ಜಮೀನಿಗೆ ಹಸು ನುಗ್ಗಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಥಳಿತ: ಮೂವರ ಬಂಧನ
ಚಾಮರಾಜನಗರದ ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ಅಮಾನವೀಯ ಘಟನೆ ನಡೆದಿದೆ. ಜಮೀನಿಗೆ ಹಸು ನುಗ್ಗಿ ಬೆಳೆ ಮೇಯ್ದಿದ್ದಕ್ಕೆ ವೃದ್ಧೆಯನ್ನ ಕಂಬಕ್ಕೆ ಕಟ್ಟಿಹಾಕಿ 2 ಗಂಟೆಗಳ ಕಾಲ ಥಳಿಸಲಾಗಿದೆ. ಈ ಕೃತ್ಯ ಎಸಗಿದ ಮಹಿಳೆ ಮತ್ತು ಅವರ ಕುಟುಂಬ ಸದಸ್ಯರನ್ನು ಹನೂರು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.

ಚಾಮರಾಜನಗರ, ಜನವರಿ 24: ವೃದ್ಧೆಯನ್ನು (Elderly Woman) ಕಂಬಕ್ಕೆ ಕಟ್ಟಿಹಾಕಿ 2 ಗಂಟೆಗಳ ಕಾಲ ಥಳಿಸಿರುವಂತಹ (Beaten) ಅಮಾನವೀಯ ಕೃತ್ಯಯೊಂದು ಜಿಲ್ಲೆಯ ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ನಡೆದಿದೆ. ಹಸು ಬೇರೆಯವರ ಜಮೀನಿಗೆ ನುಗ್ಗಿ ಪಸಲು ಹಾಳು ಮಾಡಿದಕ್ಕೆ ಕಣ್ಣಮ್ಮ ಎಂಬುವರನ್ನು ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಹಲ್ಲೆ ಮಾಡಿದ ಅಂಗಮುತ್ತು ಸೇರಿದಂತೆ ಮೂವರು ಮಹಿಳೆಯರನ್ನು ಹನೂರು ಪೊಲೀಸರು ಬಂಧಿಸಿದ್ದು, ಕೇಸ್ ದಾಖಲಿಸಿ ತನಿಖೆ ನಡೆಸಿದ್ದಾರೆ.
ನಡೆದದ್ದೇನು?
ಅಂಗಮುತ್ತು ಎಂಬುವರ ಜಮೀನಿಗೆ ಕಣ್ಣಮ್ಮ ಹಸು ನುಗ್ಗಿ ಹುರಳಿ ಫಸಲು ಮೇಯ್ದಿತ್ತು. ಹೀಗಾಗಿ ಅಂಗಮುತ್ತು ಮತ್ತು ಕುಟುಂಬ ಸದಸ್ಯರು ಕಣ್ಣಮ್ಮರನ್ನು ಕಂಬಕ್ಕೆ ಕಟ್ಟಿಹಾಕಿ ಸತತ ಎರಡು ಗಂಟೆ ಥಳಿಸಿದ್ದಾರೆ.
ಬೈಕ್ ಡಿಕ್ಕಿಯಾಗಿ ಶಾಲೆಗೆ ಹೋಗ್ತಿದ್ದ ಐವರು ವಿದ್ಯಾರ್ಥಿನಿಯರಿಗೆ ಗಾಯ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಬಳಿ ಬೈಕ್ ಡಿಕ್ಕಿಯಾಗಿ ಶಾಲೆಗೆ ಹೋಗುತ್ತಿದ್ದ ಐವರು ವಿದ್ಯಾರ್ಥಿನಿಯರಿಗೆ ಗಾಯಗಳಾಗಿರುವಂತಹ ಘಟನೆ ನಡೆದಿದೆ. ಗಾಯಾಳು ವಿದ್ಯಾರ್ಥಿನಿಯರಿಗೆ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ವಿದ್ಯಾರ್ಥಿನಿಯರು ಪಾರಾಗಿದ್ದಾರೆ.
ಇದನ್ನೂ ಓದಿ: ಚಾಲಕ ಸಮೇತ ಅಕ್ಕಿ ಲಾರಿ ಕಿಡ್ನ್ಯಾಪ್ ಮಾಡಿದ್ದ ಅಂತಾರಾಜ್ಯ ದರೋಡೆಕೋರರ ಬಂಧನ: ಲಾಕ್ ಆಗಿದ್ದೇಗೆ ಗೊತ್ತಾ?
ಸದ್ಯ ಶಾಲಾ ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆದು ವಾಪಸ್ ತೆರಳಿದ್ದಾರೆ. ಪೊಲೀಸರು ಬೈಕ್ ಜಪ್ತಿ ಮಾಡಿ ಸವಾರನನ್ನು ವಶಕ್ಕೆ ಪಡೆದಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿಯುರಿದ ಎಲೆಕ್ಟ್ರಿಕಲ್ ವಸ್ತುಗಳು: ಮನೆಯವರು ಜಸ್ಟ್ ಮಿಸ್
ಶಾರ್ಟ್ ಸರ್ಕ್ಯೂಟ್ನಿಂದ ಮನೆಯಲ್ಲಿದ್ದ ಟಿವಿ ಹಾಗೂ ಎಲೆಕ್ಟ್ರಿಕಲ್ ವಸ್ತುಗಳು ಹೊತ್ತಿ ಉರಿದಿರುವಂತಹ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಬಂಡಳ್ಳಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿದ್ದರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಸದ್ಯ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಬಂಡಳ್ಳಿಯ ಜಯಲಕ್ಷ್ಮೀ ಎಂಬುವವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಳಗ್ಗೆ ಎಂದಿನಂತೆ ಎದ್ದು ಟಿವಿ ಆನ್ ಮಾಡಿ ಕೆಲಸದಲ್ಲಿ ನಿರತರಾಗಿದ್ದಾರೆ. ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ನಿಂದ ಟಿವಿ ಹೊತ್ತಿ ಉರಿದಿದೆ. ಕುಟುಂಬಸ್ಥರು ಗಾಬರಿಯಿಂದ ಮನೆಯಿಂದ ಆಚೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.