ಕಾವೇರಿ ವಿವಾದ: 48 ಗಂಟೆ ಕಾದರೂ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಭೇಟಿಗೆ ಅವಕಾಶ ನೀಡದ ಸ್ಟಾಲಿನ್
ಬೆಂಗಳೂರಿನಲ್ಲಿ ಉಂಟಾಗುತ್ತಿರುವ ಕುಡಿಯುವ ನೀರಿನ ಬಿಕ್ಕಟ್ಟು ಮತ್ತು ಕರ್ನಾಟಕದ ಬರ ಪರಿಸ್ಥಿತಿಯ ಬಗ್ಗೆ ತಮಿಳುನಾಡು ಮುಖ್ಯಮಂತ್ರಿಗೆ ತಿಳಿಸಲು ಬಯಸುತ್ತೇನೆ. ಈ ಸಮಸ್ಯೆಯನ್ನು ಪ್ರಾದೇಶಿಕ ಸಂಘರ್ಷವಲ್ಲ ಮಾನವೀಯ ಬಿಕ್ಕಟ್ಟು ಎಂದು ಪರಿಗಣಿಸಬೇಕೆಂದು ಸಿರೋಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 28: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮಧ್ಯೆ ವಿವಾದ ಜೋರಾಗಿದೆ. ತಮಿಳುನಾಡಿಗೆ ಕಾವೇರಿ ನೀರು (Cauvery Water) ಬಿಡುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್ಗೆ (Karnataka Bandh) ಕರೆ ನೀಡಿವೆ. ಈ ಮಧ್ಯೆ, ಕಾವೇರಿ ವಿಚಾರವಾಗಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಜತೆ ಮಾತುಕತೆ ನಡೆಸಲು ಬಿಜೆಪಿಯ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ (Lahar Singh Siroya) ವಿಫಲಯತ್ನ ನಡೆಸಿದ್ದಾರೆ. ಚೆನ್ನೈಗೆ ತೆರಳಿ 48 ಗಂಟೆ ಕಾದು ಕುಳಿತರೂ ಸ್ಟಾಲಿನ್ ಅವರು ಭೇಟಿಗೆ ಅವಕಾಶವೇ ನೀಡಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಗುರುವಾರ ಚೆನ್ನೈನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಲು 48 ಗಂಟೆಗಳ ಕಾಲ ಕಾದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅವರ ಜತೆ ಚರ್ಚಿಸಲು ತೆರಳಿದ್ದೆ. ಆದರೆ ಸಭೆ ನಡೆಯಲಿಲ್ಲ ಎಂದು ಲೆಹರ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವುದೇ ರಾಜಕೀಯವಿಲ್ಲದೆ ಸೌಹಾರ್ದತೆಯ ದೃಷ್ಟಿಯಿಂದ ಮಾತುಕತೆಗಾಗಿ ಚೆನ್ನೈಗೆ ತೆರಳಿದ್ದೆ ಎಂದು ಅವರು ಹೇಳಿದ್ದಾರೆ.
ಸ್ಟಾಲಿನ್ ಅವರನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೂ, ಇತರ ಡಿಎಂಕೆ ನಾಯಕರೊಂದಿಗಿನ ಮಾತುಕತೆಗಳು ‘ಅತ್ಯಂತ ಧನಾತ್ಮಕವಾಗಿತ್ತು’ ಎಂದು ಅವರು ಹೇಳಿರುವುದಾಗಿ ‘ಪಿಟಿಐ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಉಂಟಾಗುತ್ತಿರುವ ಕುಡಿಯುವ ನೀರಿನ ಬಿಕ್ಕಟ್ಟು ಮತ್ತು ಕರ್ನಾಟಕದ ಬರ ಪರಿಸ್ಥಿತಿಯ ಬಗ್ಗೆ ತಮಿಳುನಾಡು ಮುಖ್ಯಮಂತ್ರಿಗೆ ತಿಳಿಸಲು ಬಯಸುತ್ತೇನೆ. ಈ ಸಮಸ್ಯೆಯನ್ನು ಪ್ರಾದೇಶಿಕ ಸಂಘರ್ಷವಲ್ಲ ಮಾನವೀಯ ಬಿಕ್ಕಟ್ಟು ಎಂದು ಪರಿಗಣಿಸಬೇಕೆಂದು ಸಿರೋಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾನು ಚೆನ್ನೈಗೆ ಹೋಗಿ ಎರಡು ದಿನಗಳ ಕಾಲ ಸಿಎಂ ಸ್ಟಾಲಿನ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ನನ್ನ ಭೇಟಿಯು ರಾಜಕೀಯ ರಹಿತ ಸದ್ಭಾವನಾ ಧ್ಯೇಯದಿಂದ ಕೂಡಿದ್ದಾಗಿತ್ತು. ಕಾವೇರಿ ಸಮಸ್ಯೆಯನ್ನು ಪ್ರಾದೇಶಿಕ ಸಂಘರ್ಷವಾಗಿ ಪರಿಗಣಿಸದೆ ಮಾನವೀಯ ನೆಲೆಯಲ್ಲಿ ನೋಡಬೇಕಿದೆ. ದುರದೃಷ್ಟವಶಾತ್, ನಾನು 48 ಗಂಟೆಗಳ ಕಾಲ ಕಾಯುತ್ತಿದ್ದರೂ, ಎಂಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಸಿರೋಯಾ ಹೇಳಿದ್ದಾರೆ.
ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಭೇಟಿಯಾಗಿ ಚರ್ಚೆ ನಡೆಸಿದರೆ ಬಿಕ್ಕಟ್ಟಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬಹುದು ಎಂಬ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಬಂದ್ಗೆ ಬಿಗಿ ಭದ್ರತೆ; ಬಲವಂತದ ಬಂದ್ ಮಾಡಿಸಿದರೆ ಕಠಿಣ ಕ್ರಮದ ಎಚ್ಚರಿಕೆ
ಕರ್ನಾಟಕದ ರೈತರ ಹಿತದೃಷ್ಟಿಯಿಂದ ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಹಿತದೃಷ್ಟಿಯಿಂದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಟಾಲಿನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




