ಎಚ್ಚರ…ಎಚ್ಚರ… ಚಾಮರಾಜನಗರದಲ್ಲಿ ನಕಲಿ ಹಕ್ಕುಪತ್ರ ಸೃಷ್ಟಿಸಿ ಸರ್ಕಾರಿ ಜಾಗವನ್ನೇ ಮಾರಾಟ ಮಾಡುವ ಜಾಲ ಬೆಳಕಿಗೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 27, 2022 | 6:38 PM

ಸರ್ಕಾರಿ ಜಾಗವನ್ನೇ ನಕಲಿ ಹಕ್ಕುಪತ್ರದ ಮೂಲಕ ಮಾರಾಟ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದ್ದು, ಇದರಲ್ಲಿ ಸರ್ಕಾರಿ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಅನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಎಚ್ಚರ...ಎಚ್ಚರ... ಚಾಮರಾಜನಗರದಲ್ಲಿ ನಕಲಿ ಹಕ್ಕುಪತ್ರ ಸೃಷ್ಟಿಸಿ ಸರ್ಕಾರಿ ಜಾಗವನ್ನೇ ಮಾರಾಟ ಮಾಡುವ ಜಾಲ ಬೆಳಕಿಗೆ
ಚಾಮರಾಜನಗರ
Follow us on

ಚಾಮರಾಜನಗರ: ಹನೂರಿನಿಂದ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿರುವ ಆರ್.ಎಸ್.ದೊಡ್ಡಿ ಹುಲ್ಲೇಪುರದ ಸರ್ವೇ ನಂಬರ್ 145/A ಮತ್ತು 145/B ನಲ್ಲಿ ಸುಮಾರು 7 ಎಕರೆಯಷ್ಟು ಜಾಗವಿದೆ. ಈ ಜಾಗವನ್ನು ಬಡವರಿಗೆ ನೀಡುವ ನಿವೇಶನಕ್ಕೆ ಮಂಜೂರು ಮಾಡಲಾಗಿದೆ ಎಂದು ಸುಮಾರು 138 ಕ್ಕೂ ಹೆಚ್ಚು ನಿವೇಶನದ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಾರೆ. ಇದೇ ವೇಳೆ ಈ ಮೂಲ ದಾಖಲೆಗಳನ್ನು ಪರಿಶೀಲನೆ ನಡೆಸಲು ಹೊರಟರೆ ಇಡೀ ಜಾಗಕ್ಕೆ ಮೂಲ ದಾಖಲೆಗಳೇ ಇಲ್ಲವಾಗಿದೆ. ಈ ಜಾಗವನ್ನು ರಸ್ತೆಗೆ ಬಿಟ್ಟು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ ಎನ್ನುವ ನಿಯಮ ಇದ್ದು, ಆದರೆ ಖದೀಮರು ಅದನ್ನೂ ಬಿಟ್ಟಿಲ್ಲ.

ಇನ್ನು ಈ ಜಾಗದಲ್ಲಿರುವ 138 ನಿವೇಶನಗಳ ಪೈಕಿ 69 ಖಾಲಿ ನಿವೇಶನಗಳಿವೆ. ಇನ್ನುಳಿದ 69 ನಿವೇಶನಗಳಿಗೆ ಪಟ್ಟಣ ಪಂಚಾಯಿತಿಯಿಂದ ಅಕ್ರಮವಾಗಿ ಈ ಸ್ವತ್ತು ಮಾಡಿಕೊಡಲಾಗಿದೆ. ಹನೂರಿನ ಸರ್ದಾರ್ ಎಂಬ ವ್ಯಕ್ತಿ ನಾನು ಸರ್ಕಾರಿ ನೌಕರ, ಎಲ್ಲರಿಗೂ ಕಡಿಮೆ ದುಡ್ಡಿಗೆ ಸರ್ಕಾರಿ ನಿವೇಶನವನ್ನು ಕೊಡಿಸುವುದಾಗಿ ಹೇಳಿ ಯಾಮಾರಿಸುತ್ತಿದ್ದಾನೆ. ನಾನು ಅಧಿಕಾರಿಗಳಿಗೂ ಲಂಚ ಕೊಡಬೇಕು. ಆದರೂ ಕಡಿಮೆ ಹಣಕ್ಕೆ ನಿವೇಶನ ಕೊಡಿಸುತ್ತೇನೆ. ಅಧಿಕಾರಿಗಳು ಕೂಡ ನಮ್ಮ ಹತ್ತಿರ ಶಾಮೀಲಾಗಿದ್ದಾರೆ ಎಂದು ಹೆಚ್ಚಾಗಿ ಮಹಿಳೆಯರನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಇನ್ನು ನಕಲಿ ಹಕ್ಕುಪತ್ರದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರು ಆರೋಪ ಮಾಡುತ್ತಿರುವುದು ಎಲ್ಲಾ ಸುಳ್ಳು. ದಾಖಲೆ ಕೊಟ್ಟ ನಂತರ ನಾವು ಈ ಸ್ವತ್ತು ಮಾಡಿಕೊಟ್ಟಿದ್ದೇವೆ. ಒಂದು ವೇಳೆ ಯಾರಾದರೂ ಅಕ್ರಮ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೂರ್ತಿ.

ಇದನ್ನೂ ಓದಿ:ಭೂಗರ್ಭ ಗಣಿ ಶ್ರೀಮಂತ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿಗೆ ತಿರುಗುಬಾಣ! ಇ.ಡಿ. ಉರುಳು ಸಾಧ್ಯತೆ

ಈ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿದರೆ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತೇನೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಒಟ್ಟಾರೆ ಸರ್ಕಾರದ ಜಾಗವನ್ನು ಅಕ್ರಮವಾಗಿ ನಿವೇಶನ ಸೃಷ್ಟಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಂಡು ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ಜಾಗವನ್ನು ಉಳಿಸಿಕೊಳ್ಳಲಿ ಅನ್ನುವುದು ನಮ್ಮ ಆಶಯ.

ವರದಿ: ದಿಲೀಪ್ ಚೌಡಹಳ್ಳಿ ಟಿವಿ9 ಚಾಮರಾಜನಗರ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ