ಬೆಂಗಳೂರಿನ 2ನೇ ಏರ್​ಪೋರ್ಟ್​ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದ ಕೇಂದ್ರ

Bengaluru's 2nd Airport: ‘ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಕುರಿತಾಗಿ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ. 3 ಸ್ಥಳಗಳ ಅಧ್ಯಯನ ವರದಿ ನೀಡಿದರೂ ರಾಜ್ಯ ಸರ್ಕಾರ ಉತ್ತರಿಸಿಲ್ಲ’ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ. ಇನ್ನು ದಟ್ಟಣೆ ನಿಭಾಯಿಸಲು ಟರ್ಮಿನಲ್ ವಿಸ್ತರಣೆಗೆ ಕೆಐಎಎಲ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ.

ಬೆಂಗಳೂರಿನ 2ನೇ ಏರ್​ಪೋರ್ಟ್​ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದ ಕೇಂದ್ರ
ಲೋಕಸಭೆ
Image Credit source: tv9 kannada
ಮಹೇಶ್ ಇ, ಭೂಮನಹಳ್ಳಿ Edited By:

Updated on: Jul 27, 2026 | 6:48 PM

ಮುಖ್ಯಾಂಶಗಳು

  • ಬೆಂಗಳೂರಿನ 2ನೇ ಏರ್​ಪೋರ್ಟ್​ ಬಗ್ಗೆ ಲೋಕಸಭೆಯಲ್ಲಿ ಸ್ಪಷ್ಟನೆ
  • ರಾಜ್ಯ ಸರ್ಕಾರದಿಂದ ಯಾವ್ದೇ ಪ್ರಸ್ತಾವನೆ ಬಂದಿಲ್ಲ ಎಂದ ಕೇಂದ್ರ
  • ಸಂಸದ ಪಿ.ಸಿ.ಮೋಹನ್ ಪ್ರಶ್ನೆಗೆ ಮುರಳೀಧರ್ ಮೊಹೊಲ್ ಉತ್ತರ

ಬೆಂಗಳೂರು, ಜುಲೈ 27: ಬೆಂಗಳೂರು ದಕ್ಷಿಣ ಮತ್ತು ತುಮಕೂರಿನಲ್ಲಿ ಎರಡನೇ ಏರ್​ಪೋರ್ಟ್​ ನಿಲ್ದಾಣ ನಿರ್ಮಾಣ (2nd airport proposal) ವಿಚಾರವಾಗಿ ಸ್ಥಳ ಆಯ್ಕೆ ಸಂಬಂಧ ಪೈಪೋಟಿ ಮಧ್ಯೆ ಇದೀಗ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ. ಲೋಕಸಭೆಯಲ್ಲಿ ಸಂಸದ ಪಿ.ಸಿ.ಮೋಹನ್ ಪ್ರಶ್ನೆಗೆ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೊಲ್​​​ (Murlidhar Mohol) ಈ ಬಗ್ಗೆ ಉತ್ತರ ನೀಡಿದ್ದಾರೆ.

ರಾಜ್ಯ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ ಎಂದ ಸಚಿವಾಲಯ 

ರಾಜ್ಯ ಸರ್ಕಾರದ ಕೋರಿಕೆಯಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಬೆಂಗಳೂರಿನ ಸುತ್ತಮುತ್ತಲಿನ 3 ಪ್ರಸ್ತಾಪಿತ ಸ್ಥಳಗಳಲ್ಲಿ ಪೂರ್ವ-ಸಾಧ್ಯತಾ ಅಧ್ಯಯನ ನಡೆಸಿ, ಆ ವರದಿಯನ್ನು ರಾಜ್ಯ ಸರ್ಕಾರಕ್ಕೆ ರವಾನಿಸಿತ್ತು. ಆದರೆ ಕೇಂದ್ರ ಸರ್ಕಾರದ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನೀತಿಯಡಿ ಹೊಸ ಪ್ರಸ್ತಾವನೆಯನ್ನು ಸಲ್ಲಿಸಲು ರಾಜ್ಯ ಸರ್ಕಾರದಿಂದ ಯಾವುದೇ ಉತ್ತರ ಅಥವಾ ಸ್ಪಂದನೆ ಬಂದಿಲ್ಲ ಎಂದು ಸಚಿವಾಲಯ ತಿಳಿಸಿದೆ. ರಾಜ್ಯ ಸರ್ಕಾರ ಹೊಸ ಪ್ರಸ್ತಾವನೆಯನ್ನು ಅಧಿಕೃತವಾಗಿ ಸಲ್ಲಿಸಿದ ಬಳಿಕವಷ್ಟೇ 2ನೇ ವಿಮಾನ ನಿಲ್ದಾಣದ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.

ಟರ್ಮಿನಲ್ ವಿಸ್ತರಣೆಗೆ ಮಾಸ್ಟರ್ ಪ್ಲಾನ್!

ಇನ್ನೊಂದೆಡೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿನಕ್ಕೆ ಸರಾಸರಿ 1.23 ಲಕ್ಷ ಪ್ರಯಾಣಿಕರು ಆಗಮಿಸುತ್ತಿದ್ದು, ವಾರ್ಷಿಕ 51.5 ಮಿಲಿಯನ್ (5.15 ಕೋಟಿ) ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಬೆಳೆಯುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಟರ್ಮಿನಲ್ 2ರ ಹಂತ 2ರ ವಿಸ್ತರಣೆ ಕೈಗೆತ್ತಿಕೊಳ್ಳಲು ಏರ್‌ಪೋರ್ಟ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದೆ.

ತುಮಕೂರಿನಲ್ಲೇ ವಿಮಾನ ನಿಲ್ದಾಣಕ್ಕೆ 25 ವರ್ಷಗಳಿಂದ ಒತ್ತಾಯಿಸುತ್ತಿದ್ದೇನೆ: ಪರಮೇಶ್ವರ್ 

ಇನ್ನು ಇತ್ತೀಚೆಗೆ ಈ ಕುರಿತಾಗಿ ಡಿಸಿಎಂ ಪರಮೇಶ್ವರ್ ಪ್ರತಿಕ್ರಿಸಿದ್ದು, ‘ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರಿನಲ್ಲೇ ನಿರ್ಮಿಸಬೇಕೆಂದು ನಾನು ಕಳೆದ 25 ವರ್ಷಗಳಿಂದ ಒತ್ತಾಯಿಸುತ್ತಿದ್ದೇನೆ. ಆದರೆ, ಈಗ ಬಿಡದಿ ಸೇರಿದಂತೆ ಬೇರೆ ಬೇರೆ ಸ್ಥಳಗಳನ್ನು ಗುರುತಿಸಲಾಗುತ್ತಿದೆ. ತುಮಕೂರು ರಾಜ್ಯದ ಸುಮಾರು 20 ಜಿಲ್ಲೆಗಳಿಗೆ ಹೆಬ್ಬಾಗಿಲಿದ್ದಂತೆ. ಇಲ್ಲಿ ಏರ್‌ಪೋರ್ಟ್ ನಿರ್ಮಾಣವಾದರೆ ಇಡೀ ಪ್ರದೇಶದ ಅಭಿವೃದ್ಧಿಗೆ ಹಾಗೂ ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತದೆ ಎಂದಿದ್ದರು.​​

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us