ಚಾಮರಾಜನಗರ, ಫೆ.11: ಹೊಸ ವರ್ಷಕ್ಕೆ ಕಾಲಿಟ್ಟು ಜನವರಿ ಅಂತ್ಯಗೊಂಡು, ಎರಡನೇ ತಿಂಗಳಿಗೆ ಕಾಲಿಟ್ಟಿದ್ದೇವೆ ಅಷ್ಟೇ, ಅಷ್ಟರಲ್ಲಾಗಲೇ ಒಂದು ತಿಂಗಳೊಳಗೆ ಗಡಿ ನಾಡು ಚಾಮರಾಜನಗರ(Chamarajanagara)ದಲ್ಲಿ ಬರೋಬ್ಬರಿ 19 ಅಪಘಾತ ಪ್ರಕರಣಗಳು(Accident cases) ದಾಖಲಾಗಿದ್ದು, ಅಪಘಾತದಲ್ಲಿ 26 ಮಂದಿ ಸವಾರರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಗಡಿ ನಾಡು ಚಾಮರಾಜನಗರ ಅಪಘಾತ ಪ್ರಕರಣಗಳಿಂದಲೇ ಇತ್ತೀಚಿಗೆ ಸುದ್ದಿಯಾಗುತ್ತಿದೆ. ದುರಂತವೆಂದರೆ, ಅತಿ ಹೆಚ್ಚು ಅಪಘಾತವಾಗಿ ಮೃತಪಟ್ಟಿರುವವರ ಸಂಖ್ಯೆಯಲ್ಲಿ ಬೈಕ್ ಸವಾರರೇ ಹೆಚ್ಚಾಗಿರುವುದು. ಅತಿ ಹೆಚ್ಚು ಮಂದಿ ತಲೆಗೆ ಬಲವಾಗಿ ಹೊಡೆತ ಬಿದ್ದು ಸಾವನ್ನಪ್ಪಿರುವುದಾಗಿ ವರದಿ ಹೇಳುತ್ತಿದೆ.
ಇನ್ನು ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿರುವುದಕ್ಕೂ ಒಂದು ಕಾರಣವಿದೆ. ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಸಂಚಾರ ಮಾಡಿದ್ದೆ ಈ ಸಾವುಗಳಿಗೆ ಕಾರಣವೆಂಬ ವರದಿ ಸಿಕ್ಕಿದೆ. ಒಂದು ವೇಳೆ ಸವಾರರು ಹೆಲ್ಮೆಟ್ ಧರಿಸಿದ್ದರೆ ಜೀನಹಾನಿ ಆಗುವುದನ್ನು ತಡೆಯಬಹುದಾಗಿತ್ತು. ಇನ್ನು ಅಪ್ರಾಪ್ತರು ಸಹ ಅತಿ ಹೆಚ್ಚು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಪೋಷಕರು ಅಪ್ರಾಪ್ತರ ಕೈಯಲ್ಲಿ ಬೈಕ್ ನೀಡದಂತೆ ಪೊಲೀಸ್ ಇಲಾಖೆ ಸಹ ಎಚ್ಚರಿಕೆ ನೀಡಿದ್ದು, ಪೋಷಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ:ಸಾವಿನ ರಸ್ತೆ ಆದ ಮಡಿಕೇರಿ-ಕುಶಾಲನಗರ ಹೆದ್ದಾರಿ; ಐದು ತಿಂಗಳಲ್ಲಿ 15ಕ್ಕೂ ಅಧಿಕ ಅಪಘಾತ, ನಾಲ್ವರ ಸಾವು
ಪೊಲೀಸರು ಅದೇಷ್ಟೇ ದಂಡ ವಿಧಿಸಿ, ಬುದ್ದಿ ಹೇಳಿದರೂ ಕೂಡ ಸವಾರರಿಗೆ ಮಾತ್ರ ಬುದ್ದಿ ಬರುವ ಹಾಗೇ ಕಾಣುತ್ತಿಲ್ಲ. ಹೇರ್ ಸ್ಟೈಲ್ ಹಾಳಾಗುತ್ತೆ, ಕೂದಲು ಉದುರತ್ತೆ ಎಂದು ಹೆಲ್ಮೆಟ್ ತಲೆಗೆ ಹಾಕುವ ಬದಲು ಕೈಯಲ್ಲಿ ಹಿಡಿದುಕೊಂಡು ಹೋಗುವವರೇ ಇನ್ಮೇಲಾದರೂ ಬುದ್ದಿ ಕಲಿತರೆ ಒಳಿತು. ಇಲ್ಲದೇ ಹೋದರೆ ನಿಮ್ಮ ಅಮೂಲ್ಯವಾದ ಜೀವ ಕಳೆದುಕೊಳ್ಳುವುದರ ಜೊತೆಗೆ ನಿಮ್ಮನ್ನೇ ನಂಬಿಕೊಂಡ ಜೀವಗಳು ಕಷ್ಟಪಡಬೇಕಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ