ಗಡಿ ಜಿಲ್ಲೆ ಚಾಮರಾಜನಗರದ ರೈತರಿಗೆ ಕಾಡಾನೆ ಕಾಟ: ಬೆಳೆದ ಬೆಳೆ ಕೈಸೇರುವ ಮುನ್ನವೇ ಸರ್ವನಾಶ!

ಚಾಮರಾಜನಗರ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ರೈತರು ಬೆಳೆದ ಬೆಳೆಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತಿವೆ. ಹನೂರು ತಾಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಮತ್ತು ಮಂಚಹಳ್ಳಿ ಬಳಿ ಕಾಡಾನೆಗಳು ಟೊಮ್ಯಾಟೋ, ಜೋಳ, ಕಬ್ಬುಗಳನ್ನು ತಿಂದು ದಾಂಧಲೆ ನಡೆಸಿವೆ. ಇದರಿಂದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಡಿ ಜಿಲ್ಲೆ ಚಾಮರಾಜನಗರದ ರೈತರಿಗೆ ಕಾಡಾನೆ ಕಾಟ: ಬೆಳೆದ ಬೆಳೆ ಕೈಸೇರುವ ಮುನ್ನವೇ ಸರ್ವನಾಶ!
ಕಾಡಾನೆ ಉಪಟಳ
Image Credit source: Tv9 Kannada
Edited By:

Updated on: Mar 30, 2026 | 5:17 PM

ಚಾಮರಾಜನಗರ, ಮಾರ್ಚ್​​ 30: ಮಾನವ ಕಾಡು ಪ್ರಾಣಿ ಸಂಘರ್ಷಕ್ಕೆ ಕುಖ್ಯಾತು ಪಡೆದ ಜಿಲ್ಲೆಗಳ ಪೈಕಿ ಚಾಮರಾಜನಗರದಲ್ಲಿ ಕಾಡಾನೆಗಳ ಉಪಟಳ ಮತ್ತೆ ಹೆಚ್ಚಾಗಿದೆ. ತಡರಾತ್ರಿ ಹನೂರು ತಾಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿಗೆ ನುಗ್ಗಿ ಒಂಟಿ ಸಲಗ ದಾಂಧಲೆ ನಡೆಸಿದ್ದರೆ, ಮಂಚಹಳ್ಳಿ ಬಳಿ ಕಾಡಾನೆ ಹಿಂಡು ರೈತರು ಕಷ್ಟಪಟ್ಟು ಬೆಳೆದಿದ್ದ ಟೊಮ್ಯಾಟೋ ಬೆಳೆಯನ್ನು ಸರ್ವನಾಶ ಮಾಡಿವೆ. ಮಂಜುನಾಥ್ ಎಂಬುವವರ ಜಮೀನಿನಲ್ಲಿ ಕಟಾವು ಮಾಡಿ ಇಟ್ಟಿದ್ದ ಕ್ವಿಂಟಾಲ್​​ಗಟ್ಟಲೆ ಟೊಮ್ಯಾಟೋವನ್ನ ತಿಂದು ತೇಗಿ ಪರಾರಿಯಾಗಿವೆ. ಹೀಗಾಗಿ ಕತ್ತಲಾದರೆ ಸಾಕು ಮನೆಯಿಂದ ಹೊರಬರಲೂ ಈ ಭಾಗದ ಜನರು ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯ ಸಿಬ್ಬಂದಿಗೆ ತಿಳಿಸಿದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಕಾಡಾನೆ ಉಪಟಳದಿಂದ ನಮಗೆ ಮುಕ್ತಿ ಕೊಡಿಸಿ ಎಂದು ಗ್ರಾಮಸ್ಥರ ಮನವಿ ಮಾಡಿದ್ದಾರೆ.

ಮತ್ತೊಂದೆಡೆ ದಿನ ನಿತ್ಯ ಕತ್ತಲಾದ್ರೆ ಸಾಕು ಹನೂರು ತಾಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮಕ್ಕೆ ನುಗ್ಗುವ ಒಂಟಿ ಸಲಗ ಪುಂಡಾಟ ಮೆರೆಯುತ್ತದೆ. ಸಿಕ್ಕ ಸಿಕ್ಕ ಕಡೆ ದಾಂಗುಡಿ ಇಡುವುದು ಸಾಲದು ಎಂದು ಜಮೀನಿನಲ್ಲಿ ಬೆಳೆದಿದ್ದ ಜೋಳ, ಕಬ್ಬುಗಳನ್ನ ತಿಂದು ನಾಶ ಪಡಿಸುತ್ತಿದೆ. ದೂರು ನೀಡಿದರೂ ಅರಣ್ಯ ಇಲಾಖೆ ಅಧಿಕಾರಿಗಳ ಸ್ಪಂದಿಸದೇ ಇರೋದು ಒಂದೆಡೆಯಾದರೆ, ಬ್ಯಾರಿಕೇಡ್​​ಗಳನ್ನ ಹಾಕಿದರೂ ಅವು ಪ್ರಯೋಜನಕ್ಕೆ ಬರುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಕೃಷಿಯನ್ನೇ ನಂಬಿ ಬದುಕುತ್ತಿರುವ ಸ್ಥಳೀಯರು, ಕನಿಷ್ಠ ಜಮೀನಿಗೆ ಹೋಗೋದಾದರೂ ಹೇಗೆ? ಬೆಳೆದ ಬೆಳೆಗೆ ನೀರುಣಿಸೋದು ಸಾಧ್ಯವಾ? ಎಂದು ರೈತರು ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಜ್ಞೆ ತಪ್ಪಿತೆಂದು ಹಿಡಿಯಲು ಹೋದಾಗ ದಿಢೀರ್ ಎದ್ದು ದಾಳಿ ಮಾಡಿದ ಹುಲಿ! ಆಮೇಲಾಗಿದ್ದೇ ಬೇರೆ

ರೈತರಿಂದ ಹೋರಾಟದ ಎಚ್ಚರಿಕೆ

ಕಾಡಾನೆಗಳೂ ಸೇರಿ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಈ ಭಾಗದಲ್ಲಿ ಹೆಚ್ಚಾಗುತ್ತಿರುವ ಕಾರಣ ತುರ್ತಾಗಿ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ರೈತರು ನೀಡಿದ್ದಾರೆ. ಸಾಲ ಮಾಡಿ ಬೆಳೆದ ಬೆಳೆ ತಮ್ಮ ಕೈಸೇರುವ ಮುನ್ನವೇ ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟವಾಗುತ್ತಿರುವ ಕಾರಣ ಅರಣ್ಯ ಇಳಾಖೆ ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳಲೇ ಬೇಕು ಎಂಬ ಒತ್ತಾಯವೂ ಸ್ಥಳೀಯರಿಂದ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Follow Us