿದ್ಧವಾದ ಈ ನಾಯಿಮರಿಗೆ ದೆಹಲಿಯ ಪ್ರಸಿದ್ಧ ಪಶು ವೈದ್ಯರ ಬಳಿ ಈ ಸಂಸ್ಥೆ ಚಿಕಿತ್ಸೆ ಕೊಡಿಸಿದೆ. ಅಲ್ಲಿಂದ ನಿಧಾನವಾಗಿ ಜೇತರಿಸಿಕೊಳ್ಳಲು ಆರಂಭಿಸಿದ ನಾಯಿಮರಿ ಮೊದಲಿನಂತಾಗಿದೆ. ನಂತರ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿದೆ. ಫೇಸ್ಬುಕ್ನಲ್ಲಿ ಈ ಕುರಿತು ಪೋಸ್ಟ್ ನೋಡಿದ ಕೆನಡಾದಲ್ಲಿ ವಾಸ ಇರುವ ಭಾರತೀಯ ಮೂಲದ ಮಹಿಳೆಯೊಬ್ಬರು, ಈ ನಾಯಿ ಮರಿಯನ್ನು ದತ್ತು ಪಡೆಯಲು ಮುಂದೆ ಬಂದಿದ್ದಾರೆ. ಅಪಘಾತದಲ್ಲಿ ಬದುಕುಳಿದು ಇದೀಗ ಕೆನಡಾಗೆ ಹೊರಡಲು ಸಿದ್ಧವಾಗಿರುವ ಈ ನಾಯಿಗೆ ಮರಿಗೆ ಅನಂತ್ಯಾ ಎಂದು ಹೆಸರಿಡಲಾಗಿದೆ.
2012ರಿಂದ ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಸಂಸ್ಥೆಯ ಮುಖಾಂತರ ನಾವು ಕೆಲಸ ಮಾಡುತ್ತಿದ್ದೇವೆ. ಸುಮಾರು 6000 ಪ್ರಾಣಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಬಿದಿ ನಾಯಿಗಳು ತೊಂದರೆಯಲ್ಲಿದ್ದರೆ ಅಂತಹ ಪ್ರಾಣಿಗಳನ್ನು ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಈ ಚಿಕಿತ್ಸೆಗಾಗಿ ಬೇರೆ ಬೇರೆ ಸಂಸ್ಥೆಗಳ ನೆರವು ಕೂಡ ಕೇಳಿದ್ದೆವು ಅದರಂತೆ ದೆಹಲಿ ಸಂಸ್ಥೆ ಅನಂತ್ಯಾ ಎಂಬ ನಾಯಿಮರಿ ಚಿಕಿತ್ಸೆಗೆ ನೆರವು ನೀಡಿದೆ ಎಂದು ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಸಂಸ್ಥೆ ಮುಖ್ಯಸ್ಥೆ ನಿಖಿತಾ ಹೇಳಿದ್ದಾರೆ.
ಇತ್ತ ಈ ನಾಯಿ ಮರಿಗೆ ಅನಂತ್ಯಾ ಎಂದು ನಾಮಕರಣ ಮಾಡಲಾಗಿದ್ದು, ಹಳೆಯ ನೋವಿನಿಂದ ಸಂಪೂರ್ಣ ಚೇತರಿಸಿಕೊಂಡಿದೆ. ಈ ನಾಯಿ ಮರಿ ಒಂದೇ ಅಲ್ಲ ನಗರದ ಸಾವಿರಾರು ಪ್ರಾಣಿಗಳ ಆರೈಕೆ ಮಾಡುವಲ್ಲಿ ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಸಂಸ್ಥೆ ಮುಂಚೂಣಿಯಲ್ಲಿದೆ. ಸಾವಿರಾರು ರೂಪಾಯಿ ವ್ಯಯಿಸಿ ವಿದೇಶಿ ತಳಿ ನಾಯಿಗಳ ಮೊರೆ ಹೋಗುವ ಮಂದಿ, ತಮ್ಮ ಕಣ್ಣೆದುರು ಆಹಾರವಿಲ್ಲದೇ ಅಲೆಯುವ ಸ್ವದೇಶಿ ತಳಿಗಳ ಬಗ್ಗೆ ಅಸಡ್ಡೆ ತೋರುವುದು ನಿಜಕ್ಕೂ ನೋವಿನ ಸಂಗತಿ. ಆದರೆ, ಇಂತಹವರ ಮಧ್ಯೆಯೂ ಯಾವುದೇ ಲಾಭವಿಲ್ಲದೆ ಪ್ರಾಣಿಗಳ ನೋವಿಗೆ ಸ್ಪಂದಿಸುವ ಕೆಲಸವನ್ನ ಈ ಸಂಸ್ಥೆ ಮಾಡುತ್ತಾ ಬರುತ್ತಿದೆ. ಈ ಸಂಸ್ಥೆಯ ಕೆಲಸ ಶ್ಲಾಘನೀಯ ಎಂದು ಶ್ವಾನಪ್ರಿಯರಾದ ಮಹ್ಮದ್ ಜಿಗಾರ್ ಹೇಳಿದ್ದಾರೆ.
ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಸಂಸ್ಥೆ ಈಗಾಗಲೇ ಬಳ್ಳಾರಿ ನಗರದಲ್ಲಿ ಸಾವಿರಾರು ಬೀದಿ ನಾಯಿಗಳನ್ನ ರಕ್ಷಣೆ ಮಾಡಿದೆ. ಜೊತೆಗೆ ಗಾಯಗೊಂಡು ರಸ್ತೆಯಲ್ಲಿರುವ ಬೀದಿ ನಾಯಿಗಳನ್ನ ತೆಗೆದುಕೊಂಡು ಬಂದು ಚಿಕಿತ್ಸೆ ನೀಡಿ ಆರೈಕೆ ಮಾಡಲಾಗುತ್ತಿದೆ. ಇಂತಹ ಬೀದಿ ನಾಯಿಮರಿಯೊಂದು ಈಗ ಚಿಕಿತ್ಸೆಯಿಂದ ಗುಣಮುಖವಾಗಿ ಕೆನಡಾಕ್ಕೆ ಹೊರಡಲು ಸಜ್ಜಾಗಿರುವುದು ನಿಜಕ್ಕೂ ಶ್ಲಾಘನೀಯ.
ಇದ್ನನೂ ಓದಿ:
ಪೊಲೀಸ್ ಶ್ವಾನಗಳಿಗೆ ಕೂಲರ್; ಬಳ್ಳಾರಿ ಶ್ವಾನ ದಳಕ್ಕೆ ವಿಶೇಷ ಉಪಚಾರ!
ಊಟ ಹಾಕಿದವನಿಗಾಗಿ 600 ಕಿ.ಮೀ ನಡೆದ ಗರ್ಭಿಣಿ ನಾಯಿ! ಇಲ್ಲಿದೆ ಮನಕಲಕುವ ಘಟನೆ
(Canadian woman adopts a street dog in Ballari and rescue under Human World For Animals Organization )