ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂದು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ

ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತನ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆಹಿಡಿದಿದೆ. ಪ್ರವೀಣ್ ಎಂಬ ಭಕ್ತನ ದುರಂತ ಸಾವಿನ ನಂತರ ಡ್ರೋನ್ ಮತ್ತು ಬೋನುಗಳ ಮೂಲಕ ಕಾರ್ಯಾಚರಣೆ ನಡೆಸಲಾಗಿತ್ತು. ಸದ್ಯ ರಾತ್ರಿ ಪಾದಯಾತ್ರೆಗೆ ನಿಷೇಧ ಹೇರಲಾಗಿದ್ದು, ಯಾತ್ರಿಕರು ಹಗಲಿನಲ್ಲಿ ಅಧಿಕೃತ ಸಾರಿಗೆ ಬಳಸುವಂತೆ ಸೂಚಿಸಲಾಗಿದೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂದು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ
ಚಿರತೆ ಸೆರೆ

Updated on: Jan 24, 2026 | 9:29 AM

ಚಾಮರಾಜನಗರ, ಜನವರಿ 24: ಚಾಮರಾಜನಗರ (Chamarajanagar) ಜಿಲ್ಲೆ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ (Male Mahadeshwara Hills) ಪಾದಯಾತ್ರೆ ಮಾಡುತ್ತಿದ್ದ ಭಕ್ತರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆ ನೇತೃತ್ವದಲ್ಲಿ ಡ್ರೋನ್ ಕಣ್ಗಾವಲು ನೆರವಿನೊಂದಿಗೆ ಬೋನುಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು. ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಅಭಯಾರಣ್ಯದ ಇಳಿಜಾರು ಪ್ರದೇಶದಲ್ಲಿ ಗುರುವಾರ ತಡರಾತ್ರಿ ಚಿರತೆ ಸಿಕ್ಕಿಬಿದ್ದಿದೆ.

ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ನಿವಾಸಿ ಪ್ರವೀಣ್ ಅವರ ದುರಂತ ಸಾವಿನ ನಂತರ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಬುಧವಾರ ಬೆಳಗಿನ ಜಾವ ಈ ಪ್ರವೀಣ್ ಮೇಲೆ ಚಿರತೆ ದಾಳಿ ನಡೆದಿತ್ತು. ದೇವಾಲಯದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ದಟ್ಟವಾದ ಕಾಡಿನಲ್ಲಿ ಚಿರತೆ ಅವರ ಮೇಲೆ ದಾಳಿ ಮಾಡಿತ್ತು ಎನ್ನಲಾಗಿದೆ.

ಚಿರತೆ ಸೆರೆಹಿಡಿಯುವ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಚಾಮರಾಜನಗರ ಜಿಲ್ಲಾಡಳಿತವು ಅರಣ್ಯ ಮಾರ್ಗಗಳಲ್ಲಿ ಪಾದಯಾತ್ರೆಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿತ್ತು.

ಸಂಜೆ 6 ರಿಂದ ಬೆಳಗ್ಗೆ 6ರ ವರೆಗೆ ಪಾದಯಾತ್ರೆ ನಿಷೇಧ

ಚಿರತೆ ದಾಳಿ ಘಟನೆ ಬೆನ್ನಲ್ಲೇ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೇಲೆ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಅರಣ್ಯ ಇಲಾಖೆಯು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಯಾತ್ರಿಕರು ಅಧಿಕೃತ ಸಾರಿಗೆ ಸೌಲಭ್ಯಗಳನ್ನು ಬಳಸಬೇಕು ಮತ್ತು ಸಂಚಾರವನ್ನು ಹಗಲಿನ ಸಮಯಕ್ಕೆ ಮಾತ್ರ ಸೀಮಿತಗೊಳಿಸಬೇಕು ಎಂದು ಸೂಚಿಸಲಾಗಿದೆ.

ಪಾದಯಾತ್ರೆ ಮಾಡುತ್ತಿದ್ದ ಭಕ್ತ ಚಿರತೆ ಬಾಯಿಗೆ ಬಿದ್ದಿದ್ಹೇಗೆ?

ಮಂಡ್ಯದ ಚೀರನಹಳ್ಳಿ ಹಾಗೂ ನೆರೆಯ ಗ್ರಾಮಗಳಿಂದ 150ಕ್ಕೂ ಹೆಚ್ಚು ಜನರು ಮಲೆಮಹದೇಶ್ವರ ಬೆಟ್ಟಕ್ಕೆ ಮಾದಪ್ಪನ ದರ್ಶನಕ್ಕಾಗಿ ಪಾದಯಾತ್ರೆ ತೆರಳುತ್ತಿದ್ದರು. ಪ್ರವೀಣ್ ಕುಮಾರ್ ಸಂಜೀವ್ ಸೇರಿ 5 ಜನರು ಪ್ರತ್ಯೇಕ ತಂಡದಲ್ಲಿದ್ದರು. ಜನವರಿ 21ರ ಬುಧವಾರ ಮುಂಜಾನೆ 6ಗಂಟೆ ಸುಮಾರಿಗೆ ರಂಗಸ್ವಾಮಿ ದಿಬ್ಬದ ಬಳಿ ನಡೆದು ಕೊಂಡು ಹೋಗುತ್ತಿದ್ದಾಗ ಏಕಾಏಕಿ ಚಿರತೆ ಎದುರಾಗಿದೆ. ಎಲ್ಲರೂ ಕೂಗಿಕೊಂಡು ಇಳಿಜಾರಿನ ಕಡೆ ಓಡಿದ್ದಾರೆ. ಆದರೆ, ಪ್ರವೀಣ್ ಅವರು ಸಿಕ್ಕಿಬಿದ್ದಿದ್ದಾರೆ. ಅವರ ಮೇಲೆ ಮುಗಿಬಿದ್ದ ಚಿರತೆ ಕತ್ತು ಸೀಳಿ ರಕ್ತ ಹೀರಿ ಬಳಿಕ ಕಾಡಿನೊಳಕ್ಕೆ ಎಳೆದೊಯ್ದಿದೆ.

ಇದನ್ನೂ ಓದಿ: ಹೊಸ ರೂಲ್ಸ್​: ಮಲೆ ಮಹದೇಶ್ವರಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ ಮಹತ್ವದ ಸೂಚನೆ

ಮೊಬೈಲ್ ನೆಟ್ವರ್ಕ್​ ಇಲ್ಲದ ಕಾರಣ ತಕ್ಷಣವೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲು ಪ್ರವೀಣ್ ಜತೆಯಲ್ಲಿದ್ದವರಿಂದ ಸಾಧ್ಯವಾಗಿರಲಿಲ್ಲ. ನೆಟ್​ವರ್ಕ್ ಸಿಗುವ ಜಾಗಕ್ಕೆ ತೆರಳಿ ಮಾಹಿತಿ ನೀಡಿದ ನಂತರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರವೀಣ್ ಮೃತದೇಹ ಪತ್ತೆ ಮಾಡಿದ್ದರು. ನಂತರ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ