ಯಾದಗಿರಿ ಮೈಲಾರಲಿಂಗ ಜಾತ್ರೆಯಲ್ಲಿ ಹಳದಿ ಮಾರುತ: ಭಂಡಾರದೋಕುಳಿಯಲ್ಲಿ ಮುಂದೆದ್ದ ಭಕ್ತರು
ಯಾದಗಿರಿ ತಾಲೂಕಿನ ಮೈಲಾಪುರದಲ್ಲಿ ಅದ್ದೂರಿಯಾಗಿ ನಡೆದ ಮೈಲಾರಲಿಂಗನ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಭಕ್ತರು ಭಂಡಾರ ಎರಚಿ, ಜೈಘೋಷ ಹಾಕಿದರು. ಮೈಲಾರನ ಪಲ್ಲಕ್ಕಿ ಮೆರವಣಿಗೆ, ಹೊನ್ನ ಕೆರೆಯಲ್ಲಿ ಗಂಗ ಸ್ನಾನ, ಮತ್ತು ಕಬ್ಬಿಣದ ಸರಪಳಿ ತುಂಡರಿಸುವ ಸಾಹಸ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು. ಇಲ್ಲಿವೆ ಫೋಟೋಸ್.
Updated on: Jan 14, 2026 | 6:37 PM

ಯಾದಗಿರಿ ಜಿಲ್ಲೆಯ ಮೈಲಾಪುರದ ಮೈಲಾರಲಿಂಗೇಶ್ವರ ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಪ್ರಸಿದ್ಧ ದೇವಸ್ಥಾನ. ಇಂದು ಅದ್ದೂರಿಯಾಗಿ ಮೈಲಾರಲಿಂಗನ ಜಾತ್ರೆ ನಡೆಯಿತು. ಮೈಲಾರನ ಪಲ್ಲಕ್ಕಿ ಮೆರವಣಿಗೆ ವೇಳೆ ಭಕ್ತರು ಭಂಡಾರ ಎರಚುವ ಮೂಲಕ ಲಕ್ಷಾಂತರ ಭಕ್ತರು ಭಕ್ತಿ ಪರಾಕಾಷ್ಠೆ ಮೆರೆದರು.

ಪ್ರತಿ ವರ್ಷದಂತೆ ಈ ವರ್ಷ ಕೂಡ ಭಂಡಾರದ ಒಡೆಯ ಮೈಲಾರಲಿಂಗನ ಜಾತ್ರೆ ಅದ್ದೂರಿಯಾಗಿ ನಡೆಯಿತು. ಕಳೆದ ಎರಡು ದಿನಗಳ ಹಿಂದೆಯೇ ಆರಂಭವಾಗಿದ್ದ ಜಾತ್ರೆಗೆ ಇಂದು ಪ್ರಮುಖ ದಿನವಾಗಿತ್ತು. ಪ್ರತಿ ಸಂಕ್ರಮಣ ದಿನದಂದು ನಡೆಯುವ ಜಾತ್ರೆಯಾಗಿದ್ದರಿಂದ ಲಕ್ಷಾಂತರ ಭಕ್ತರು ಬಂದು ದರ್ಶನ ಪಡೆದರು.

ಬೆಳಗ್ಗೆ ದೇವಸ್ಥಾನದಿಂದ ಮೈಲಾರನ ಮೂರ್ತಿಯನ್ನ ಪಲ್ಲಿಕ್ಕಿಯಲ್ಲಿ ಕುರಿಸಿಕೊಂಡು ದೇವಸ್ಥಾನದ ಹಿಂಭಾಗದಲ್ಲಿರುವ ಹೊನ್ನ ಕೆರೆಗೆ ಗಂಗ ಸ್ನಾನಕ್ಕೆ ಅದ್ದೂರಿ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಯಿತು. ದೇವಸ್ಥಾನದಿಂದ ಕೆರೆಗೆ ಹೋಗುವ ತನಕ ಲಕ್ಷಾಂತರ ಭಕ್ತರು ಪಲ್ಲಕ್ಕಿ ಜೊತೆಗೆ ಮೈಲಾರನಿಗೆ ಘೋಷಣೆ ಹಾಕುತ್ತ ಹೆಜ್ಜೆ ಹಾಕಿದರು.

ಪಲ್ಲಿಕ್ಕಿ ಮೆರವಣಿಗೆಯನ್ನ ನೋಡುವುದ್ದಕ್ಕೆ ಸಾವಿರಾರು ಜನ ಸುತ್ತಮುತ್ತಲಿನ ಗುಡ್ಡ, ಮನೆಯ ಮಹಡಿ ಮೇಲೆ ಕುಳಿತುಕೊಂಡು ಪಲ್ಲಕ್ಕಿ ಮೇಲೆ ಭಂಡಾರವನ್ನ ಎರಚಿದರು. ಮೈಲಾರಲಿಂಗೇಶ್ವರನ ಪಲ್ಲಕ್ಕಿ ಮೇಲೆ ಕುರಿ ಮರಿಗಳನ್ನ ಎಸೆಯುವ ವಾಡಿಕೆಯಿತ್ತು. ಆದರೆ ಪ್ರಾಣಿ ಹಿಂಸೆ ನಿಷೇಧಿಸಲಾಗಿದೆ. ಇದರ ಜೊತೆಗೆ ರೈತರು ಬೆಳೆದ ಜೋಳದ ದಂಡು (ಸೊಪ್ಪೆ) ಹಾಗೂ ಕುರಿಗಳ ಉಣ್ಣೆಯನ್ನ ಪಲ್ಲಕ್ಕಿ ಮೇಲೆ ಎಸೆಯುತ್ತಿದ್ದರು. ಹೀಗೆ ಮಾಡುವುದರಿಂದ ಕುರಿಗಳಿಗೆ ಯಾವುದೇ ರೋಗ ರುಜಿನ ಬರಲ್ಲ, ಹಾಗೆ ಬೆಳೆ ಕೂಡ ಚೆನ್ನಾಗಿ ಬರುತ್ತೆ ಎನ್ನುವುದು ಭಕ್ತರ ನಂಬಿಕೆ.

ಹೊನ್ನ ಕೆರೆಯಲ್ಲಿ ಮೈಲಾರಲಿಂಗನಿಗೆ ಗಂಗ ಸ್ನಾನವನ್ನ ಮಾಡಿಕೊಂಡು ಮತ್ತೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆ ತರಲಾಗುತ್ತೆ. ಮೈಲಾರನ ಪೂಜಾರಿಗಳು ದಪ್ಪದಾದ ಕಬ್ಬಿಣದ ಸರಪಳಿಯನ್ನ ಒಂದೇ ಏಟಿಗೆ ತುಂಡರಿಸುತ್ತಾರೆ. ಇದು ಜಾತ್ರೆಯ ಪ್ರಮುಖ ವಿಶೇಷತೆ. ಇದನ್ನು ನೋಡಲು ಎರಡು ಕಣ್ಣು ಸಾಲದು.

ಮೈಲಾರ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಿಂದ ಸುಮಾರು ಐದು ಲಕ್ಷಕ್ಕೂ ಅಧಿಕ ಭಕ್ತರ ದಂಡೆ ಹರಿದು ಬಂದಿತ್ತು. ಇಂದು ಪಲ್ಲಕ್ಕಿ ಮೆರವಣಿಗೆ ಮತ್ತು ಸರಪಳಿ ತುಂಡರಿಸುವ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.