ಗ್ರಾಮ ದೇವತೆ ಮೆರವಣಿಗೆ ವೇಳೆ ಗುಂಪು ಘರ್ಷಣೆ: ರಸ್ತೆಯಲ್ಲಿ ಅನಾಥವಾದ ವಿಗ್ರಹ!
ಚಿಕ್ಕಬಳ್ಳಾಪುರ ತಾಲೂಕಿನ ಎ. ಕೊತ್ತೂರು ಗ್ರಾಮದಲ್ಲಿ ಗ್ರಾಮ ದೇವತೆ ಮೆರವಣಿಗೆ ವೇಳೆ ದಲಿತರು ಮತ್ತು ಸವರ್ಣೀಯರ ನಡುವೆ ಗುಂಪು ಘರ್ಷಣೆ ನಡೆದಿದೆ. ದೇವತಾ ವಿಗ್ರಹವನ್ನು ಮುಟ್ಟದಂತೆ ಸವರ್ಣೀಯರು ತಡೆದಿದ್ದರಿಂದ ದಲಿತ ಯುವಕರು ಆಕ್ರೋಶಗೊಂಡರು. ಇದರಿಂದ ದೇವರ ವಿಗ್ರಹವನ್ನು ರಸ್ತೆ ಮಧ್ಯದಲ್ಲೇ ಬಿಟ್ಟು ತೆರಳಿದ ಸಮುದಾಯದವರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಚಿಕ್ಕಬಳ್ಳಾಪುರ, ಜನವರಿ 19: ತಾಲೂಕಿನ ಎ. ಕೊತ್ತೂರು ಗ್ರಾಮದಲ್ಲಿ ಗ್ರಾಮ ದೇವತೆಯ ಮೆರವಣಿಗೆ ವೇಳೆ ದಲಿತರು ಮತ್ತು ಸವರ್ಣೀಯರ ನಡುವೆ ತೀವ್ರ ಗುಂಪು ಘರ್ಷಣೆ ಸಂಭವಿಸಿದೆ. ಗ್ರಾಮದ ಎಲ್ಲಾ ಜಾತಿ ಸಮುದಾಯದವರು ಒಟ್ಟಾಗಿ ಚಂದಾ ವಸೂಲಿ ಮಾಡಿ, ಗಂಗಮ್ಮ ದೇವರ ಜಾತ್ರೆ ಮತ್ತು ಮೆರವಣಿಗೆಯನ್ನು ಆಯೋಜಿಸಿದ್ದರು. ಬೆಳಗ್ಗೆ ಹತ್ತು ಗಂಟೆಯಿಂದ ಗ್ರಾಮ ದೇವತೆಯ ಮೆರವಣಿಗೆ ನಡೆಯುತ್ತಿತ್ತು. ಮೆರವಣಿಗೆಯು ಸಾಗುತ್ತಿದ್ದಾಗ, ಚಂದಾ ನೀಡಿದ್ದ ದಲಿತ ಯುವಕರು ಸಹ ತಾವು ದೇವರನ್ನು ಹೊರಬೇಕು, ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಆಗ್ರಹಿಸಿ ಉತ್ಸವ ಮೆರವಣಿಗೆಯನ್ನು ಹೊರುವುದಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಕೆಲವು ಸವರ್ಣೀಯರು ಅಡ್ಡಪಡಿಸಿ, ನೀವು ದೇವರು ಮುಟ್ಟಬಾರದು ಮತ್ತು ದೇವರ ಉತ್ಸವವನ್ನು ಹೊರಬಾರದು ಎಂದು ತಡೆಯೊಡ್ಡಿದ್ದಾರೆ. ಇದು ದಲಿತ ಸಮುದಾಯದ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ. ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದು, ಅದು ಘರ್ಷಣೆಯಾಗಿ ಮಾರ್ಪಟ್ಟಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಎರಡೂ ಸಮುದಾಯದವರು ದೇವರ ವಿಗ್ರಹವನ್ನು ನಡು ರಸ್ತೆಯಲ್ಲೇ ಬಿಟ್ಟು ತೆರಳಿದ್ದಾರೆ. ಘಟನೆ ಮಾಹಿತಿ ತಿಳಿದ ತಕ್ಷಣವೇ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

