ಬೆಂಗಳೂರು: ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಸಿಬಿಐ ಮಂಗಳವಾರ ಮಾಜಿ ಸಚಿವ ರೋಷನ್ ಬೇಗ್ ವಿರುದ್ಧದ ಪೂರಕ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಚಾರ್ಚ್ಶೀಟ್ ಸಲ್ಲಿಸಿದ್ದು, ಅದರಲ್ಲಿ ಅಂದಿನ ಐಎಂಎ ಗ್ರೂಪ್ನ ಎಂಡಿ ಮನ್ಸೂರ್ ಖಾನ್, ರೋಶನ್ ಬೇಗ್ ಅವರ ಕಂಪನಿಯ ದಾನಿಶ್ ಪಬ್ಲಿಕೇಶನ್ಸ್ ಮತ್ತು ಇತರ ಹೆಸರುಗಳನ್ನು ಚಾರ್ಚ್ಶೀಟ್ನಲ್ಲಿ ನಮೂದಿಸಲಾಗಿದೆ.
ಪ್ರಕರಣದ ಆರೋಪಿ ಮಾಜಿ ಸಚಿವರು ಚುನಾವಣೆಯ ವೆಚ್ಚಗಳಿಗಾಗಿ ಐಎಂಎನಿಂದ ಹಲವು ಕೋಟಿ ರೂಪಾಯಿಗಳನ್ನು ಪಡೆದಿದ್ದರು. ಜೊತೆಗೆ ಆರೋಪಿಗಳು ತಮ್ಮ ಸಂಸ್ಥೆಯ ನೌಕರರ ವೇತನ ಸೇರಿದಂತೆ ದಿನನಿತ್ಯದ ಖರ್ಚಿಗೆ ಈ ಸಂಸ್ಥೆಯ ನಿಧಿಯನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಆರೋಪಿಯು ತನ್ನ ಕ್ಷೇತ್ರದಲ್ಲಿ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಣವನ್ನು ಖರ್ಚು ಮಾಡಿದ್ದಾರೆ ಎಂದು ಚಾರ್ಚ್ಶೀಟ್ನಲ್ಲಿ ಆರೋಪಿಸಲಾಗಿದೆ ಎಂದು ಸಿಬಿಐ ವಕ್ತಾರ ಆರ್.ಸಿ.ಜೋಶಿ ತಿಳಿಸಿದ್ದಾರೆ.
ಇನ್ನು ಐಎಂಎ ಗ್ರೂಪ್ ಇಸ್ಲಾಮಿಕ್ ಮಾರ್ಗಗಳನ್ನು ಅನುಸರಿಸಿ ಹೂಡಿಕೆಯ ಮೇಲೆ ಆಕರ್ಷಿಕ ಆದಾಯವನ್ನು ನೀಡುವುದಾಗಿ ನಂಬಿಸಿ ಅಮಾಯಕ ಒಂದು ಲಕ್ಷಕ್ಕೂ ಹೆಚ್ಚು ಹೂಡಿಕೆದಾರರಿಂದ 4 ಸಾವಿರ ಕೋಟಿ ಸಂಗ್ರಹಿಸಿದ್ದು ಈ ಹಣವನ್ನು ಸ್ಥಿರಾಸ್ತಿ ಮತ್ತು ಚರಾಸ್ತಿ ಖರೀದಿಗೆ, ಲಂಚ ನೀಡಲು ಮತ್ತಿತರ ಕಾನೂನುಬಾಹಿರ ಕೆಲಸಗಳಿಗೆ ಬಳಸಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ: ರೋಷನ್ ಬೇಗ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಮುಂದಿನ ವಿಚಾರಣೆವರೆಗೂ ಬಂಧಿಸದಂತೆ ಸುಪ್ರೀಂ ಕೋರ್ಟ್ ಸೂಚನೆ