ಸಾವಿನ ರಸ್ತೆ ಆದ ಮಡಿಕೇರಿ-ಕುಶಾಲನಗರ ಹೆದ್ದಾರಿ; ಐದು ತಿಂಗಳಲ್ಲಿ 15ಕ್ಕೂ ಅಧಿಕ ಅಪಘಾತ, ನಾಲ್ವರ ಸಾವು
ಕೊಡಗು ಜಿಲ್ಲೆಗೆ ಪ್ರವಾಸ ಹೋಗುವವರು ಸ್ವಲ್ಪ ಎಚ್ಚರದಿಂದಲೇ ನೋಡಬೇಕಾದ ಸುದ್ದಿ ಇದು. ಕುಶಾಲನಗರ ದಾಟಿದ ನಂತರ ಮಡಿಕೇರಿ ತಲುಪುವ ಆ ಹಾದಿ ಅಷ್ಟೊಂದು ಸುರಕ್ಷಿತವಲ್ಲ. ರಾಷ್ಟ್ರೀಯ ಹೆದ್ದಾರಿಯಾದರೂ ಅದು ಡೆತ್ ಹೈವೇ ಎಂದೇ ಕುಖ್ಯಾತಿ ಪಡೆದಿದೆ. ಇಲ್ಲಿ ಆಗುತ್ತಿರುವ ನಿರಂತರ ಅಪಘಾತಗಳು ಮತ್ತು ಸಾವು-ನೋವುಗಳು. ಈ ರಸ್ತೆಯಲ್ಲಿ ಓಡಾಡುವುದಕ್ಕೆ ಭಯಪಡುವಂತೆ ಆಗಿದೆ.
ಕೊಡಗು, ಫೆ.09: ಮಡಿಕೇರಿಯಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ-ಕುಶಾಲನಗರ ಮಾರ್ಗ ಅಕ್ಷರಶಃ ಡೆತ್ ಹೈವೇಯಂತಾಗಿದೆ. ಕಳೆದ ಐದು ತಿಂಗಳ ಅವಧಿಯಲ್ಲಿ ಇಲ್ಲಿ 15ಕ್ಕೂ ಅಧಿಕ ಗಂಭೀರ ಅಪಘಾತಗಳಾಗಿವೆ. ಇದರಲ್ಲಿ ಮಗು ಸೇರಿದಂತೆ ನಾಲ್ವರು ಪ್ರಾಣ ತೆತ್ತಿದ್ದಾರೆ. 20ಕ್ಕೂ ಅಧಿಕ ಮಂದಿ ತೀವ್ರ ಗಾಯಗೊಂಡು, ಹಲವರೂ ಇಂದಿಗೂ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಮಡಿಕೇರಿಯಿಂದ ಕುಶಾಲನಗರವರೆಗೆ 30 ಕಿಲೋ ಮೀಟರ್ವರೆಗಿನ ರಸ್ತೆಯಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಅಪಘಾತಗಳು ಸಂಭವಿಸುತ್ತಲೇ ಇದೆ. ಈ ರಸ್ತೆಯಲ್ಲಿ ಸಂಚರಿಸುವುದಕ್ಕೆ ವಾಹನ ಸವಾರರಿಗೆ ಪ್ರಾಣ ಭಯ ಕಾಡುತ್ತಿದೆ. ತೀರಾ ಅಂಕುಡೊಂಕು ಹಾಗೂ ಕಡಿದಾದ ಏರಿಳಿತಗಳು ಇರುವುದರಿಂದ ಈ ರಸ್ತೆ ಅಪಘಾತಗಳನ್ನ ಆಹ್ವಾನಿಸುತ್ತಿದೆ. ಅದರಲ್ಲೂ ಬೋಯಿಕೇರಿ, ಕೆದಕಲ್, ಸುಂಟಿಕೊಪ್ಪ, ಆನೆಕಾಡು ಪ್ರದೇಶದಲ್ಲಿ ಗರಿಷ್ಟ ಅಪಘಾತಗಳಾಗುತ್ತಿವೆ.
ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಇನ್ನಿಲ್ಲದಂತೆ ಬೆಳೆಯುತ್ತಿದೆ. ವರ್ಷಕ್ಕೆ ಸುಮಾರು 30 ಲಕ್ಷ ಮಂದಿ ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನದಟ್ಟಣೆ ಅತಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಾದ್ರೂ ಇದು ತೀರಾ ಕಿರಿದಾದ ರಸ್ತೆ. ಅದೂ ಅಲ್ಲದೆ ಒಮದು ಕಡೆ ಬೆಟ್ಟ ಮತ್ತೊಂದು ಕಡೆ ಪ್ರಪಾತ. ಜೊತೆಗೆ ಅನಿರೀಕ್ಷಿತವಾಗಿ ಎದುರಾಗುವ ಕಡಿದಾದ ತಿರುವುಗಳು ವಾಹನ ಸವಾರರಿಗೆ ಸಿಂಹ ಸ್ವಪ್ನವಾಗಿದೆ.
ಇದನ್ನೂ ಓದಿ:ಹುಬ್ಬಳ್ಳಿ: ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ, ನಾಲ್ವರ ಸಾವು
ಇಲ್ಲಿನ ರಸ್ತೆಗಳ ಬಗ್ಗೆ ಅರಿವಿಲ್ಲದ ಹೊಸ ಚಾಲಕರು ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಅಪಘಾತವೆಸಗುತ್ತಿದ್ದಾರೆ. ಅದೂ ಸಲ್ಲದೆ, ರಸ್ತೆ ಬದಿಯ ಕಾಡು ಕಡಿಯದೇ ಇರುವುದರಿಂದ ತಿರುವುಗಳಲ್ಲಿ ರಸ್ತೆಗಳ ವಿಸಿಬಿಲಿಟಿ ಕೂಡ ಕಡಿಮೆ ಇದೆ. ಇದೂ ಕೂಡ ಅಪಘಾತಗಳಿಗೆ ಕಾರಣವಾಗಿದೆ. ಈ ರಸ್ತೆ ಮೈಸೂರಿನಿಂದ ಮಂಗಳೂರಿಗೂ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಾಗಿದೆ. ಹಾಗಾಗಿ ಇಲ್ಲಿ ಬೃಹತ್ ಟ್ಯಾಂಕರ್ಗಳು ಬುಲೆಟ್ ಲಾರಿಗಳು, ಗೂಡ್ಸ್ ವಾಹನಗಳು ಅತಿಹೆಚ್ಚು ಪ್ರಯಾಣಿಸುತ್ತವೆ. ಆದ್ರೆ ಈ ಎಲ್ಲಾ ವಾಹನಗಳು ಸಂಚರಿಸುವಂಷ್ಟು ರಸ್ತೆ ವಿಸ್ತಾರವಾಗಿಲ್ಲ. ಹಾಗಾಗಿ ಈ ರಸ್ತೆಯಲ್ಲಿ ನಿರಂತರ ಅಘಾತಗಳಾಗಿ ಚಾಲಕರು ಹಾಗೂ ಪ್ರಯಾಣಿಕರಿಗೆ ಪ್ರಾಣಭಯ ಕಾಡುತ್ತಿದೆ
ಸಧ್ಯ ದ್ವಿಪಥ ರಸ್ತೆಯಾಗಿರುವ ಇದನ್ನು ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟಕ್ಕೆ ಏರಿಸಿ ಚತುಷ್ಪಥ ರಸ್ತೆಯನ್ನಾಗಿ ಬದಲಾಯಿಸಬೇಕಿದೆ. ಆದ್ರೆ, ಮೈಸೂರಿನಿಂದ ಕುಶಾಲನಗರದವರೆಗೆ ಮಾತ್ರ ಸದ್ಯ ಚತುಷ್ಪಥ ಹೆದ್ದಾರಿ ಕಾಮಗಾರಿ ಶುರುವಾಗಿದೆ. ಅಗತ್ಯವಾಗಿ ಬೇಕಾಗಿರುವ ಕುಶಾಲನಗರ-ಸಂಪಾಜೆವರೆಗಿನ ಹೆದ್ದಾರಿ ಚತುಷ್ಪಥವಾಗುತ್ತಿಲ್ಲ. ಬೆಟ್ಟಗುಡ್ಡಗಳ ಪ್ರದೇಶ ಆಗಿರುವುದರಿಂದ ರಸ್ತೆ ವಿಸ್ತರಣೆ ಸಾಧ್ಯವಿಲ್ಲ ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಾದ. ಹಾಗಾಗಿ ಸಧ್ಯಕ್ಕಂತೂ ಡೆತ್ ಹೈವೇ ಭಯ ದೂರ ಹೋಗುವ ಲಕ್ಷಣ ಕಾಣಿಸುತ್ತಿಲ್ಲ. ಮುಂದೇನು ಎಂಬ ಚಿಂತೆಯಲ್ಲಿಯೇ ಸ್ಥಳೀಯರು ಇಲ್ಲಿ ವಾಹನ ಓಡಿಸುವ ಅನಿವಾತರ್ಯತೆಯಲ್ಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ