ಚಾಮರಾಜನಗರ: ತನಗೆ ತಾನೇ ಬೆಂಕಿ ಹಚ್ಚಿಕೊಂಡ ಕುಡುಕ! ಮುಂದೇನಾಯ್ತು ನೋಡಿ

ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಬಸ್ತಿಪುರದಲ್ಲಿ ಕುಡಿದ ಮತ್ತಿನಲ್ಲಿ ಆನಂದ್ (45) ಎಂಬಾತ ತನ್ನ ಮೈಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದೆ. ತಕ್ಷಣ ಕಾಲುವೆಗೆ ಹಾರಿ ಪಾರಾಗಲು ಯತ್ನಿಸಿದರೂ, ಗಂಭೀರವಾಗಿ ಗಾಯಗೊಂಡಿದ್ದಾನೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಇದು ಆತ್ಮಹತ್ಯೆ ಯತ್ನವೇ ಅಥವಾ ಅಮಲಿನ ಹುಚ್ಚಾಟವೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ, ಬಾಗಲಕೋಟೆಯಲ್ಲಿ ರೈತನೊಬ್ಬ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ವರದಿಯಾಗಿದೆ.

ಚಾಮರಾಜನಗರ: ತನಗೆ ತಾನೇ ಬೆಂಕಿ ಹಚ್ಚಿಕೊಂಡ ಕುಡುಕ! ಮುಂದೇನಾಯ್ತು ನೋಡಿ
ಬೆಂಕಿ ಹಚ್ಚಿಕೊಂಡ ಕುಡುಕ

Updated on: Feb 17, 2026 | 3:10 PM

ಚಾಮರಾಜನಗರ, ಫೆ.17: ಕುಡುಕನೊಬ್ಬ ತನಗೆ ತಾನೇ ಬೆಂಕಿ ಹಚ್ಚಿಕೊಂಡ ಘಟನೆಯೊಂದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಬಸ್ತಿಪುರದಲ್ಲಿ ನಡೆದಿದೆ. ಆನಂದ್ (45) ಎಂಬ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಹುಚ್ಚಾಟ ಮೆರೆದಿದ್ದಾನೆ. ಬಸ್ತಿಪುರ ಗ್ರಾಮದ ಕಾಲುವೆ ಬಳಿ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ್ದಾನೆ. ಮದ್ಯದ ಅಮಲಿನಲ್ಲಿ ರಂಪಾಟ ಶುರು ಮಾಡಿದ್ದಾರೆ. ಅದೇನಾಯಿತೋ ತಿಳಿಯದು, ಇದ್ದಕ್ಕಿದ್ದಂತೆ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

ಮೈಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಗಾಬರಿಗೊಂಡ ಆತ ತಕ್ಷಣ ಪಕ್ಕದಲ್ಲಿದ್ದ ಕಾಲುವೆಗೆ ಹಾರಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ಆನಂದ್ ಅವರನ್ನು ತಕ್ಷಣವೇ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ ಗಾಯದ ತೀವ್ರತೆ ಹೆಚ್ಚಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈತ ಆತ್ಮಹತ್ಯೆಗೆ ಯತ್ನಿಸಿದನೇ ಅಥವಾ ಕೇವಲ ಕುಡಿತದ ಅಮಲಿನಲ್ಲಿ ಈ ರೀತಿ ಮಾಡಿದನೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 1.5 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ

ಬಾಗಲಕೋಟೆಯಲ್ಲಿ ಪ್ರತ್ಯೇಕ ಘಟನೆ:

ಕೃಷಿಗಾಗಿ ಮಾಡಿದ ಸಾಲವನ್ನು ತೀರಿಸಲಾಗದೆ ಕಂಗಾಲಾದ ರೈತನೊಬ್ಬ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಪುನರ್ವಸತಿ ಕೇಂದ್ರದಲ್ಲಿ ನಡೆದಿದೆ. ಕೊರ್ತಿ ನಿವಾಸಿ ಮಾದೇವಯ್ಯ ಹಿರೇಮಠ (39) ಎಂಬುವವರೇ ಸಾಲದ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಮಾದೇವಯ್ಯ ಅವರು ಕೃಷಿ ಚಟುವಟಿಕೆಗಳಿಗಾಗಿ ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ಇಂಡಿಯನ್ ಬ್ಯಾಂಕ್ ಸೇರಿ ಒಟ್ಟು 4 ಲಕ್ಷದ 80 ಸಾವಿರ ರೂಪಾಯಿ ಸಾಲ ಹೊಂದಿದ್ದರು ಎನ್ನಲಾಗಿದೆ. ಕಳೆದ ಕೆಲವು ಸಮಯದಿಂದ ಕೃಷಿಯಲ್ಲಿ ನಿರೀಕ್ಷಿತ ಆದಾಯ ಬಾರದೆ ಮತ್ತು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ, ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದರು. ಇದೇ ಮನಸ್ಥಾಪದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವರದಿ: ಸೂರಜ್​​ ಪ್ರಸಾದ್, ರವಿ ಮೂಕಿ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Published On - 3:07 pm, Tue, 17 February 26