‘ಗೆದ್ದೇ ಗೆಲ್ಲುವೆ ಒಂದು ದಿನ’ ಪುಸ್ತಕ ಬರೆದು ಕ್ಯಾನ್ಸರ್ ಪೀಡಿತರಿಗೆ ಮಾದರಿಯಾದ ಮಂಡ್ಯದ ಮಹಿಳೆ
ಮಂಡ್ಯದ ಗುತ್ತಲು ಬಡಾವಣೆ ನಿವಾಸಿ ಸತ್ಯಭಾಮ ಎಂಬ 46 ವರ್ಷ ವಯಸ್ಸಿನ ಮಹಿಳೆ ತಾನು ಕ್ಯಾನ್ಸರ್ಗೆ ತುತ್ತಾದರೂ ಎದೆಗುಂದೆ ಮೂರು ವರ್ಷಗಳಿಂದ ತಾನು ಅನುಭವಿಸಿದ ಮಾನಸಿಕ ತೊಳಲಾಟವನ್ನ ‘ಗೆದ್ದೇ ಗೆಲ್ಲುವೆ ಒಂದು ದಿನ’ ಎಂಬ ಹೆಸರಿನಲ್ಲಿ ಪುಸ್ತಕವನ್ನ ಬರೆದಿದ್ದಾರೆ.
ಮಂಡ್ಯ: ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಮಹಿಳೆ ಸತ್ಯಭಾಮ. ಎಲ್ಲರಂತೆ ಆಕೆಯೂ ನೆಮ್ಮದಿಯ ಬದುಕು ಸಾಗಿಸುತ್ತಿದ್ದರು. ಹೀಗಿರುವಾಗಲೇ ಆಕೆ ಭಯಾನಕ ರೋಗಕ್ಕೆ ತುತ್ತಾದರು. ವಾಸಿಯೇ ಆಗದಂತಹ ರೋಗಕ್ಕೆ ತುತ್ತಾದ ಸಂದರ್ಭದಲ್ಲಿ ಎಲ್ಲರಂತೆ ಈಕೆಯೂ ಎದೆಗುಂದದೆ ಇತರರಿಗೆ ಮಾದರಿಯಾಗುವಂತಹ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಪ್ರತಿನಿತ್ಯ ಆತ್ಮ ವಿಶ್ವಾಸದಿಂದ ದಿನದೂಡಲಾರಂಭಿಸಿದ್ದರು. ರೋಗದಿಂದ ಇದೀಗ ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗಿದ್ದು, ತಾವು ಮೂರು ವರ್ಷದಲ್ಲಿ ಅನುಭವಿಸಿದ ಮಾನಸಿಕ ತೊಳಲಾಟವನ್ನ ‘ಗೆದ್ದೇ ಗೆಲ್ಲುವೆ ಒಂದು ದಿನ’ ಎಂಬ ಪುಸ್ತಕ ಬರೆಯುವ ಮೂಲಕ ಕ್ಯಾನ್ಸರ್ ಪೀಡಿತರಿಗೆ ಮಾದರಿಯಾಗಿದ್ದಾರೆ.
ಕ್ಯಾನ್ಸರ್ ಎಂದ ಕೂಡಲೇ ಹೆದರುವವರೇ ಹೆಚ್ಚು. ರೋಗಕ್ಕೆ ತುತ್ತಾದ ಸಂದರ್ಭದಲ್ಲಿ ರೋಗದಿಂದ ಸಾಯುವುದಕ್ಕಿಂತ ಹೆಚ್ಚಾಗಿ ಅದರ ಭಯದಲ್ಲೇ ಸಾವಿಗೀಡಾಗಿರುವವರ ಸಂಖ್ಯೆಯೂ ಹೆಚ್ಚಿದೆ. ಅಂತಹ ಜನರ ನಡುವೆ ಸತ್ಯಭಾಮ ಎಂಬುವವರು ಕ್ಯಾನ್ಸರ್ ರೋಗವನ್ನ ಗೆದ್ದು ತೋರಿಸಿದ್ದಾರೆ. ಅಲ್ಲದೇ ಕ್ಯಾನ್ಸರ್ ರೋಗಕ್ಕೆ ತುತ್ತಾದ ಸಂದರ್ಭದಲ್ಲಿ ತಾವು ಅನುಭವಿಸಿದ ಮಾನಸಿಕ ತೊಳಲಾಟವನ್ನ ಪುಸ್ತಕದ ರೂಪದಲ್ಲಿ ಹೊರ ತಂದಿದ್ದಾರೆ.
ಮಂಡ್ಯದ ಗುತ್ತಲು ಬಡಾವಣೆ ನಿವಾಸಿ ಸತ್ಯಭಾಮ ಎಂಬ 46 ವರ್ಷ ವಯಸ್ಸಿನ ಮಹಿಳೆ ತಾನು ಕ್ಯಾನ್ಸರ್ಗೆ ತುತ್ತಾದರೂ ಎದೆಗುಂದೆ ಮೂರು ವರ್ಷಗಳಿಂದ ತಾನು ಅನುಭವಿಸಿದ ಮಾನಸಿಕ ತೊಳಲಾಟವನ್ನ ‘ಗೆದ್ದೇ ಗೆಲ್ಲುವೆ ಒಂದು ದಿನ’ ಎಂಬ ಹೆಸರಿನಲ್ಲಿ ಪುಸ್ತಕವನ್ನ ಬರೆದಿದ್ದಾರೆ. ಬರೋಬರಿ 392 ಪುಟಗಳ ಪುಸ್ತಕದಲ್ಲಿ ಸತ್ಯಭಾಮ ಆರಂಭದಿಂದಲೂ ಗುಣಮುಖರಾಗುವರೆಗೆ ಅನುಭವಿಸಿದ ನೋವು, ಚಿಕಿತ್ಸೆ ಪಡೆದುಕೊಂಡ ಬಗೆ ಮನೆಯವರ ಪ್ರೋತ್ಸಾಹ ಸೇರಿದಂತೆ ಎಲ್ಲವನ್ನೂ ನಮೂದಿಸಿದ್ದಾರೆ.
ಸಿದ್ದಮರಿಯಪ್ಪ ಮತ್ತು ಕಮಲಮ್ಮ ಎಂಬ ದಂಪತಿಗಳ ಮೊದಲ ಮಗಳಾದ ಸತ್ಯಭಾಮ ಪಿಯುಸಿ ಓದಿದ ನಂತರ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ತಮ್ಮದೇ ಒಂದು ಲ್ಯಾಬ್ ಇಟ್ಟುಕೊಂಡು ಅಲ್ಲಿ ಟೆಕ್ನಿಷಿಯನ್ ಆಗಿ ಬದುಕು ಸಾಗಿಸುತ್ತಿದ್ದರು. ಹೀಗಿರುವಾಗಲೇ 2018ರ ಜನವರಿ 2 ರಂದು ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿದೆ. ಇದರಿಂದ ಎಚ್ಚೆತ್ತ ಸತ್ಯಭಾಮ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರಿಗೆ ಅಂಡಾಶಯದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಒಂದು ಆಪರೇಷನ್ ಹಾಗೂ ಮೈಸೂರಿನ ರೇಡಿಯಂಟ್ ಆಸ್ಪತ್ರೆಯಲ್ಲಿ ಎರಡು ಆಪರೇಷನ್ ಮಾಡಿಸಿಕೊಂಡು ಚಿಕಿತ್ಸೆ ಪಡೆದು ಕ್ಯಾನ್ಸರ್ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಸತ್ಯಭಾಮ ಖಾಯಿಲೆಗೆ ತುತ್ತಾದ ಸಂದರ್ಭದಲ್ಲಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ನೋವಿನಿಂದ ಹೊರ ಬಂದು ಪುಸ್ತಕ ಬರೆಯಲು ಪ್ರೇರಣೆ ನೀಡಿದವರೇ ಅವರ ಸಹೋದರಿಯರಂತೆ.
ಯಾವುದೇ ವ್ಯಕ್ತಿಗೆ ಎಂಥಹಾ ಆರೋಗ್ಯ ಸಮಸ್ಯೆ ಎದುರಾದರೂ ಅವರ ಚೇತರಿಕೆಯಲ್ಲಿ ಮನೆಯವರ ಸಹಕಾರ ಎಷ್ಟು ಮುಖ್ಯ ಎಂಬುದಕ್ಕೆ ಕ್ಯಾನ್ಸರ್ ಗೆದ್ದಿರುವ ಮಂಡ್ಯದಲ್ಲಿನ ಸತ್ಯಭಾಮ ಅವರೇ ಉದಾಹರಣೆ ಒಂದು ಕಡೆಯಾದರೆ. ಎಂಥಹಾ ರೋಗವಿದ್ದರೂ ನಾವು ನಮ್ಮ ಆತ್ಮಸ್ಥೈರ್ಯದಿಂದ ಹೋರಾಡಿ ಗೆಲ್ಲಬಹುದು ಎಂಬುದಕ್ಕೆ ಕ್ಯಾನ್ಸರ್ ಗೆದ್ದಿರುವ ಸತ್ಯಭಾಮ ಮಾದರಿಯಾಗಿದ್ದಾರೆ.
ಇದನ್ನೂ ಓದಿ
18ನೇ ವಯಸ್ಸಿನಲ್ಲಿ ಬರಸಿಡಿಲಂತೆ ಬಂದ ಕಾಯಿಲೆ: ಎದೆಗುಂದದೆ ಎಲ್ಲರಿಗೂ ಸ್ಪೂರ್ತಿಯಾಗುವ ಪುಸ್ತಕ ಬರೆದ ವಿಶೇಷ ಚೇತನ..!