ಮಲ್ಲಯ್ಯನಪುರ ಬಳಿಯ ರಸ್ತೆ, ಹಲವು ಸೇತುವೆಗಳು ಡ್ಯಾಮೇಜ್! ಸರ್ಕಾರ ಇತ್ತ ಗಮನ ಹರಿಸುವುದೇ?
ಚಾರಾಜನಗರದಿಂದ 8 ಕಿ. ಮೀ ದೂರವಿರುವ ವೈದ್ಯಕೀಯ ವಿಜ್ಞಾನ ಕಾಲೇಜು ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹಳ್ಳ ಕೊಳ್ಳಗಳಿಂದ ಕೂಡಿದೆ. ಈ ಹೊಂಡಗಳು ಮಳೆಯಿಂದಾಗಿ ಜಲಾವೃತವಾಗಿದ್ದು ರಸ್ತೆ ಯಾವುದು ಹಳ್ಳ ಯಾವುದು ಎನ್ನುವುದೇ ತಿಳಿಯದೆ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಚಾಮರಾಜನಗರ: ಕೇಂದ್ರ ಸ್ಥಾನದಿಂದ ಗುಂಡ್ಲುಪೇಟೆ, ಬಂಡೀಪುರ, ಊಟಿ ಹಾಗೂ ಚಾಮರಾಜನಗರದಿಂದ 8 ಕಿ.ಮೀ ದೂರವಿರುವ ವೈದ್ಯಕೀಯ ವಿಜ್ಞಾನ ಕಾಲೇಜು ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು ರಸ್ತೆಯಲ್ಲಿ ಸಂಚರಿಸುವ ಜನರು ತಮ್ಮ ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಸಹ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ತಲೆ ಹಾಕುತ್ತಿಲ್ಲ. ವಾಹನ ಸವಾರರು ರಸ್ತೆಯಲ್ಲಿ ಗುಂಡಿ ಯಾವುದು ರಸ್ತೆ ಯಾವುದು ಎನ್ನುವುದೇ ತಿಳಿಯದಂತಾಗಿದ್ದು ಅನೇಕ ಜನರು ಬಿದ್ದು ಗಾಯ ಮಾಡಿಕೊಂಡಿದ್ದಾರೆ.
ಈ ರಸ್ತೆ ಹಲವು ವರ್ಷಗಳಿಂದಲೂ ಅಭಿವೃದ್ದಿ ಕಂಡಿಲ್ಲ. ಸಚಿವ ವಿ.ಸೋಮಣ್ಣ ಅವರು ಮಾತ್ರ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುತ್ತೇನೆ ಎಂದು ಬರೀ ಅಶ್ವಾಸನೆ ನೀಡುತ್ತಾರೆ. ಆದರೆ ಈವರೆಗೂ ಯಾವುದೇ ಕೆಲಸ ಆರಂಭವಾಗಿಲ್ಲ. ಅಲ್ಲದೆ ಈ ರಸ್ತೆಯಲ್ಲಿ ಆಸ್ಪತ್ರೆ ಇದ್ದು ಪ್ರತಿನಿತ್ಯ ಅನೇಕ ಅಂಬ್ಯುಲೆನ್ಸ್ಗಳು ಕೂಡ ಇಲ್ಲಿ ಸಂಚರಿಸುತ್ತವೆ. ಈ ರಸ್ತೆ ಚಿಕ್ಕದಾಗಿರುವುದರಿಂದ ತೊಂದರೆ ಆಗುತ್ತಿದೆ, ಆದಷ್ಟು ಬೇಗ ರಸ್ತೆ ಸರಿಪಡಿಸಿ ಎಂದು ಸ್ಥಳಿಯರು ಒತ್ತಾಯಿಸುತ್ತಿದ್ದಾರೆ.
ಸತತವಾಗಿ ಏಳು ತಿಂಗಳು ಮಳೆಯಾಗಿದೆ. ಮಲ್ಲಯ್ಯನಪುರ ಬಳಿಯ ರಸ್ತೆಯಷ್ಟೇ ಅಲ್ಲದೆ ಹಲವು ಸೇತುವೆಗಳು ಕೂಡ ಡ್ಯಾಮೇಜ್ ಆಗಿವೆ. ಸರ್ಕಾರ ಕೂಡಲೇ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದ್ದೇವೆ. ಸಣ್ಣ ನೀರಾವರಿ ಅಧಿಕಾರಿ, ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದೇನೆ. ಇಲ್ಲವಾದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದೇನೆ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಒಟ್ಟಾರೆ ನಿತ್ಯ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತೆ. ಗುಂಡಿ ಬಿದ್ದ ರಸ್ತೆಯಿಂದ ನಿತ್ಯ ಅನಾಹುತ ಸಂಭವಿಸುತ್ತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿ ಕಾರ್ಯ ಮಾಡುತ್ತಾರಾ ಎಂಬುದು ಕಾದುನೋಡಬೇಕಾಗಿದೆ.
ವರದಿ: ದಿಲೀಪ್ ಚೌಡಹಳ್ಳಿ, ಟಿವಿ9 ಚಾಮರಾಜನಗರ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ